ಸಿಂಗ್ರೌಲಿ (ಮಧ್ಯಪ್ರದೇಶ) : ಅಗ್ನಿಶಾಮಕ ವಾಹನವನ್ನು ಬಳಸುವುದು ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಜೀವ ಮತ್ತು ಆಸ್ತಿ ರಕ್ಷಣೆಗೆ. ಆದರೆ ಈಗ ಅದೇ ವಾಹನವನ್ನು ಶಾಸಕರ ಖಾಸಗಿ ಕಾರು ತೊಳೆಯಲು ಬಳಸಿಕೊಂಡಿರುವ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ನಡೆದಿದ್ದು, ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಸಿಂಗ್ರೌಲಿಯ ಬಿಜೆಪಿ ಶಾಸಕ ರಾಮನಗರ ರಾಮ್‌ನಿವಾಸ್ ಶಾ ಅವರ ಸರ್ಕಾರಿ ನಿವಾಸದ ಹೊರಗಡೆ ಅವರ ಟೊಯೋಟಾ ಇನೋವಾ ಕಾರನ್ನು ತೊಳೆಯಲಾಗಿದೆ. ನಗರ ಪಾಲಿಕೆಯ ಸಿಬ್ಬಂದಿ ಅಗ್ನಿಶಾಮಕ ವಾಹನದ ಪೈಪ್ ಬಳಸಿ ಕಾರಿಗೆ ನೀರು ಸಿಂಪಡಿಸುತ್ತಿರುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ಕಾಣಿಸುತ್ತಿದೆ. ತುರ್ತು ಸೇವೆಗೆ ಮೀಸಲಿಟ್ಟ ವಾಹನವನ್ನು ವೈಯಕ್ತಿಕ ಕೆಲಸಕ್ಕೆ ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ವಿಪಕ್ಷಗಳು ಹಾಗೂ ಸಾರ್ವಜನಿಕರು ಆಡಳಿತಾರೂಢ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಪಕ್ಷ ನಾಯಕರ ಖಂಡನೆ
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಮಧ್ಯಪ್ರದೇಶದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘಾರ್, “ಸಾಮಾನ್ಯ ಜನರ ಮನೆಗೆ ಬೆಂಕಿ ಬಿದ್ದಾಗ ತಲುಪದ ಅಗ್ನಿಶಾಮಕ ವಾಹನಗಳು, ಸಿಂಗ್ರೌಲಿಯಲ್ಲಿ ಶಾಸಕರ ಕಾರು ತೊಳೆಯುವ ವಾಷಿಂಗ್ ಸೆಂಟರ್ ಆಗಿ ಬದಲಾಗಿವೆ” ಎಂದು ವ್ಯಂಗ್ಯವಾಡಿದ್ದಾರೆ. ಸರ್ಕಾರಿ ಯಂತ್ರದ ದುರ್ಬಳಕೆಯ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇನ್ನು ಈ ವಿಷಯವಾಗಿ ಪ್ರತಿಕ್ರಿಯಿಸಿದ ಸಿಂಗ್ರೌಲಿ ಮಹಾನಗರ ಪಾಲಿಕೆ ಆಯುಕ್ತರಾದ ಸವಿತಾ ಪ್ರಧಾನ್, ತಮಗೆ ಈ ಘಟನೆಯ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ಶಾಸಕ ರಾಮ್‌ನಿವಾಸ್ ಶಾ ಸಮರ್ಥನೆ
ವಿವಾದ ತೀವ್ರಗೊಳ್ಳುತ್ತಿದ್ದಂತೆ ಪ್ರತಿಕ್ರಿಯಿಸಿದ ಶಾಸಕ ರಾಮ್‌ನಿವಾಸ್ ಶಾ, “ಶಾಸಕರಾದವರು ತಾವೇ ನಿಂತು ಕಾರು ತೊಳೆಯುತ್ತಾರೆಯೇ?” ಎಂದು ಪ್ರಶ್ನಿಸಿದ್ದಾರೆ. ಘಟನೆ ನಡೆದಾಗ ತಾವು ಸ್ಥಳದಲ್ಲೇ ಇರಲಿಲ್ಲ ಎಂದಿರುವ ಅವರು, “ನಾನು ಭೋಪಾಲ್‌ನಿಂದ ಹಿಂತಿರುಗಿ ಸೈಕಲ್ ವಿತರಣೆ ಮತ್ತು ಇತರ ಸಭೆಗಳಲ್ಲಿ ಭಾಗವಹಿಸುತ್ತಿದ್ದೆ. ಚಾಲಕನಿಗೆ ಕಾರನ್ನು ಬೇಗನೆ ತೆಗೆದುಕೊಂಡು ಬರಲು ಹೇಳಿದ್ದೆ. ಆ ಸಮಯದಲ್ಲಿ ಏನು ನಡೆಯಿತು ಎಂಬುದು ನನಗೆ ಗೊತ್ತಿಲ್ಲ. ಈ ಬಗ್ಗೆ ಚಾಲಕನನ್ನೇ ಕೇಳಬೇಕು” ಎಂದು ಹೇಳಿದ್ದಾರೆ. ಅಲ್ಲದೆ, ಪಾಲಿಕೆಯ ಟ್ಯಾಂಕ್‌ಗಳಲ್ಲಿ ನೀರಿನ ಅಭಾವವಿದ್ದಾಗ ಅಧಿಕಾರಿಗಳ ನಿವಾಸಕ್ಕೆ ನೀರು ಸರಬರಾಜು ಮಾಡಲು ಅಗ್ನಿಶಾಮಕ ವಾಹನ ಬಂದಿರಬಹುದು ಎಂಬ ಬೇರೊಂದು ಸಾಧ್ಯತೆಯನ್ನೂ ಶಾಸಕರು ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಸರ್ಕಾರಿ ವ್ಯವಸ್ಥೆಯ ದುರ್ಬಳಕೆ ಕುರಿತು ರಾಜ್ಯಾದ್ಯಂತ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
ಇದನ್ನೂ ಓದಿ : ‘ಟಾಕ್ಸಿಕ್’ಗೆ ಬೆಂಗಳೂರು ರೆಡ್ ಕಾರ್ಪೆಟ್ ; ಮೊದಲ ದಿನವೇ ಭರ್ಜರಿ ಗಳಿಕೆ.. ಎಷ್ಟು ಕೋಟಿ?


















