ಬೆಂಗಳೂರು : ಕೇಂದ್ರ ಸರ್ಕಾರವು ‘ಪ್ರಧಾನ ಮಂತ್ರಿ ರಿಸರ್ಚ್ ಚೇರ್ (PMRC) ಯೋಜನೆ 2026’ ಗೆ (PM Research Chair Scheme 2026) ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಆಗಸ್ಟ್ 15ರವರೆಗೆ ವಿಸ್ತರಿಸಿದೆ. ಇದುವರೆಗೆ ಜುಲೈ 15 ಕೊನೆಯ ದಿನವಾಗಿತ್ತು. ಈಗ ಇದನ್ನು ಆಗಸ್ಟ್ 15ಕ್ಕೆ ವಿಸ್ತರಣೆ ಮಾಡಿದೆ. ಹಾಗಾಗಿ, ಸಂಶೋಧನಾ ಅಭ್ಯರ್ಥಿಗಳು, ಪಿಎಚ್.ಡಿ ಮುಗಿಸಿದವರು ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಫೆಲೋಶಿಪ್ ಪಡೆಯಬಹುದಾಗಿದೆ.
ಏನಿದು ಯೋಜನೆ?
ವಿದೇಶಗಳಲ್ಲಿರುವ ಭಾರತೀಯ ಮೂಲದ ಪ್ರತಿಭಾವಂತ ಸಂಶೋಧಕರು, ವಿಜ್ಞಾನಿಗಳು ಮತ್ತು ತಜ್ಞರನ್ನು ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಗಳು ಹಾಗೂ ಸಂಶೋಧನಾ ಪ್ರಯೋಗಾಲಯಗಳಿಗೆ ಆಕರ್ಷಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಆ ಮೂಲಕ ದೇಶದ ಸಂಶೋಧನಾ ಕ್ಷೇತ್ರವನ್ನು ಬಲಪಡಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಇದೇ ಕಾರಣಕ್ಕಾಗಿ ಸ್ಕಾಲರ್ ಗಳಿಗೆ ಫೆಲೋಶಿಪ್ ನೀಡಲಾಗುತ್ತದೆ.
ಎಷ್ಟು ಫೆಲೋಶಿಪ್?
ಪಿಎಚ್.ಡಿ ಮುಗಿಸಿ, ಸಂಶೋಧನಾ ಕ್ಷೇತ್ರದಲ್ಲಿ 5 ವರ್ಷಕ್ಕಿಂತ ಕಡಿಮೆ ಅನುಭವ ಇರುವವರಿಗೆ ವರ್ಷಕ್ಕೆ 15 ಲಕ್ಷ ರೂ.ನಿಂದ 20 ಲಕ್ಷ ರೂ.ವರೆಗೆ ಫೆಲೋಶಿಪ್ ನೀಡಲಾಗುತ್ತದೆ. ಒನ್ ಟೈಮ್ ರಿಸರ್ಚ್ ಗ್ರ್ಯಾಂಟ್ ಆಗಿ 1-1.5 ಕೋಟಿ ರೂ. ನೀಡಲಾಗುತ್ತದೆ. ಇನ್ನು 5-10 ವರ್ಷಗಳ ಅನುಭವ ಇರುವ ಸೀನಿಯರ್ ರಿಸರ್ಚ್ ಫೆಲೋಗಳಿಗೆ ವರ್ಷಕ್ಕೆ 20 ಲಕ್ಷ ರೂ.ನಿಂದ 40 ಲಕ್ಷ ರೂ.ವರೆಗೆ ಫೆಲೋಶಿಪ್ ನೀಡಲಾಗುತ್ತದೆ. ಒನ್ ಟೈಮ್ ರಿಸರ್ಚ್ ಗ್ರ್ಯಾಂಟ್ ಆಗಿ 1.5-2.5 ಕೋಟಿ ರೂ. ನೀಡಲಾಗುತ್ತದೆ.
ಇದೇ ರೀತಿ, ರಿಸರ್ಚ್ ಚೇರ್ ಗಳಿಗೆ (10 ವರ್ಷಕ್ಕೂ ಹೆಚ್ಚು ಅನುಭವ ಇರುವವರು) ವರ್ಷಕ್ಕೆ 40 ಲಕ್ಷ ರೂ.ನಿಂದ 60 ಲಕ್ಷ ರೂ.ವರೆಗೆ ಫೆಲೋಶಿಪ್ ನೀಡಲಾಗುತ್ತದೆ. ಒನ್ ಟೈಮ್ ರಿಸರ್ಚ್ ಗ್ರ್ಯಾಂಟ್ ಆಗಿ 3-5 ಕೋಟಿ ರೂ. ನೀಡಲಾಗುತ್ತದೆ. ಅಲ್ಲದೆ, ಇವರಿಗೆ ವಾರ್ಷಿಕ ವೈದ್ಯಕೀಯ ಹಾಗೂ ವಾರ್ಷಿಕ ಭತ್ಯೆಯಾಗಿಯೂ ಲಕ್ಷಾಂತರ ರೂ. ನೀಡಲಾಗುತ್ತದೆ.
ಕೃತಕ ಬುದ್ಧಿಮತ್ತೆ (AI), ಸೆಮಿಕಂಡಕ್ಟರ್, ಶಕ್ತಿ ಮತ್ತು ಹವಾಮಾನ ಬದಲಾವಣೆ, ಬಾಹ್ಯಾಕಾಶ ಮತ್ತು ರಕ್ಷಣೆ, ಬಯೋಟೆಕ್ನಾಲಜಿ, ಹೆಲ್ತ್ ಕೇರ್ ಸೇರಿ 13 ಆದ್ಯತೆಯ ಕ್ಷೇತ್ರಗಳಲ್ಲಿ ಸಂಶೋಧನೆಯಲ್ಲಿ ತೊಡಗಿರುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬಯಸುವವರು pmrc.education.gov.in ವೆಬ್ ಸೈಟ್ ಗೆ ಭೇಟಿ ನೀಡಬಹುದು.
ಇದನ್ನೂ ಓದಿ : ಕೇಂದ್ರ ಲೋಕಸೇವಾ ಆಯೋಗದಲ್ಲಿ 828 ಹುದ್ದೆಗಳ ನೇಮಕಾತಿ : ಹೀಗೆ ಅರ್ಜಿ ಸಲ್ಲಿಸಿ



















