ಬೆಂಗಳೂರು : ಅಕ್ಟೋಬರ್ 1ರಿಂದ ಹಲವು ಹಣಕಾಸು ನಿಯಮಗಳು ಬದಲಾವಣೆ ಆಗುತ್ತಿವೆ. ಅಡುಗೆ ಅನಿಲ ಸಿಲಿಂಡರ್ ಬೆಲೆ, ಎಫ್ ಡಿ ನಿಯಮಗಳ ಬದಲಾವಣೆ, ಬ್ಯಾಂಕ್ ಎಟಿಎಂ ಶುಲ್ಕಗಳು ಸೇರಿ ಹಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಕೆಲ ನಿಯಮಗಳು ಜನರಿಗೆ ಅನುಕೂಲವಾದರೆ, ಇನ್ನೂ ಕೆಲ ನಿಯಮಗಳು ಗ್ರಾಹಕರ ಜೇಬಿಗೆ ಹೊರೆಯಾಗಲಿವೆ. ಹಾಗಾದರೆ, ಅಕ್ಟೋಬರ್ 1ರಿಂದ ಯಾವೆಲ್ಲ ನಿಯಮಗಳು ಬದಲಾಗುತ್ತಿವೆ? ಜನರ ಜೀವನದ ಮೇಲೆ ಇವುಗಳ ಪರಿಣಾಮ ಏನು ಎಂಬುದರ ಮಾಹಿತಿ ಇಲ್ಲಿದೆ.
ಬ್ಯಾಂಕ್ ನಿಶ್ಚಿತ ಠೇವಣಿ
ಬ್ಯಾಂಕ್ ಗಳಲ್ಲಿ ನಿಶ್ಚಿತ ಠೇವಣಿ ಅಥವಾ ಎಫ್ ಡಿ ಇರಿಸುವವರಿಗೆ ಕೆಲ ನಿಯಮಗಳು ಬದಲಾಗಲಿವೆ. ಬಲ್ಕ್ ಅಂದರೆ, 3 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಠೇವಣಿ ಇರಿಸುವವರಿಗೆ ಬ್ಯಾಂಕಿನ ಎಲ್ಲ ಬ್ರ್ಯಾಂಚ್ ಗಳಲ್ಲೂ ಏಕರೂಪದ ಬಡ್ಡಿದರ ಘೋಷಣೆ ಮಾಡಲಾಗುತ್ತದೆ. ಹಾಗೆಯೇ, ಆಯಾ ದಿನದ ಬಡ್ಡಿದರಗಳನ್ನು ಬ್ಯಾಂಕ್ ವೆಬ್ ಸೈಟ್ ನಲ್ಲಿ ಪ್ರತಿ ದಿನ ಬೆಳಗ್ಗೆ 10 ಗಂಟೆಗೆ ಘೋಷಣೆ ಮಾಡಬೇಕು ಎಂಬ ನಿಯಮ ಜಾರಿಗೆ ತರಲಾಗುತ್ತಿದೆ.
ಎಸ್ ಬಿಐ ಎಟಿಎಂ ನಿಯಮಗಳಲ್ಲಿ ಬದಲಾವಣೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ನಿರ್ದಿಷ್ಟ ‘ಸಂಬಳದ ಖಾತೆ’ (Salary Package Account) ಗ್ರಾಹಕರಿಗೆ ಉಚಿತ ಎಟಿಎಂ ವಹಿವಾಟಿನ ಮಿತಿಯಲ್ಲಿ ಬದಲಾವಣೆ ಮಾಡುತ್ತಿದೆ. ಎಸ್ಬಿಐ ಡೆಬಿಟ್ ಕಾರ್ಡ್ ಬಳಸುವ ಸಂಬಳದ ಖಾತೆದಾರರು ಇತರೆ ಬ್ಯಾಂಕ್ ಗಳ ಎಟಿಎಂಗಳಲ್ಲಿ ತಿಂಗಳಿಗೆ ಪಡೆಯುತ್ತಿದ್ದ 10 ಉಚಿತ ವಹಿವಾಟುಗಳ ಮಿತಿಯನ್ನು 5 ವಹಿವಾಟುಗಳಿಗೆ ಇಳಿಸಲಾಗಿದೆ. ಮಿತಿಗಿಂತ ಹೆಚ್ಚು ಬಾರಿ ಹಣ ಡ್ರಾ ಮಾಡುವವರಿಗೆ ಪ್ರತಿ ವಹಿವಾಟಿಗೆ 23 ರೂಪಾಯಿ ಶುಲ್ಕ ಹಾಗೂ ಜಿಎಸ್ ಟಿ ವಿಧಿಸಲಾಗುತ್ತದೆ.
ಅಡುಗೆ ಅನಿಲ ಸಿಲಿಂಡರ್ ಬೆಲೆ
ಪ್ರತಿ ತಿಂಗಳ ಮೊದಲ ದಿನದಂದು ತೈಲ ಮಾರುಕಟ್ಟೆ ಕಂಪನಿಗಳು ಗೃಹಬಳಕೆ ಹಾಗೂ ವಾಣಿಜ್ಯ ಬಳಕೆ ಸಿಲಿಂಡರ್ ಗಳ ಬೆಲೆಗಳನ್ನು ಪರಿಷ್ಕರಣೆ ಮಾಡುತ್ತವೆ. ಬೆಲೆ ಏರಿಕೆಯಾಗಬಹುದು ಅಥವಾ ಇಳಿಕೆ ಮಾಡಬಹುದು.
ಜನನ, ಮರಣ ಪ್ರಮಾಣಪತ್ರ
ಮಗುವಿನ ಜನನ ಅಥವಾ ಮರಣದ ನಂತರ ನಿಗದಿತ ಅವಧಿಯೊಳಗೆ ನೋಂದಣಿ ಮಾಡಿಸದಿದ್ದರೆ ಪ್ರಮಾಣಪತ್ರ ಪಡೆಯಲು ಹೊಸ ಕಟ್ಟುನಿಟ್ಟಿನ ನಿಯಮಗಳು ಜಾರಿಗೆ ಬರಲಿವೆ. ಇನ್ನು ಮುಂದೆ ವಿಳಂಬ ನೋಂದಣಿಗಾಗಿ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳಿಂದ ಸೂಕ್ತ ಪರಿಶೀಲನೆ ಹಾಗೂ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ನ್ಯಾಯಬೆಲೆ ಅಂಗಡಿ ಸಮಯ
ರಾಜ್ಯ ಸರ್ಕಾರವು ನ್ಯಾಯಬೆಲೆ ಅಂಗಡಿಗಳ ಕಾರ್ಯನಿರ್ವಹಣೆಯ ಸಮಯದಲ್ಲಿ ಬದಲಾವಣೆ ಮಾಡಿದೆ. ಅಕ್ಟೋಬರ್ 1 ರಿಂದ ರೇಷನ್ ಅಂಗಡಿಗಳು ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ ತೆರೆದಿರಲಿವೆ.
ಇದನ್ನೂ ಓದಿ : ಬೆಂಗಳೂರಲ್ಲಿ ಮಳೆ ಅಬ್ಬರ ; ಮರ ಬಿದ್ದು 2 ಕಾರು ಜಖಂ.. ವಾಹನ ಸವಾರರ ಪರದಾಟ!


















