ನವದೆಹಲಿ : ಬಾಲಿವುಡ್ ನಟಿ ಕೃತಿ ಸನನ್ ಅವರ ರಕ್ಷಾಬಂಧನ ಜಾಹೀರಾತಿನ ಉಡುಪಿನ ವಿವಾದಕ್ಕೆ ಸಂಬಂಧಿಸಿದಂತೆ ‘ಪಿತೃಪ್ರಭುತ್ವವನ್ನು ಅಳಿಸಿಹಾಕಿ’ (ಸ್ಮ್ಯಾಶ್ ದಿ ಪೇಟ್ರಿಯಾರ್ಕಿ) ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಹಂಚಿಕೊಂಡಿದ್ದ ವ್ಯಂಗ್ಯಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಮರುಹಂಚಿಕೊಂಡಿರುವ ಕಂಗನಾ “ಸ್ವಲ್ಪ ತಡಿ ಬ್ರೋ, ಭಾರತ್ ಮಾತಾ ಕಿ ಜೈ. ಶುರು ಮಾಡೋಣ” ಎಂದು ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.
ಏನಿದು ‘ಸ್ಮ್ಯಾಶ್ ದಿ ಪೇಟ್ರಿಯಾರ್ಕಿ’ ವಿವಾದ
ಖ್ಯಾತ ಆಭರಣ ಸಂಸ್ಥೆಯೊಂದರ 36 ಸೆಕೆಂಡುಗಳ ರಕ್ಷಾಬಂಧನ ಜಾಹೀರಾತಿನಲ್ಲಿ ನಟಿ ಕೃತಿ ಸನನ್ ಇಂಡೋ-ವೆಸ್ಟರ್ನ್ ಶೈಲಿಯ ಉಡುಪು ಧರಿಸಿ ತಮ್ಮ ಸಹೋದರ ಮತ್ತು ಸಾಕುಪ್ರಾಣಿಗೆ ರಾಖಿ ಕಟ್ಟಿದ್ದರು. ಈ ಉಡುಪಿನ ಬಗ್ಗೆ ನಟಿ ಕಂಗನಾ ರಣಾವತ್ ಆಕ್ಷೇಪ ವ್ಯಕ್ತಪಡಿಸಿ, “ಸಾಂಪ್ರದಾಯಿಕ ಹಬ್ಬದ ಸಂದರ್ಭದಲ್ಲಿ ಬಿಕಿನಿ ಅಥವಾ ಒಳಉಡುಪಿನಂತಹ ಉಡುಪುಗಳನ್ನು ಧರಿಸಿ ರಾಖಿ ಕಟ್ಟುವ ಅಗತ್ಯವೇನಿತ್ತು?” ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕೃತಿ ಸನನ್, “ಸಂಸ್ಕೃತಿ ಹೃದಯದಲ್ಲಿದೆಯೇ ಹೊರತು ಉಡುಪಿನ ನೆಕ್‌ಲೈನ್‌ನಲ್ಲಲ್ಲ” ಎಂದು ಸ್ಪಷ್ಟನೆ ನೀಡಿದ್ದರು. ಈ ವಿವಾದದಲ್ಲಿ ಕೃತಿ ಸನನ್ ಅವರನ್ನು ಬೆಂಬಲಿಸಿದ್ದ ರಾಹುಲ್ ಗಾಂಧಿ, ಮಹಿಳೆಯರ ಉಡುಪಿನ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಂಡು ‘ಸ್ಮ್ಯಾಶ್ ದಿ ಪೇಟ್ರಿಯಾರ್ಕಿ’ ಎಂಬ ಹ್ಯಾಷ್‌ಟ್ಯಾಗ್ ಬಳಸಿ ಪೋಸ್ಟ್ ಮಾಡಿದ್ದರು.
ಬಿಜೆಪಿಯ ವ್ಯಂಗ್ಯಚಿತ್ರ, ಕಂಗನಾ ಬೆಂಬಲ
ರಾಹುಲ್ ಗಾಂಧಿಯವರ ಈ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದ್ದು, ಕಾಂಗ್ರೆಸ್‌ನ ಹಳೆಯ ನಿರ್ಧಾರಗಳನ್ನು ಪ್ರಶ್ನಿಸುವ ವಿಲಕ್ಷಣ ಕಾರ್ಟೂನ್ ಸರಣಿಯೊಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ‘ತ್ರಿವಳಿ ತಲಾಖ್’, ‘ಶಾಬಾನೋ ಪ್ರಕರಣ’, ‘ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರಕ್ಕೆ ವಿರೋಧ’ ಮತ್ತು ಕರ್ನಾಟಕದ ಕಾಂಗ್ರೆಸ್ ಸಂಪುಟದಲ್ಲಿ 33 ಸಚಿವರಿದ್ದರೂ ಒಬ್ಬೇ ಒಬ್ಬ ಮಹಿಳೆಗೆ ಸಚಿವಸ್ಥಾನ ನೀಡದಿರುವ ವಿಚಾರಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್‌ನ ‘ವೋಟ್ ಬ್ಯಾಂಕ್ ರಾಜಕೀಯ’ವನ್ನು ಅನಾವರಣಗೊಳಿಸಲಾಗಿದೆ. ಈ ಕಾರ್ಟೂನ್ ಪೋಸ್ಟ್ ಅನ್ನು ಕಂಗನಾ ರಣಾವತ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ರಾಹುಲ್ ಗಾಂಧಿಯವರ ಸಿದ್ಧಾಂತವನ್ನು ಲೇವಡಿ ಮಾಡಿದ್ದಾರೆ.
ಇತ್ತೀಚೆಗೆ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದ್ದ ರಾಹುಲ್ ಗಾಂಧಿ, ಮಹಿಳೆಯರು ತಮ್ಮ ತಂದೆ, ಗಂಡ ಅಥವಾ ಮಗನ ಆಸ್ತಿಯಲ್ಲ, ಅವರಿಗೆ ಸ್ವತಂತ್ರ ಅಸ್ತಿತ್ವವಿದೆ ಎಂದು ಹೇಳುವ ಮೂಲಕ ಪಿತೃಪ್ರಭುತ್ವ ಮನಸ್ಥಿತಿಯ ವಿರುದ್ಧ ಧ್ವನಿ ಎತ್ತುವಂತೆ ಕರೆ ನೀಡಿದ್ದರು. ಈ ವೇಳೆ ಸ್ಮ್ಯಾಶ್ ದಿ ಪ್ಯಾಟ್ರಿಯಾರ್ಕಿ ಎಂದೂ ಘೋಷಣೆ ಕೂಗಿದ್ದರು. ಇದಕ್ಕೆ ಪ್ರತಿಯಾಗಿ ಕಂಗನಾ ರಣಾವತ್, ಭಾರತೀಯ ಸಂಸ್ಕೃತಿ ಮತ್ತು ಹಬ್ಬಗಳ ಗರಿಮೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಫ್ಯಾಷನ್ ಹೆಸರಿನಲ್ಲಿ ಸಾಂಪ್ರದಾಯಿಕ ಮೌಲ್ಯಗಳನ್ನು ಕೀಳಾಗಿ ಕಾಣುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ : ಇರಾನ್ ಜೊತೆ ವ್ಯಾಪಾರ : ಭಾರತದ 4 ಕಂಪನಿಗಳು, ಮೂವರ ಮೇಲೆ ಅಮೆರಿಕ ದಿಗ್ಬಂಧನ


















