ನವದೆಹಲಿ : ಮಹಿಳಾ ದೆಹಲಿ ಪ್ರೀಮಿಯರ್ ಲೀಗ್ (ಡಬ್ಲ್ಯುಡಿಪಿಎಲ್) 2026ರ ಆವೃತ್ತಿಯಲ್ಲಿ ಯುವ ಆಟಗಾರ್ತಿ ಮೇಧಾವಿ ಬಿಧುರಿ ತಮ್ಮ ವಿಭಿನ್ನವಾದ ‘6-7’ ವಿಕೆಟ್ ಸಂಭ್ರಮಾಚರಣೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ. ದೆಹಲಿಯ ಈ ಯುವ ಲೆಗ್-ಸ್ಪಿನ್ನರ್ ಇದೀಗ ಭಾರತೀಯ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ ತಮ್ಮನ್ನು ಸಾಮಾಜಿಕ ಜಾಲತಾಣದಲ್ಲಿ ಫಾಲೋ ಬ್ಯಾಕ್ ಮಾಡಬೇಕು ಎಂಬ ವಿಶೇಷ ಮನವಿಯನ್ನು ಮುಂದಿಟ್ಟಿದ್ದಾರೆ.
ಆಗಸ್ಟ್ 20ರಂದು ನಡೆದ ಸೆಂಟ್ರಲ್ ದೆಹಲಿ ಕ್ವೀನ್ಸ್ ವಿರುದ್ಧದ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಸೌತ್ ದೆಹಲಿ ಸೂಪರ್‌ಸ್ಟಾರ್ಸ್ ತಂಡದ ಆಟಗಾರ್ತಿ ನಿಶಿಕಾ ಸಿಂಗ್ ಅವರನ್ನು ಔಟ್ ಮಾಡಿದ ನಂತರ 20 ವರ್ಷದ ಮೇಧಾವಿ ಬಿಧುರಿ ಮಾಡಿದ ಸಂಭ್ರಮಾಚರಣೆ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು. ತಾವು ಧರಿಸಿದ್ದ 67ನೇ ನಂಬರ್ ಜೆರ್ಸಿಗೆ ತಕ್ಕಂತೆ ಟ್ರೆಂಡಿಂಗ್‌ನಲ್ಲಿದ್ದ ‘6-7’ ಸಂಭ್ರಮಾಚರಣೆ ಮಾಡಿದ್ದು ನೆಟ್ಟಿಗರ ಗಮನ ಸೆಳೆದಿತ್ತು. ಪಂದ್ಯದ ನಂತರ ಡಬ್ಲ್ಯುಡಿಪಿಎಲ್ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ನನಗೆ ಈಗ ಸಾಕಷ್ಟು ಫಾಲೋವರ್ಸ್ ಸಿಕ್ಕಿದ್ದಾರೆ, ಆದರೆ ವಿರಾಟ್ ಕೊಹ್ಲಿ ಅವರಿಂದ ನನಗೆ ಫಾಲೋ ಬ್ಯಾಕ್ ಬೇಕು” ಎಂದು ತಮಗೆ ಕೊಹ್ಲಿ ಮೇಲಿರುವ ಅಭಿಮಾನ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಮಿತಾಲಿ ರಾಜ್ ಆದರ್ಶ ಆಟಗಾರರು
ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಕೊಹ್ಲಿ ಮತ್ತು ಟೀಮ್ ಇಂಡಿಯಾ ಮಾಜಿ ನಾಯಕಿ ಮಿತಾಲಿ ರಾಜ್ ತಾವು ಅತಿ ಹೆಚ್ಚು ಆರಾಧಿಸುವ ಆಟಗಾರರು ಎಂದು ಬಿಧುರಿ ಬಹಿರಂಗಪಡಿಸಿದ್ದಾರೆ. ವಿರಾಟ್ ಕೊಹ್ಲಿ ಅವರು ಮೂಲತಃ ದೆಹಲಿಯವರಾದ ಕಾರಣ ಸಹಜವಾಗಿಯೇ ಅವರು ನನ್ನ ನೆಚ್ಚಿನ ಆಟಗಾರ, ಇನ್ನು ಮಿತಾಲಿ ರಾಜ್ ಅವರ ತಾಳ್ಮೆ ಮೆಚ್ಚುವಂತಹದ್ದು. ಮಿತಾಲಿ ಅವರ ಜೊತೆ ಸಾಕಷ್ಟು ಕ್ಯಾಂಪ್‌ಗಳಲ್ಲಿ ಭಾಗವಹಿಸಿದ್ದೇನೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ದೆಹಲಿಯಲ್ಲಿಯೇ ಇದ್ದರೂ ವಿರಾಟ್ ಕೊಹ್ಲಿಯನ್ನು ಭೇಟಿಯಾಗುವ ಅವಕಾಶ ಇದುವರೆಗೆ ತಮಗೆ ಸಿಕ್ಕಿಲ್ಲ ಎಂದು ಅವರು ಇದೇ ವೇಳೆ ಬೇಸರ ವ್ಯಕ್ತಪಡಿಸಿದ್ದಾರೆ.
