ನವದೆಹಲಿ : ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಆಯೋಜಿಸಿದ್ದ ‘ಚಲೋ ಸಂಸದ್’ ಪ್ರತಿಭಟನಾ ಮೆರವಣಿಗೆಯ ವೇಳೆ ಯುವತಿಯೊಬ್ಬಳಿಗೆ ಕಪಾಳಮೋಕ್ಷ ಮಾಡಿದ್ದ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯನ್ನು ಜಂತರ್ ಮಂತರ್ ಪ್ರತಿಭಟನಾ ಸ್ಥಳದ ಕರ್ತವ್ಯದಿಂದ ತೆರವುಗೊಳಿಸಲಾಗಿದೆ. ಈಶಾನ್ಯ ದೆಹಲಿಯ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಹೆಚ್ಚುವರಿ ಡಿಸಿಪಿ) ಸಂಕೇತ್ ಲಂಬಾ ಅವರನ್ನು ಜಂತರ್ ಮಂತರ್ ಕರ್ತವ್ಯದಿಂದ ತೆಗೆದುಹಾಕಲಾಗಿದೆ.
ಜುಲೈ 20ರಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಾವಿರಾರು ಯುವಕರು ಸಂಸತ್ ಭವನದತ್ತ ಮೆರವಣಿಗೆ ಹೊರಟಿದ್ದಾಗ, ಅಧಿಕಾರಿಯೊಬ್ಬರು ಪ್ರತಿಭಟನಾನಿರತ ಯುವತಿಯ ಮೇಲೆ ಹಲ್ಲೆ ನಡೆಸಿರುವುದು ವೀಡಿಯೊದಲ್ಲಿ ದಾಖಲಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ತೃಣಮೂಲ ಕಾಂಗ್ರೆಸ್‌ನ ಮಾಜಿ ಸಂಸದ ಸಾಕೇತ್ ಗೋಖಲೆ, ಅಧಿಕಾರಿ ಲಂಬಾ ವಿರುದ್ಧ ದೆಹಲಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. “ಪೊಲೀಸ್ ದೌರ್ಜನ್ಯದ ವಿರುದ್ಧ ಯಾರೂ ದೂರು ನೀಡರಿಲ್ಲ ಎಂದು ನಿನ್ನೆ ಸರ್ಕಾರ ಹೈಕೋರ್ಟ್‌ಗೆ ತಿಳಿಸಿತ್ತು, ಹೀಗಾಗಿ ನಾನು ಇಂದು ಅಧಿಕೃತ ದೂರು ನೀಡಿದ್ದೇನೆ,” ಎಂದು ಸಾಕೇತ್ ಮಾಹಿತಿ ನೀಡಿದ್ದಾರೆ.
ದೆಹಲಿ ಹೈಕೋರ್ಟ್ ಖಂಡನೆ, ನೋಟಿಸ್ ಜಾರಿ
ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರ ಪೀಠದ ಮುಂದೆ ಜುಲೈ 22 ರಂದು ಈ ವಿಷಯ ಪ್ರಸ್ತಾಪವಾಯಿತು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, “ಏನೂ ಮಾಡದೆ ಸುಮ್ಮನೆ ನಿಂತಿದ್ದ ಯುವತಿಯ ಮೇಲೆ ಹೆಚ್ಚುವರಿ ಡಿಸಿಪಿ ಸಂದೀಪ್ ಲಂಬಾ ಕಪಾಳಮೋಕ್ಷ ಮಾಡಿದ್ದಾರೆ. ಇಂತಹ ಖಾಕಿ ಧರಿಸಿದ ಗೂಂಡಾಗಳ ಹೆಸರನ್ನು ಬಹಿರಂಗಪಡಿಸಲು ನಾವು ಹೆದರಬಾರದು. ಅವರನ್ನು ತಕ್ಷಣವೇ ಕೋರ್ಟ್‌ಗೆ ಕರೆಸಿ ಹೊಣೆಗಾರರನ್ನಾಗಿ ಮಾಡಬೇಕು,” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ಪ್ರತಿಭಟನಾಕಾರರನ್ನು ಚದುರಿಸಲು ನಿಯಮಾವಳಿ ಪ್ರಕಾರ ಮೊದಲು ಜಲಫಿರಂಗಿ ಪ್ರಯೋಗಿಸದೇ, ಕೊನೆಯ ಅಸ್ತ್ರವಾದ ಅಶ್ರುವಾಯುವನ್ನು (ಟಿಯರ್ ಗ್ಯಾಸ್) ನೇರವಾಗಿ ವಿದ್ಯಾರ್ಥಿಗಳ ಮೇಲೆಯೇ ಪ್ರಯೋಗಿಸಲಾಗಿದೆ ಎಂದು ಕೋರ್ಟ್ ಗಮನಕ್ಕೆ ತರಲಾಯಿತು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ದೆಹಲಿ ಪೊಲೀಸ್, ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (NHRC) ನೋಟಿಸ್ ಜಾರಿ ಮಾಡಿದ್ದು, ನಾಲ್ಕು ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿದೆ. ಜೊತೆಗೆ ಜುಲೈ 20ರ ಘಟನೆಯ ಎಲ್ಲಾ ಸಿಸಿಟಿವಿ ಮತ್ತು ವಿಡಿಯೋ ರೆಕಾರ್ಡಿಂಗ್‌ಗಳನ್ನು ಭದ್ರವಾಗಿ ಕಾಯ್ದಿರಿಸಲು ಆದೇಶಿಸಿದೆ.
ಪ್ರತಿಭಟನೆಯ ಹಿನ್ನೆಲೆಯೇನು?
ಜುಲೈ 20ರಂದು ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ಪೊಲೀಸರ ಅನುಮತಿ ನಿರಾಕರಣೆಯ ಹೊರತಾಗಿಯೂ ‘ಸಿಜೆಪಿ’ ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಂತರ್ ಮಂತರ್‌ನಲ್ಲಿ ನೆರೆದು ಸಂಸತ್ ಭವನದತ್ತ ‘ಚಲೋ ಸಂಸದ್’ ಮೆರವಣಿಗೆ ಆರಂಭಿಸಿದ್ದರು. ನೀಟ್ (NEET) ಪರೀಕ್ಷೆ ಅಕ್ರಮ ಖಂಡಿಸಿ ಹಾಗೂ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ನಡೆದ ಈ ಪ್ರತಿಭಟನೆಯನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ ಹಾಗೂ ಅಶ್ರುವಾಯು ಬಳಸಿದ್ದರು. ಈ ವೇಳೆ ಸುಮಾರು 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಹಲವು ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳಿಗೊಳಗಾಗಿದ್ದರು.
ಇದನ್ನೂ ಓದಿ : ಫಾಸ್ಟ್‌ಟ್ರ್ಯಾಕ್ ಕೋರ್ಟ್ ಸಾಕಾಗಲ್ಲ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲೇಬೆಕು : ಕೇಂದ್ರಕ್ಕೆ CJP ತಿರುಗೇಟು!


















