ಬೆಂಗಳೂರು : ರಾಜ್ಯ ರಾಜಧಾನಿಯ ಮಲ್ಲತಹಳ್ಳಿಯಲ್ಲಿರುವ ಶ್ರೀಗಂಧ ಕಾವಲು ಸರ್ಕಾರಿ ವಿದ್ಯಾರ್ಥಿ ನಿಲಯವು ಈಗ ಶಿಕ್ಷಣ ಕಾಶಿಯಾಗಿ ಉಳಿದಿಲ್ಲ, ಬದಲಾಗಿ ಕ್ರಿಮಿನಲ್ ಚಟುವಟಿಕೆಗಳ ತವರೂರಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇಲ್ಲಿ ವಿದ್ಯಾರ್ಥಿಗಳ ವೇಷದಲ್ಲಿರುವ ಪುಂಡರ ದರ್ಬಾರ್ ಮಿತಿಮೀರಿದ್ದು, ಖುದ್ದು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರಾಕೇಶ್ ಕುಮಾರ್ ಅವರೇ ಸ್ಥಳಕ್ಕೆ ಭೇಟಿ ನೀಡಿ ಎಚ್ಚರಿಕೆ ನೀಡಿದ್ದರೂ, ಈ ಗ್ಯಾಂಗ್ ಕಿಂಚಿತ್ತೂ ಬಗ್ಗಿಲ್ಲ ಎನ್ನಲಾಗಿದೆ. ಆಯುಕ್ತರ ಭೇಟಿಯ ಬೆನ್ನಲ್ಲೇ ಈ ‘ವಿದ್ಯಾರ್ಥಿ ಪುಡಾರಿಗಳು’ ಮತ್ತಷ್ಟು ಅಟ್ಟಹಾಸ ಮೆರೆಯುತ್ತಿರುವುದು ಇಡೀ ವ್ಯವಸ್ಥೆಗೆ ಒಡ್ಡಿದ ಸವಾಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಅಕ್ರಮಗಳ ಅಸಲಿ ಮುಖವಾಡ ; ಗಾಂಜಾ, ಮದ್ಯ ಮತ್ತು ಮುಖವಾಡಧಾರಿಗಳು?
ಕಳೆದ ನವೆಂಬರ್‌ನಲ್ಲಿ ಬಿಡಿಎ ಜಾಗೃತಿ ದಳ ನಡೆಸಿದ ಮಿಂಚಿನ ದಾಳಿಯು ಹಾಸ್ಟೆಲ್‌ನ ಕರಾಳ ಮುಖವನ್ನು ಬಯಲಿಗೆಳೆದಿತ್ತು. ಹಾಸ್ಟೆಲ್ ಆವರಣದಲ್ಲಿ ಗಾಂಜಾ ಪೊಟ್ಟಣಗಳು, ಮದ್ಯದ ಬಾಟಲಿಗಳು ಮತ್ತು ನಿಷೇಧಿತ ತಂಬಾಕು ಉತ್ಪನ್ನಗಳು ರಾಶಿ ರಾಶಿಯಾಗಿ ಬಿದ್ದಿದ್ದವು. ಇಷ್ಟೆಲ್ಲಾ ಪುರಾವೆಗಳು ಸಿಕ್ಕಿದ್ದರೂ, ಮಹದೇವ್ ಕುಮಾರ್, ವರುಣ್ ಮತ್ತು ಮಹದೇವಸ್ವಾಮಿ ನೇತೃತ್ವದ ತಂಡ “ನಮ್ಮ ತಪ್ಪಿಲ್ಲ, ಇದು ಆಡಳಿತದ ವೈಫಲ್ಯ” ಎಂದು ಉದ್ಧಟತನ ತೋರುತ್ತಿದೆ ಎನ್ನಲಾಗಿದೆ. ಮುಖವಾಡ ಧರಿಸಿ ಹಾಸ್ಟೆಲ್ ಒಳಗೆ ಸಂಚರಿಸುವ ಈ ಗ್ಯಾಂಗ್, ಸಾಮಾನ್ಯ ವಿದ್ಯಾರ್ಥಿಗಳಲ್ಲಿ ಸೈಕೋಪಾತ್‌ಗಳಂತೆ ಭಯ ಹುಟ್ಟಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ.