ಆರ್‌ಸಿಬಿ ಪರ ಡಬ್ಲ್ಯುಪಿಎಲ್ ಆಡುವ ಕನಸು
ತಮ್ಮ ಇತ್ತೀಚಿನ ಜನಪ್ರಿಯತೆಯೊಂದಿಗೆ ಮಹಿಳಾ ಪ್ರೀಮಿಯರ್ ಲೀಗ್ (WPL) ಆಡುವ ಕನಸನ್ನೂ ಮೇಧಾವಿ ಹೊಂದಿದ್ದಾರೆ. 2024ರ ಡಬ್ಲ್ಯುಪಿಎಲ್ ಹರಾಜಿನಲ್ಲಿ ನೋಂದಾಯಿಸಿಕೊಂಡಿದ್ದ ಅವರು ಮುಂಬರುವ ಟೂರ್ನಿಗಳಲ್ಲಿ ಫ್ರಾಂಚೈಸಿಗಳ ಗಮನ ಸೆಳೆಯುವ ವಿಶ್ವಾಸದಲ್ಲಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಯಾವ ತಂಡದ ಪರ ಆಡಲು ಇಷ್ಟಪಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಯಾವುದೇ ತಂಡ ನನ್ನನ್ನು ಆಯ್ಕೆ ಮಾಡಿದರೂ ನನಗೆ ಖುಷಿಯೇ, ಆದರೆ ನನ್ನ ವೈಯಕ್ತಿಕ ಆಯ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB). ಏಕೆಂದರೆ ಅಲ್ಲಿ ನನಗೆ ಅನೇಕರು ಪರಿಚಯವಿದ್ದಾರೆ.
ಹಾಗೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿ ಇರುವುದು ಇದಕ್ಕೆ ಪ್ರಮುಖ ಕಾರಣ” ಎಂದಿದ್ದಾರೆ.
ದೆಹಲಿಯ ದೇಶೀಯ ಕ್ರಿಕೆಟ್ ವ್ಯವಸ್ಥೆಯಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವ ಯುವ ಪ್ರತಿಭೆ ಮೇಧಾವಿ ಬಿಧುರಿ, 19 ವರ್ಷದೊಳಗಿನವರ ವಿಭಾಗದಲ್ಲೂ ದೆಹಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ಭವಿಷ್ಯದಲ್ಲಿ ಭಾರತ ಮಹಿಳಾ ತಂಡದ ಪರ ಮಿಂಚುವ ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಥಾನ ಪಡೆಯುವ ಅವರ ಕನಸು ನನಸಾಗುವುದೇ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ : ದುಲೀಪ್ ಟ್ರೋಫಿಯಲ್ಲಿ ಭರ್ಜರಿ ಜಯ : ಇಂಡಿಯಾ ಟೆಸ್ಟ್ ತಂಡಕ್ಕೆ ಮರಳುವ ಗುರಿ ಹೊಂದಿದ ಇಶಾನ್ ಕಿಶನ್



















