ನವದೆಹಲಿ: ಭಗವಾನ್ ಶ್ರೀರಾಮನನ್ನು ಬಿಜೆಪಿಯು ರಾಜಕೀಯ ವಸ್ತುವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆರೋಪಿಸಿದ್ದು, ಬಿಜೆಪಿಯ ರಾಮ ರಾಜಕಾರಣವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ರೆಡ್ಡಿ, ದ್ರಾವಿಡ ಸಂಸ್ಕೃತಿ ಮತ್ತು ಶಿವಾರಾಧನೆಯನ್ನು ಉಲ್ಲೇಖಿಸಿ ಬಿಜೆಪಿಯನ್ನು ಶ್ರೀಮಂತರ ಪಕ್ಷ ಎಂದು ಕರೆದಿದ್ದಾರೆ. ಈ ಹೇಳಿಕೆ ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ.
ಶ್ರೀರಾಮ ಶ್ರೀಮಂತರ ದೇವ, ಶಿವ ಬಡವರ ದೇವ: ರೇವಂತ್ ರೆಡ್ಡಿ
ದೆಹಲಿಯಲ್ಲಿ ಖಾಸಗಿ ಸುದ್ದಿವಾಹಿನಿಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ರೇವಂತ್ ರೆಡ್ಡಿ, “ನಾವು ದ್ರಾವಿಡರು, ನಮಗೆ ನಮ್ಮದೇ ಆದ ಸಂಪ್ರದಾಯ ಮತ್ತು ನಂಬಿಕೆಗಳಿವೆ. ನಾವು ಶಿವನ ಭಕ್ತರು, ಆದರೆ ಬಿಜೆಪಿಗರು ಶ್ರೀರಾಮನನ್ನು ಮಾತ್ರ ತಮ್ಮ ಗುರುತಾಗಿ ಬಿಂಬಿಸಿಕೊಳ್ಳುತ್ತಾರೆ. ಬಿಜೆಪಿ ಶ್ರೀರಾಮನನ್ನು ಒಂದು ರಾಜಕೀಯ ಸಂಕೇತವಾಗಿ ಬಳಸಿಕೊಳ್ಳುತ್ತಿದೆ” ಎಂದು ಆರೋಪಿಸಿದರು. ಅಲ್ಲದೆ, “ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಸದಾ ‘ಜೈ ಶ್ರೀರಾಮ್’ ಎನ್ನುತ್ತಾರೆಯೇ ವಿನಃ ಸಾರ್ವಜನಿಕ ವೇದಿಕೆಗಳಲ್ಲಿ ‘ಹರ್ ಹರ್ ಮಹಾದೇವ್’ ಎಂದು ಏಕೆ ಕೂಗುವುದಿಲ್ಲ? ಶಿವ ಬಡವರ ದೇವ ಹಾಗೂ ಶ್ರೀರಾಮ ಶ್ರೀಮಂತರ ದೇವ ಎಂಬ ಭಾವನೆಯಿದೆ. ಬಿಜೆಪಿ ಶ್ರೀಮಂತರ ಪಕ್ಷವಾದ್ದರಿಂದ ಅವರಿಗೆ ಶ್ರೀರಾಮನೇ ಮುಖ್ಯವಾಗಿದ್ದಾನೆ” ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್‌ನಿಂದ ದೇವರ ನಡುವೆ ವಿಭಜನೆ: ಬಂಡಿ ಸಂಜಯ್ ತಿರುಗೇಟು
ರೇವಂತ್ ರೆಡ್ಡಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಬಂಡಿ ಸಂಜಯ್, ಕಾಂಗ್ರೆಸ್ ಪಕ್ಷವು ಶ್ರೀರಾಮ ಮತ್ತು ಈಶ್ವರನ ನಡುವೆ ರಾಜಕೀಯ ಗೆರೆ ಎಳೆಯಲು ಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ತೆಲಂಗಾಣದಲ್ಲಿ ‘ದಕ್ಷಿಣ ಕಾಶಿ’ ಎಂದೇ ಪ್ರಸಿದ್ಧವಾಗಿರುವ ವೇಮುಲವಾಡ ಶಿವನ ಕ್ಷೇತ್ರ ಮತ್ತು ‘ದಕ್ಷಿಣ ಅಯೋಧ್ಯೆ’ ಎಂದೇ ಕರೆಯಲ್ಪಡುವ ಭದ್ರಾಚಲಂ ರಾಮನ ಕ್ಷೇತ್ರ ಎರಡೂ ಇವೆ ಎಂಬುದನ್ನುಮುಖ್ಯಮಂತ್ರಿಗಳು ಮರೆಯಬಾರದು ಎಂದು ಸ್ಮರಿಸಿದರು.
ಕಾಂಗ್ರೆಸ್ ವಿಷ ಕಾರುತ್ತಿದೆ ಎಂದ ಬಿಜೆಪಿ
ಉತ್ತರ-ದಕ್ಷಿಣ ಹಾಗೂ ಜಾತಿ-ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸುತ್ತಿದ್ದ ಕಾಂಗ್ರೆಸ್, ಈಗ ಶಿವ ಮತ್ತು ರಾಮನ ನಡುವೆಯೂ ವಿಭಜನೆ ತರಲು ಹೊರಟಿದೆ ಎಂದು ಬಂಡಿ ಸಂಜಯ್ ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ವಾರಣಾಸಿ ಕ್ಷೇತ್ರವು ಕಾಶಿ ವಿಶ್ವನಾಥನ (ಶಿವನ) ಪವಿತ್ರ ಭೂಮಿಯಾಗಿದೆ ಹಾಗೂ ಪ್ರಧಾನಿಯವರು ಸ್ವತಃ ಹಲವು ವೇದಿಕೆಗಳಲ್ಲಿ ‘ಹರ್ ಹರ್ ಮಹಾದೇವ್’ ಎಂದು ಜಯಘೋಷಮುಳಗಿಸಿದ್ದಾರೆ ಎಂಬುದನ್ನು ಬಂಡಿ ಸಂಜಯ್ ನೆನಪಿಸಿದ್ದು, ಹಿಂದೂಗಳು ಕಾಂಗ್ರೆಸ್‌ನ ಈ ಒಡೆದು ಆಳುವ ರಾಜಕೀಯವನ್ನು ಅರಿಯಬೇಕು ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ : ಬಿಸಿಸಿಐನಲ್ಲಿ ಹೊಸ ಜವಾಬ್ದಾರಿಗೆ ಪ್ರವೀಣ್ ಕುಮಾರ್ ಅರ್ಜಿ; ಕಿರಿಯರ ಆಯ್ಕೆ ಸಮಿತಿಯಲ್ಲಿ ಸ್ಥಾನಕ್ಕೆ ಕಣ್ಣಿಟ್ಟ ಮಾಜಿ ವೇಗಿ!


















