ನವದೆಹಲಿ : ಕಳೆದೊಂದು ವಾರದಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಮುಂಗಾರು ಕೊನೆಗೂ ದಯೆ ತೋರಿದೆ. ತೀವ್ರ ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ದೇಶದ ಜನತೆಗೆ ಭಾರತೀಯ ಹವಾಮಾನ ಇಲಾಖೆ (IMD) ಸಿಹಿ ಸುದ್ದಿ ನೀಡಿದ್ದು, ನೈಋತ್ಯ ಮುಂಗಾರು ಮಾರುತಗಳು ಇಂದು (ಜೂನ್ 4) ಅಧಿಕೃತವಾಗಿ ಕೇರಳ ಕರಾವಳಿಯನ್ನು ಪ್ರವೇಶಿಸಿವೆ. ಇದರೊಂದಿಗೆ ದೇಶದಲ್ಲಿ ಮಳೆಗಾಲಕ್ಕೆ ಅಧಿಕೃತ ಚಾಲನೆ ಸಿಕ್ಕಂತಾಗಿದೆ. ಸಾಮಾನ್ಯವಾಗಿ ಜೂನ್ 1 ರಂದೇ ಬರಬೇಕಿದ್ದ ಮುಂಗಾರು, ಈ ಬಾರಿ ನಾಲ್ಕು ದಿನ ವಿಳಂಬದ ನಂತರ ದೇಶವನ್ನು ಪ್ರವೇಶಿಸಿದೆ.
ಮುಂಗಾರು ಮಾರುತಗಳ ಆಗಮನದ ಕುರಿತು ಕಳೆದ ಕೆಲವು ದಿನಗಳಿಂದ ತೀವ್ರ ಕುತೂಹಲ ಮೂಡಿತ್ತು. ಮೇ 26ರಂದೇ ಅಂದರೆ ವಾಡಿಕೆಗೂ ಮುಂಚೆಯೇ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆಯು ಆರಂಭದಲ್ಲಿ ಅಂದಾಜಿಸಿತ್ತು. ಆದರೆ ವಾತಾವರಣದಲ್ಲಿನ ದಿಢೀರ್ ಬದಲಾವಣೆಗಳಿಂದಾಗಿ ಮಾರುತಗಳ ಚಲನೆ ನಿಧಾನವಾಗಿತ್ತು. ತದನಂತರ ಹವಾಮಾನ ಇಲಾಖೆಯು ತನ್ನ ಮುನ್ಸೂಚನೆಯನ್ನು ಪರಿಷ್ಕರಿಸಿ ಜೂನ್ 4ರ ಸುಮಾರಿಗೆ ಮುಂಗಾರು ಕೇರಳ ತಲುಪಲಿದೆ ಎಂದು ಹೇಳಿತ್ತು. ಅದರಂತೆಯೇ ಪ್ರಸ್ತುತ ಕೇರಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂಗಾರು ಮಾರುತಗಳು ಮುನ್ನಡೆಯಲು ಪೂರಕ ವಾತಾವರಣ ನಿರ್ಮಾಣವಾಗಿದ್ದು, ಮಳೆಯ ಅಬ್ಬರ ಆರಂಭವಾಗಿದೆ.
ಕೇರಳದಾದ್ಯಂತ ವಿಸ್ತರಿಸಿದ ವರುಣನ ಆರ್ಭಟ
ಮುಂಗಾರಿನ ಮೊದಲ ತಾಣವಾಗಿರುವ ಕೇರಳದಲ್ಲಿ ಈಗಾಗಲೇ ವರುಣನ ಆರ್ಭಟ ಜೋರಾಗಿದೆ. ವ್ಯಾಪಕ ಮಳೆ, ಬಲವಾದ ಗಾಳಿ ಮತ್ತು ದಟ್ಟವಾದ ಮೋಡ ಕವಿದ ವಾತಾವರಣ ಸೇರಿದಂತೆ ಮುಂಗಾರು ಪ್ರವೇಶಕ್ಕೆ ಇರಬೇಕಾದ ಎಲ್ಲಾ ತಾಂತ್ರಿಕ ಮಾನದಂಡಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಅಧಿಕೃತ ಘೋಷಣೆ ಮಾಡಿದೆ. ಇಂದು ಮುಂಜಾನೆಯಿಂದಲೇ ರಾಜ್ಯದ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಆಲಪ್ಪುಳ, ಕೊಟ್ಟಾಯಂ ಮತ್ತು ಎರ್ನಾಕುಲಂ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಈ ಭಾಗಗಳಲ್ಲಿ ಗಂಟೆಗೆ 40 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಗುಡುಗು ಸಹಿತ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ.
ಉತ್ತರ ಭಾರತಕ್ಕೆ ಮುಂಗಾರು ತಲುಪುವುದು ಯಾವಾಗ?
ಕೇರಳಕ್ಕೆ ಮುಂಗಾರು ಪ್ರವೇಶಿಸುತ್ತಿದ್ದಂತೆ, ತೀವ್ರ ತಾಪಮಾನದಿಂದ ಕರಗುತ್ತಿರುವ ಉತ್ತರ ಭಾರತದ ರಾಜ್ಯಗಳು ಈಗ ಮಳೆಯ ನಿರೀಕ್ಷೆಯಲ್ಲಿ ಕಾಯುತ್ತಿವೆ. ಜೂನ್ ತಿಂಗಳ ಅವಧಿಯಲ್ಲಿ ಮುಂಗಾರು ಮಾರುತಗಳು ದೇಶದ ಇತರೆ ಭಾಗಗಳಿಗೆ ಸ್ಥಿರವಾಗಿ ಮುನ್ನಡೆಯಲಿವೆ. ಜೂನ್ ಮಧ್ಯಭಾಗದ ವೇಳೆಗೆ ಪಶ್ಚಿಮ ಕರಾವಳಿ ಮತ್ತು ಈಶಾನ್ಯ ಭಾರತದ ಬಹುತೇಕ ಭಾಗಗಳನ್ನು ಆವರಿಸಿ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಸೇರಿದಂತೆ ಮಧ್ಯ ಭಾರತವನ್ನು ತಲುಪಲಿವೆ. ಜೂನ್ 27ರ ವೇಳೆಗೆ ರಾಜಧಾನಿ ದಿಲ್ಲಿಗೆ ಮುಂಗಾರು ಪ್ರವೇಶಿಸುವ ಸಾಧ್ಯತೆಯಿದ್ದು, ಜೂನ್ ಕೊನೆಯ ವಾರ ಅಥವಾ ಜುಲೈ ಮೊದಲ ವಾರದ ವೇಳೆಗೆ ಪಂಜಾಬ್, ಹರ್ಯಾಣ, ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶ ಸೇರಿದಂತೆ ವಾಯುವ್ಯ ಭಾರತದ ಬಹುತೇಕ ಭಾಗಗಳಿಗೆ ಮುಂಗಾರು ಮಳೆ ವಿಸ್ತರಿಸಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ : ದಿಲ್ಲಿ ಹೋಟೆಲ್ ಅಗ್ನಿ ದುರಂತ : ICUನಲ್ಲಿದ್ದ ತಂದೆಯ ನೋಡಲು ಬಂದ ಒಂದೇ ಕುಟುಂಬದ 8 ಮಂದಿ ಸುಟ್ಟು ಕರಕಲು!



















