ಕಾಕಿನಾಡ : ಆಂಧ್ರಪ್ರದೇಶದ ರಾಜಮಹೇಂದ್ರವರಂನಲ್ಲಿ ಗೋದಾವರಿ ನದಿಗೆ ಜಿಗಿದು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಇಂಜಿನಿಯರ್ ಹಾಗೂ ಅವರ ಕುಟುಂಬದವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ, ರೈಫಲ್ ಶೂಟಿಂಗ್ ತರಬೇತುದಾರ ಶೇಖ್ ಸಾದಿಕ್ ಖಾನ್‌ನನ್ನು ಪೊಲೀಸರು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದಾರೆ.
ಆಗಸ್ಟ್ 16 ಮತ್ತು 17ರ ಮಧ್ಯರಾತ್ರಿ ಪಂಚಾಯತ್ ರಾಜ್ ಸಹಾಯಕ ಇಂಜಿನಿಯರ್ ತಿಳ್ಳಪುಡಿ ನೂಕರಾಜು, ಅವರ ಪತ್ನಿ ಮೀನಾ, ಮಗಳು ಸೌಜನ್ಯ ಹಾಗೂ 10 ವರ್ಷದ ಮೊಮ್ಮಗ ರಾಜಮಹೇಂದ್ರವರಂನ ರೈಲು-ರಸ್ತೆ ಸೇತುವೆಯಿಂದ ಗೋದಾವರಿ ನದಿಗೆ ಜಿಗಿದಿದ್ದರು. ಆ ಸಮಯದಲ್ಲಿ ಮೀನುಗಾರರು ಸಮಯಪ್ರಜ್ಞೆ ಮೆರೆದು 10 ವರ್ಷದ ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾದರೆ, ನೂಕರಾಜು ಸೇರಿದಂತೆ ಕುಟುಂಬದ ಮೂವರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದರು.
ಡೆತ್‌ನೋಟ್‌ನಲ್ಲಿ ಮತಾಂತರ, ಸುಲಿಗೆ ಆರೋಪ
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ನೂಕರಾಜು ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್ ದೊರೆತಿದೆ. ಅದರಲ್ಲಿ ರೈಫಲ್ ಶೂಟಿಂಗ್ ತರಬೇತುದಾರ ಶೇಖ್ ಸಾದಿಕ್ ಖಾನ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಸಾದಿಕ್ ಖಾನ್ ನಮ್ಮ ಕುಟುಂಬವನ್ನು ಬಲವಂತವಾಗಿ ಬೇರೆ ಧರ್ಮಕ್ಕೆ ಮತಾಂತರಗೊಳಿಸಲು ಯತ್ನಿಸುತ್ತಿದ್ದ ಹಾಗೂ ಹಣ ಸುಲಿಗೆ ಮಾಡುತ್ತಿದ್ದ ಎಂದು ನೂಕರಾಜು ಪತ್ರದಲ್ಲಿ ಉಲ್ಲೇಖಿಸಿದ್ದರು. ನೂಕರಾಜು ಅವರ ಮೊಮ್ಮಗ ಓದುತ್ತಿದ್ದ ಶಾಲೆಯಲ್ಲಿ ಸಾದಿಕ್ ಕೋಚ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಎರಡು ವರ್ಷಗಳಿಂದ ಈ ಕುಟುಂಬದ ಜೊತೆ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ.
ಐದು ರಾಜ್ಯಗಳಲ್ಲಿ ಶೋಧ ನಡೆಸಿ ಆರೋಪಿ ಬಂಧನ
ಆರೋಪಿ ಸಾದಿಕ್ ಖಾನ್ ಪತ್ತೆಗಾಗಿ ಕಾಕಿನಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಬಿಂದು ಮಾಧವ್ ಅವರ ಮಾರ್ಗದರ್ಶನದಲ್ಲಿ 10ಕ್ಕೂ ಹೆಚ್ಚು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಡಿಜಿಟಲ್ ವಹಿವಾಟು ಹಾಗೂ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಐದು ರಾಜ್ಯಗಳಲ್ಲಿ ಭಾರಿ ಶೋಧ ನಡೆಸಿ, ಅಂತಿಮವಾಗಿ ಉತ್ತರ ಪ್ರದೇಶದ ಮೀರತ್‌ನಲ್ಲಿ ಬಂಧಿಸಲಾಗಿದೆ. ಬಳಿಕ ಟ್ರಾನ್ಸಿಟ್ ವಾರಂಟ್ ಆಧಾರದ ಮೇಲೆ ಆತನನ್ನು ಆಂಧ್ರಪ್ರದೇಶಕ್ಕೆ ಕರೆತರಲಾಗಿದೆ.
ಸಿಬಿಐ ಅಥವಾ ಎನ್‌ಐಎ ತನಿಖೆಗೆ ಒತ್ತಾಯ
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಂಸದ ವಿಜಯಸಾಯಿ ರೆಡ್ಡಿ, ಇದೊಂದು ದೊಡ್ಡ ಮಟ್ಟದ ಸಂಚು ಎಂದು ಆರೋಪಿಸಿದ್ದಾರೆ. ಸಾದಿಕ್ ಖಾನ್ 10 ಜನರಿದ್ದ ತಂಡದ ಭಾಗವಾಗಿದ್ದು, ಮತಾಂತರ, ಹಣ ಸುಲಿಗೆ, ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಮತ್ತು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಎಂದು ಆರೋಪಿಸಿದ್ದಾರೆ. ಕಾಕಿನಾಡ ಮತ್ತು ರಾಜಮಹೇಂದ್ರವರಂ ಸುತ್ತಮುತ್ತಲಿನ ಸುಮಾರು 15ಕ್ಕೂ ಹೆಚ್ಚು ಕುಟುಂಬಗಳನ್ನು ಈ ಜಾಲ ಗುರಿಯಾಗಿಸಿಕೊಂಡಿದೆ ಎಂದು ಹೇಳಿರುವ ಅವರು, ಪ್ರಕರಣವನ್ನು ಸಿಬಿಐ (CBI) ಅಥವಾ ಎನ್‌ಐಎ (NIA) ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಆರೋಪಿ ಸಾದಿಕ್ ಖಾನ್ ಪೊಲೀಸ್ ವಶದಲ್ಲಿದ್ದು, ತನಿಖೆ ತೀವ್ರಗೊಂಡಿದೆ. ಆದಾಗ್ಯೂ, ಇದುವರೆಗೆ ನಡೆದಿರುವ ತನಿಖೆಯಲ್ಲಿ ಯಾವುದೇ ‘ಲವ್ ಜಿಹಾದ್’ ಲಿಂಕ್ ಕಂಡುಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಆನ್‌ಲೈನ್ ಆರ್ಡರ್‌ನಲ್ಲಿ ವಿಷದ ಆಟ.. ಅಮೆಜಾನ್, ಸ್ವಿಗ್ಗಿ, ಬಿಗ್‌ಬಾಸ್ಕೆಟ್‌ಗೆ ಲೈಸೆನ್ಸ್ ಶಾಕ್!


















