ಗುವಾಹಟಿ : ಅಸ್ಸಾಂನಲ್ಲಿ ಸತತ ಮೂರನೇ ಬಾರಿಗೆ ಎನ್‌ಡಿಎ ಅಧಿಕಾರಕ್ಕೆ ಮರಳಿದ್ದು, ಇಂದು ಹಿಮಂತ ಬಿಸ್ವಾ ಶರ್ಮಾ ಅವರು ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರೊಂದಿಗೆ ಮಿತ್ರಪಕ್ಷಗಳ ಪ್ರಮುಖ ನಾಯಕರು ಸೇರಿದಂತೆ ಒಟ್ಟು ನಾಲ್ವರು ನೂತನ ಕ್ಯಾಬಿನೆಟ್ ಸಚಿವರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ನಡೆದ 126 ಸ್ಥಾನಗಳ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟ 102 ಸ್ಥಾನಗಳನ್ನು ಗೆದ್ದು ಪ್ರಚಂಡ ಬಹುಮತದೊಂದಿಗೆ ಭದ್ರವಾದ ಸರ್ಕಾರ ರಚನೆಗೆ ಮುಂದಾಗಿದೆ.
ಗುವಾಹಟಿಯ ಖಾನಾಪಾರಾ ವೆಟರ್ನರಿ ಕಾಲೇಜು ಮೈದಾನದಲ್ಲಿ ನಡೆಯಲಿರುವ ಈ ಭವ್ಯ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಸೇರಿದಂತೆ ಪ್ರಮುಖ ಗಣ್ಯರು ಸಾಕ್ಷಿಯಾಗಲಿದ್ದಾರೆ. ಇವರಲ್ಲದೆ ದೇಶದ 40ಕ್ಕೂ ಹೆಚ್ಚು ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 82 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಅದರ ಮಿತ್ರಪಕ್ಷಗಳಾದ ಅಸೋಮ್ ಗಣ ಪರಿಷತ್ (ಎಜಿಪಿ) ಹಾಗೂ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ತಲಾ 10 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿವೆ.
ಸಂಪುಟ ಸೇರಲಿರುವ ಪ್ರಮುಖ ನಾಯಕರು
ಹಿಮಂತ ಬಿಸ್ವಾ ಶರ್ಮಾ ಅವರ ಹೊಸ ಸಂಪುಟದಲ್ಲಿ ಅನುಭವಿಗಳಿಗೆ ಮಣೆ ಹಾಕಲಾಗಿದೆ. ಎನ್‌ಡಿಎಯ ಪ್ರಮುಖ ಮಿತ್ರಪಕ್ಷವಾದ ಎಜಿಪಿಯ ಅಧ್ಯಕ್ಷ ಹಾಗೂ ಬೊಕಾಖಾಟ್ ಕ್ಷೇತ್ರದ ಶಾಸಕ ಅತುಲ್ ಬೋರಾ ಅವರು ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಹಿಂದೆ ಕೃಷಿ, ನಗರಾಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ನಿಭಾಯಿಸಿದ ಅನುಭವ ಇವರಿಗಿದೆ. ಹಿಮಂತ 2.0 ಸರ್ಕಾರದ ಪ್ರಬಲ ಮಹಿಳಾ ಮುಖವಾಗಿ ಅಜಂತಾ ನಿಯೋಗ್ ಅವರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
2001ರಿಂದ ಸತತವಾಗಿ ಗೋಲಾಘಾಟ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಇವರು, ಅಸ್ಸಾಂನ ಅತಿ ದೀರ್ಘಕಾಲದ ಮಹಿಳಾ ಶಾಸಕಿಯಾಗಿದ್ದು, ರಾಜ್ಯದ ಮೊದಲ ಮಹಿಳಾ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಟೀ ಎಸ್ಟೇಟ್ ಕಾರ್ಮಿಕರ ಸಮುದಾಯವನ್ನು ಪ್ರತಿನಿಧಿಸುವ ಹಿರಿಯ ಬಿಜೆಪಿ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ರಾಮೇಶ್ವರ್ ತೇಲಿ ಅವರಿಗೂ ನೂತನ ಸಂಪುಟದಲ್ಲಿ ಸ್ಥಾನ ಒಲಿದಿದೆ. ದುಲಿಯಾಜನ್ ಕ್ಷೇತ್ರದಿಂದ ಆಯ್ಕೆಯಾಗಿರುವ ಇವರು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇವರೊಂದಿಗೆ ಮಜ್ಬತ್ ಕ್ಷೇತ್ರದ ಶಾಸಕ, ಬಿಪಿಎಫ್ ಪಕ್ಷದ ನಾಯಕ ಚರಣ್ ಬೊರೊ ಕೂಡ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇವರು ಹಿಂದಿನ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ನೂತನ ಸ್ಪೀಕರ್ ಆಗಿ ರಂಜೀತ್ ದಾಸ್
ಸಚಿವ ಸಂಪುಟ ರಚನೆಯ ಜೊತೆಗೆ ಅಸ್ಸಾಂ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಹಿರಿಯ ಬಿಜೆಪಿ ನಾಯಕ ರಂಜೀತ್ ಕುಮಾರ್ ದಾಸ್ ಅವರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ. 2026ರ ಚುನಾವಣೆಯಲ್ಲಿ ಭವಾನಿಪುರ-ಸೋರ್ಭೋಗ್ ಕ್ಷೇತ್ರದಿಂದ ಸಿಪಿಐ(ಎಂ) ಅಭ್ಯರ್ಥಿಯನ್ನು ಮಣಿಸಿ ಆಯ್ಕೆಯಾಗಿರುವ ಇವರು, ತಳಮಟ್ಟದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ 2016-17ರಲ್ಲಿ ಸ್ಪೀಕರ್ ಆಗಿ, ಅಸ್ಸಾಂ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಹಾಗೂ ಸಚಿವರಾಗಿ ಆಡಳಿತ ನಡೆಸಿದ ಅಪಾರ ಅನುಭವ ಇವರ ಬೆನ್ನಿಗಿದೆ.
ಇದನ್ನೂ ಓದಿ : ಮೋದಿ ಕರೆಯ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ : ಇಂದಿನ ದರ ಎಷ್ಟಿದೆ?



