ಈ ಗ್ಯಾಂಗ್‌ನ ಅತ್ಯಂತ ಅಪಾಯಕಾರಿ ತಂತ್ರವೆಂದರೆ ‘ಪ್ರತಿಭಟನೆ’. ತಮ್ಮ ಅಕ್ರಮಗಳನ್ನು ಯಾರಾದರೂ ಅಧಿಕಾರಿಗಳು ಪ್ರಶ್ನಿಸಿದರೆ ಅಥವಾ ಶಿಸ್ತು ಕ್ರಮಕ್ಕೆ ಮುಂದಾದರೆ, ತಕ್ಷಣವೇ ಈ ಕೆಳಗಿನ ‘ಕಸುಬು’ಗಳನ್ನು ಶುರು ಮಾಡುತ್ತಾರೆ ಎನ್ನಲಾಗಿದೆ.
ಸುಳ್ಳು ಪ್ರತಿಭಟನೆ : “ಹಾಸ್ಟೆಲ್‌ನಲ್ಲಿ ಊಟ ಸರಿಯಿಲ್ಲ, ಮೂಲಭೂತ ಸೌಕರ್ಯವಿಲ್ಲ” ಎಂದು ಬೊಬ್ಬೆ ಹೊಡೆಯುತ್ತಾ ಪ್ರತಿಭಟನೆಯ ನಾಟಕವಾಡುವುದು.
ವೈಯಕ್ತಿಕ ಟಾರ್ಗೆಟ್ : ತಮಗೆ ಬಗ್ಗದ ಪ್ರಾಮಾಣಿಕ ಅಧಿಕಾರಿಗಳನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿ, ಅವರ ಹೆಸರಿಗೆ ಮಸಿ ಬಳಿಯುವ ಸಂಚು ರೂಪಿಸುವುದು.
ಅಧಿಕಾರಿಗಳಿಗೆ ಬೆದರಿಕೆ : ಕರ್ತವ್ಯನಿರತ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಅವರನ್ನು ಮಾನಸಿಕವಾಗಿ ಕುಗ್ಗಿಸುವುದು ಇವರ ದೈನಂದಿನ ಕೆಲಸವಾಗಿದೆ.

ಅಮಾಯಕ ವಿದ್ಯಾರ್ಥಿಗಳ ಮೇಲೆ ದಾಳಿ : ಪ್ರಶ್ನಿಸಿದರೆ ಪ್ರಾಣಾಪಾಯ!
ಹಾಸ್ಟೆಲ್‌ನಲ್ಲಿ ನಡೆಯುತ್ತಿರುವ ಈ ಅನ್ಯಾಯವನ್ನು ವಿರೋಧಿಸುವ ಅಥವಾ ಓದಲು ಶಾಂತಿಯುತ ವಾತಾವರಣ ಬಯಸುವ ಅಮಾಯಕ ವಿದ್ಯಾರ್ಥಿಗಳ ಸ್ಥಿತಿ ಶೋಚನೀಯವಾಗಿದೆ. ಈ ಪುಂಡರ ಗ್ಯಾಂಗ್ ಅಂತಹ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸುತ್ತಿದೆ. “ಪ್ರಶ್ನಿಸಿದರೆ ನಿಮ್ಮ ಪ್ರಾಣಕ್ಕೆ ಗ್ಯಾರಂಟಿ ಇಲ್ಲ” ಎಂಬ ಸಂದೇಶವನ್ನು ಈ ಗ್ಯಾಂಗ್ ಸಾರುತ್ತಿದ್ದು, ಹಾಸ್ಟೆಲ್ ಒಳಗೆ ಒಂದು ರೀತಿಯ ‘ಭಯೋತ್ಪಾದಕ ವಾತಾವರಣ’ ನಿರ್ಮಾಣವಾಗಿದೆ ಎನ್ನಲಾಗಿದೆ.
