ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಮಹತ್ವದ ದಿನವಾಗಿದ್ದು, A14 ಆರೋಪಿ ಪ್ರದೋಷ್ ಸಲ್ಲಿಸಿರುವ ಮಾಫಿ ಸಾಕ್ಷಿಯಾಗುವ ಅರ್ಜಿಯ ಕುರಿತು 59ನೇ ಸಿಸಿಹೆಚ್ ನ್ಯಾಯಾಲಯ ಆದೇಶ ಪ್ರಕಟಿಸಲಿದೆ. ಪ್ರದೋಷ್‌ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ನ್ಯಾಯಾಲಯದ ನಿಲುವು ಏನಿರಲಿದೆ ಎಂಬ ಕುತೂಹಲ ಮೂಡಿದೆ. ಇದೇ ವೇಳೆ, ಮಾಫಿ ಸಾಕ್ಷಿಯಾಗಲು ಅವಕಾಶ ನೀಡುವ ಮೊದಲು ಉಳಿದ ಆರೋಪಿಗಳ ವಾದವನ್ನು ಆಲಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆಯೂ ನ್ಯಾಯಾಲಯ ಇಂದು ತೀರ್ಮಾನಿಸುವ ಸಾಧ್ಯತೆಯಿದೆ.
ಈ ಹಿಂದೆ ಪ್ರಕರಣದ A14 ಆರೋಪಿ ಪ್ರದೋಷ್ ಪರ ವಕೀಲ ದಿವಾಕರ್ ವಾದ ಮಂಡಿಸಿದ್ದರು. ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಪ್ರಸನ್ನ ಕುಮಾರ್, ನಟ ದರ್ಶನ್ ಪರ ಹಿರಿಯ ವಕೀಲ ಹಷ್ಮಾತ್ ಪಾಷಾ ಹಾಗೂ ಆರೋಪಿ ವಿನಯ್ ಪರ ವಕೀಲ ರಂಗನಾಥ್ ರೆಡ್ಡಿ ವಾದ ಮಂಡಿಸಿದ್ದರು. ಮಾಫಿ ಸಾಕ್ಷಿಗೆ ಕ್ಷಮಾದಾನ ನೀಡುವ ಮೊದಲು ನ್ಯಾಯಾಲಯ ಪರಿಗಣಿಸಬೇಕಾದ ಅಂಶಗಳು ಹಾಗೂ ಅರ್ಜಿ ಅಂಗೀಕಾರವಾದರೆ ಪ್ರಕರಣದ ಮುಂದಿನ ಸಾಕ್ಷ್ಯ ಪ್ರಕ್ರಿಯೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ವಾದ-ಪ್ರತಿವಾದ ನಡೆದಿತ್ತು.
ಇಂದು ನ್ಯಾಯಾಧೀಶೆ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಅವರಿಂದ ಆದೇಶ ಹೊರಬೀಳಲಿದ್ದು, ಪ್ರದೋಷ್ ಸಲ್ಲಿಸಿರುವ ಅರ್ಜಿ ಅಂಗೀಕಾರವಾಗುತ್ತದೆಯೇ ಅಥವಾ ತಿರಸ್ಕಾರವಾಗುತ್ತದೆಯೇ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅರ್ಜಿ ಅಂಗೀಕಾರವಾದರೆ ಪ್ರಕರಣದ ಮುಂದಿನ ವಿಚಾರಣೆಯಲ್ಲಿ ಪ್ರದೋಷ್ ಅವರ ಹೇಳಿಕೆ ಹಾಗೂ ಸಾಕ್ಷ್ಯ ಪ್ರಮುಖವಾಗುವ ಸಾಧ್ಯತೆಯಿದೆ. ಒಂದು ವೇಳೆ ಅರ್ಜಿ ತಿರಸ್ಕಾರವಾದರೆ, ಮುಂದಿನ ಕಾನೂನು ಪ್ರಕ್ರಿಯೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬ ಕುತೂಹಲ ಮುಂದುವರಿಯಲಿದೆ.
ಇನ್ನು ಈ ಆದೇಶ ನಟ ದರ್ಶನ್ ಸೇರಿದಂತೆ ಪ್ರಕರಣದ ಎಲ್ಲಾ ಆರೋಪಿಗಳಿಗೂ ಮಹತ್ವದ್ದಾಗಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್, ಪವಿತ್ರಗೌಡ ಸೇರಿದಂತೆ ಇತರೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. A14 ಆರೋಪಿ ಪ್ರದೋಷ್ ಅವರನ್ನು ಪ್ರತ್ಯೇಕ ಕೊಠಡಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗುತ್ತದೆ. ಹೀಗಾಗಿ 59ನೇ ಸಿಸಿಹೆಚ್ ನ್ಯಾಯಾಲಯದ ಇಂದಿನ ಆದೇಶದತ್ತ ಆರೋಪಿಗಳು, ಕುಟುಂಬಸ್ಥರು ಹಾಗೂ ಪ್ರಕರಣದ ಎರಡೂ ಬದಿಯ ವಕೀಲರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ಪ್ರಸಿದ್ದ ಹೋಟೆಲ್‌ಗಳ ಮೇಲೆ ಫುಡ್‌ಸೇಫ್ಟಿ ಅಧಿಕಾರಿಗಳ ದಾಳಿ : 132 ಕೆಜಿ ಕೊಳೆತ ಆಹಾರ ವಶ.. UB ಸಿಟಿಯ ಸ್ಕೈ ಲಾಂಜ್‌ಗೆ ಬೀಗ!


















