ವಾಷಿಂಗ್ಟನ್ : ಇರಾನ್‌ನ ಇಂಧನ ಮತ್ತು ಪೆಟ್ರೋ ಕೆಮಿಕಲ್ ಉದ್ಯಮದ ಮೂಲಕ ಹರಿದುಬರುವ ಆದಾಯದ ಮೂಲಗಳಿಗೆ ತಡೆ ನೀಡುವ ಉದ್ದೇಶದಿಂದ ಅಮೆರಿಕ ಸರ್ಕಾರವು ಭಾರತ ಮೂಲದ ನಾಲ್ಕು ಕಂಪನಿಗಳು ಹಾಗೂ ಮೂವರು ಭಾರತೀಯರ ಮೇಲೆ ಕಠಿಣ ಆರ್ಥಿಕ ದಿಗ್ಬಂಧನ ವಿಧಿಸಿದೆ. ‘ಆಪರೇಷನ್ ಎಕನಾಮಿಕ್ ಔಟ್‌ಕಾಸ್ಟ್’ ಹೆಸರಿನ ಹೊಸ ಕಾರ್ಯಾಚರಣೆಯಡಿ ಈ ಕ್ರಮ ಕೈಗೊಳ್ಳಲಾಗಿದೆ.
ಅಮೆರಿಕದ ವಿದೇಶಾಂಗ ಇಲಾಖೆಯು ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ, ಭಾರತದ ‘ಪೋರ್ಟ್‌ಈಸ್ ಪಾರ್ಟ್‌ನರ್ಸ್ ಎಲ್‌ಎಲ್‌ಪಿ’, ‘ಸದಾಶಿವ ಓವರ್‌ಸೀಸ್ ಲಿಮಿಟೆಡ್’, ‘ಪಿಪಿ ಸಾಫ್ಟ್‌ಟೆಕ್ ಪ್ರೈವೇಟ್ ಲಿಮಿಟೆಡ್’ ಹಾಗೂ ‘ಪ್ರಕೃತೀಸ್ ಇನ್ಫ್ರಾ ಇಂಪೆಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಗಳ ಮೇಲೆ ನಿಷೇಧ ಹೇರಲಾಗಿದೆ. ಇದರ ಜೊತೆಗೆ ಪೋರ್ಟ್‌ಈಸ್ ಸಂಸ್ಥೆಯ ಪಾಲುದಾರರಾದ ಹರೀಶ್ ರಾಮಚಂದ್ರ ರಂಗಿ ಮತ್ತು ಇದ್ರಿಸ್‌ಮಿಯಾ ಅಶ್ರಫ್‌ಮಿಯಾ ಶೇಖ್ ಹಾಗೂ ಪಿಪಿ ಸಾಫ್ಟ್‌ಟೆಕ್ ಸಂಸ್ಥೆಯ ಪ್ರಶಾಂತ್ ಗಾರ್ಗ್ ಅವರ ಮೇಲೆಯೂ ಅಮೆರಿಕ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ.
ಕೋಟ್ಯಂತರ ರೂಪಾಯಿ ವಹಿವಾಟು
ಕಸ್ಟಮ್ಸ್ ಬ್ರೋಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪೋರ್ಟ್‌ಈಸ್ ಪಾರ್ಟ್‌ನರ್ಸ್ ಸಂಸ್ಥೆಯು ಇರಾನ್‌ನಿಂದ ಭಾರತಕ್ಕೆ ಪೆಟ್ರೋ ಕೆಮಿಕಲ್ ಉತ್ಪನ್ನಗಳ ಆಮದಿಗೆ ನೆರವು ನೀಡಿದೆ ಎಂದು ಅಮೆರಿಕ ಆರೋಪಿಸಿದೆ. ಇನ್ನುಳಿದಂತೆ ಸದಾಶಿವ ಓವರ್‌ಸೀಸ್ ಸಂಸ್ಥೆಯು ಇರಾನ್‌ನಿಂದ ಸುಮಾರು 69 ಮಿಲಿಯನ್ ಡಾಲರ್ ಮೌಲ್ಯದ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದ್ದರೆ, ಪಿಪಿ ಸಾಫ್ಟ್‌ಟೆಕ್ ಮತ್ತು ಪ್ರಕೃತೀಸ್ ಇನ್ಫ್ರಾ ಸಂಸ್ಥೆಗಳು ತಲಾ 25 ಮಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಖರೀದಿಸಿವೆ ಎಂದು ಪ್ರಕಟಣೆ ತಿಳಿಸಿದೆ. ಇರಾನ್‌ನಿಂದ ಪೆಟ್ರೋ ಕೆಮಿಕಲ್ ಉತ್ಪನ್ನಗಳ ಖರೀದಿ, ಮಾರಾಟ, ಸಾಗಣೆ ಅಥವಾ ಮಾರುಕಟ್ಟೆ ಪ್ರಕ್ರಿಯೆಯಲ್ಲಿ ಈ ಸಂಸ್ಥೆಗಳು ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ.
ಅಮೆರಿಕದ ರಾಜತಾಂತ್ರಿಕ ನಡೆಯ ಸೂಚನೆ
ಇರಾನ್ ವಿರುದ್ಧದ ಈ ಕಠಿಣ ಆರ್ಥಿಕ ಕ್ರಮಗಳ ನಡುವೆಯೂ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಸುಧಾರಿಸುತ್ತಿರುವ ಸೂಚನೆಗಳು ಕಂಡುಬರುತ್ತಿವೆ. ಉದ್ವಿಗ್ನತೆಯ ಕಾರಣದಿಂದ ತೆರವುಗೊಳಿಸಲಾಗಿದ್ದ ಮಧ್ಯಪ್ರಾಚ್ಯದ ಕೆಲವು ರಾಜತಾಂತ್ರಿಕ ಕಚೇರಿಗಳಿಗೆ ಅಮೆರಿಕವು ತನ್ನ ಸಿಬ್ಬಂದಿಯನ್ನು ಮತ್ತೆ ನಿಯೋಜಿಸಲು ಪ್ರಾರಂಭಿಸಿದೆ. ಪ್ರಸ್ತುತ ಇರಾನ್ ಜೊತೆಗಿನ ಸಂಘರ್ಷ ತೀವ್ರಗೊಳ್ಳುವ ಸಾಧ್ಯತೆ ಕಡಿಮೆ ಇದೆ ಎಂದು ವಾಷಿಂಗ್ಟನ್ ಅಂದಾಜಿಸಿದ್ದು, ಕಚೇರಿಗಳ ಕಾರ್ಯಾಚರಣೆಯನ್ನು ಹಂತ ಹಂತವಾಗಿ ಪುನರಾರಂಭಿಸುತ್ತಿದೆ.
ಇದನ್ನೂ ಓದಿ : ಕೇಂದ್ರ ಸರ್ಕಾರದ DRDO ಸಂಸ್ಥೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ : 67 ಸಾವಿರ ರೂ. ಸ್ಯಾಲರಿ


