ಇನ್ನು, ವರುಣ್ ಮತ್ತು ಮಹದೇವಸ್ವಾಮಿ ಹಾಸ್ಟೆಲ್‌ನ ನಿಯಮಗಳನ್ನು ಗಾಳಿಗೆ ತೂರಿ ತಮ್ಮದೇ ‘ಸಮಾನಾಂತರ ಸರ್ಕಾರ’ ನಡೆಸುತ್ತಿದ್ದಾರೆ. ಸೌಲಭ್ಯಗಳ ಹೆಸರಿನಲ್ಲಿ ಇಲಾಖೆಯನ್ನೇ ಬೆದರಿಸಿ ಅಕ್ರಮಗಳಿಗೆ ದಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ “ಮಕ್ಕಳನ್ನು ಹಾಸ್ಟೆಲ್‌ಗೆ ಕಳುಹಿಸುವುದು ಪ್ರಾಣ ಕಳೆದುಕೊಳ್ಳಲಿಕ್ಕಲ್ಲ” ಎಂದು ಪೋಷಕರು ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.
ಆಯುಕ್ತರ ಭೇಟಿಯ ನಂತರವೂ ಕಠಿಣ ಕಾನೂನು ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ಅಸಹಾಯಕತೆಯನ್ನು ಎತ್ತಿ ತೋರಿಸುತ್ತಿದ್ದು, ಶ್ರೀಗಂಧ ಕಾವಲು ಹಾಸ್ಟೆಲ್ ಮತ್ತೆ ಶೈಕ್ಷಣಿಕ ಕೇಂದ್ರವಾಗಬೇಕಾದರೆ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳಲೇಬೇಕು. ಕೇವಲ ಭರವಸೆಗಳಿಂದ ಈ ಗ್ಯಾಂಗ್ ಬಗ್ಗುವುದಿಲ್ಲ ಎಂಬುದು ಈಗ ಸಾಬೀತಾಗಿದೆ. ಮಹದೇವ್ ಕುಮಾರ್, ವರುಣ್, ಮಹದೇವಸ್ವಾಮಿ ಮತ್ತು ಅವರ ಗ್ಯಾಂಗ್ ಅನ್ನು ತಕ್ಷಣ ಹಾಸ್ಟೆಲ್‌ನಿಂದ ಉಚ್ಚಾಟಿಸಬೇಕು. ಮಾದಕ ವಸ್ತುಗಳ ಸರಬರಾಜು ಮತ್ತು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಇವರನ್ನು ಜೈಲಿಗಟ್ಟಬೇಕು. ಹಾಸ್ಟೆಲ್‌ನಲ್ಲಿ ಓದುತ್ತಿರುವ ಬಡ ಮತ್ತು ಅಮಾಯಕ ವಿದ್ಯಾರ್ಥಿಗಳಿಗೆ ಪೊಲೀಸ್ ರಕ್ಷಣೆ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ.
ವಿದ್ಯಾರ್ಥಿ ಎಂಬ ಮುಖವಾಡ ಧರಿಸಿ ರೌಡಿಸಂ ಮಾಡುತ್ತಿರುವ ಇಂತಹ ಕಿಡಿಗೇಡಿಗಳನ್ನು ಇಲಾಖೆ ಇನ್ನೂ ಪೋಷಿಸುತ್ತಿರುವುದು ಸಮಾಜಕ್ಕೆ ಮಾಡುತ್ತಿರುವ ದ್ರೋಹವಾಗಿದೆ. ಸರ್ಕಾರ ಈಗಲಾದರೂ ಎಚ್ಚೆತ್ತು ‘ಆಪರೇಷನ್ ಕ್ಲೀನ್’ ಮಾಡದಿದ್ದರೆ, ಶ್ರೀಗಂಧ ಕಾವಲು ಹಾಸ್ಟೆಲ್ ಅನಾಹುತಗಳ ಕೇಂದ್ರವಾಗುವುದರಲ್ಲಿ ಸಂಶಯವಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಇದನ್ನೂ ಓದಿ : ಹಿಮಂತ ‘2.0’ ಪರ್ವ ಆರಂಭ ; NDA ಮಿತ್ರಪಕ್ಷಗಳ 4 ಸಚಿವರೊಂದಿಗೆ ಇಂದು ಅಸ್ಸಾಂ ಸಿಎಂ ಆಗಿ ಶರ್ಮಾ ಪ್ರಮಾಣವಚನ!



















