ಬೆಳಗಾವಿ : ಜಿಲ್ಲೆಯ ಅಥಣಿ ತಾಲೂಕಿನ ಜನವಾಡ ಗ್ರಾಮದಲ್ಲಿ ಮತ್ತೆ ಅಕ್ರಮ ಮಣ್ಣು ಸಾಗಾಟ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃಷ್ಣಾ ನದಿ ಹಿತ ರಕ್ಷಣೆಗಾಗಿ ಹಲವು ಸಂಘ-ಸಂಸ್ಥೆಗಳು ಹಾಗೂ ರೈತರು ಹಗಲಿರುಳು ಹೋರಾಟ ನಡೆಸುತ್ತಿರುವ ನಡುವೆಯೇ, ಜನವಾಡ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಮತ್ತೆ ಅಕ್ರಮ ಮಣ್ಣು ಗಣಿಗಾರಿಕೆ ಮತ್ತು ಸಾಗಾಟ ನಡೆಯುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಕೆಲ ದಿನಗಳಿಂದ ಸ್ತಬ್ಧವಾಗಿದ್ದ ಅಕ್ರಮ ಮಣ್ಣು ಗಣಿಗಾರಿಕೆ ಚಟುವಟಿಕೆಗಳು ಇದೀಗ ಮತ್ತೆ ತಲೆಎತ್ತಿದ್ದು, ಹಗಲು ಹೊತ್ತಲ್ಲೇ ಜೆಸಿಬಿ ಮತ್ತು ಟಿಪ್ಪರ್‌ಗಳ ಮೂಲಕ ಬಹಿರಂಗವಾಗಿ ಮಣ್ಣು ಸಾಗಾಟ ನಡೆಸಲಾಗುತ್ತಿದೆ ಎನ್ನಲಾಗಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕೃಷ್ಣಾ ನದಿ ಉಳಿವಿಗಾಗಿ ಕೆಲ ಪ್ರಾಮಾಣಿಕ ಅಧಿಕಾರಿಗಳು ರಾಜಕೀಯ ಒತ್ತಡಗಳ ನಡುವೆಯೂ ಕಾರ್ಯಾಚರಣೆ ನಡೆಸುತ್ತಿರುವಾಗ, ಇನ್ನೂ ಕೆಲ ಅಧಿಕಾರಿಗಳ ನಿರ್ಲಕ್ಷ್ಯವೇ ಅಕ್ರಮ ಚಟುವಟಿಕೆಗಳಿಗೆ ಬಲ ನೀಡುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಕಳೆದ ಎರಡು ದಿನಗಳಿಂದ ಪತ್ರಿಕೆಗಳು ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗಿದ್ದರೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.
ಅಕ್ರಮ ಮಣ್ಣು ಸಾಗಾಟಕ್ಕೆ ಕಡಿವಾಣ ಹಾಕುವಲ್ಲಿ ಹಿಂದೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದ ಬೆಳಗಾವಿ ಎಸ್‌ಪಿ ಇದೀಗ ಮೌನ ವಹಿಸಿದ್ದಾರಾ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ತಕ್ಷಣ ಅಕ್ರಮ ಮಣ್ಣು ಸಾಗಾಟಕ್ಕೆ ತಡೆಹಾಕಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಮತ್ತು ರೈತರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಅಥಣಿಯಲ್ಲಿ ಮತ್ತೆ ಅಕ್ರಮ ಮಣ್ಣು ಸಾಗಾಟ ಆರೋಪ ; ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಆಕ್ರೋಶ



















