ಜಮ್ಮು: ಜಮ್ಮು– ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸಗೈದಿದ್ದು, ಶುಕ್ರವಾರ ಸಂಜೆ ಕುಲ್ಗಾಮ್ ಜಿಲ್ಲೆಯ ಕಿಲ್ಲಾಮ್ ಗ್ರಾಮದಲ್ಲಿ ಹೊರರಾಜ್ಯದ ಇಬ್ಬರು ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಇಬ್ಬರೂ ಅಸುನೀಗಿದ್ದಾರೆ. ದಾಳಿಗೊಳಗಾದ ಒಬ್ಬ ಕಾರ್ಮಿಕ ಸ್ಥಳದಲ್ಲೇ ಸಾವಿಗೀಡಾದರೆ, ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ಛತ್ತೀಸ್‌ಗಢ ಮೂಲದ ದೀಪಕ್ ಮತ್ತು ಭೂಪೇಂದರ್ ಎಂದು ಗುರುತಿಸಲಾಗಿದೆ. ಘಟನೆ ನಡೆದ ಬೆನ್ನಲ್ಲೇ ಪ್ರದೇಶವನ್ನು ಸುತ್ತುವರಿದಿರುವ ಭದ್ರತಾ ಪಡೆಗಳು ಉಗ್ರರ ಪತ್ತೆಗಾಗಿ ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಿವೆ.
10 ದಿನಗಳಲ್ಲಿ ಎರಡನೇ ದಾಳಿ
ಕಳೆದ 10 ದಿನಗಳ ಅಂತರದಲ್ಲಿ ಭಯೋತ್ಪಾದಕರು ನಡೆಸಿದ ಎರಡನೇ ಟಾರ್ಗೆಟೆಡ್ ದಾಳಿ ಇದಾಗಿದೆ. ಕಳೆದ ವಾರಷ್ಟೇ ಅನಂತನಾಗ್‌ನಲ್ಲಿ ಪೊಲೀಸರೊಬ್ಬರನ್ನು ಉಗ್ರರು ಇದೇ ರೀತಿ ಹತ್ಯೆ ಮಾಡಿದ್ದರು. ಈ ಸರಣಿ ದಾಳಿಗಳ ನಂತರ ಕಾಶ್ಮೀರದಾದ್ಯಂತ ಪೊಲೀಸರು ತೀವ್ರ ನಿಗಾ ವಹಿಸಿದ್ದು, ಶಂಕಿತ 3,000ಕ್ಕೂ ಹೆಚ್ಚು ಜನರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಈ ರೀತಿಯ ಸಾಮೂಹಿಕ ಬಂಧನಗಳಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು ಎಂದು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಎಚ್ಚರಿಸಿದ್ದಾರೆ.
ಅಮರನಾಥ ಯಾತ್ರೆ ವೇಳೆ ಬಿಗಿ ಭದ್ರತೆ
ಪ್ರಸ್ತುತ ಜಮ್ಮು-ಕಾಶ್ಮೀರದಲ್ಲಿ ಪವಿತ್ರ ಅಮರನಾಥ ಯಾತ್ರೆ ನಡೆಯುತ್ತಿದ್ದು, ಈ ಹಂತದಲ್ಲೇ ಉಗ್ರರು ಇಂತಹ ಕೃತ್ಯಕ್ಕೆ ಕೈಹಾಕಿರುವುದು ಆತಂಕ ಮೂಡಿಸಿದೆ. ಈಗಾಗಲೇ ಕಾಶ್ಮೀರದಲ್ಲಿ ಬೃಹತ್ ಮಟ್ಟದ ಭದ್ರತಾ ವ್ಯವಸ್ಥೆ ಜಾರಿಯಲ್ಲಿದ್ದು, ಯಾತ್ರೆಯ ಸುರಕ್ಷತೆಗಾಗಿ ಹೆಚ್ಚುವರಿಯಾಗಿ 670 ಅರೆಸೈನಿಕ ಪಡೆಗಳ ಕಂಪನಿಗಳನ್ನು ನಿಯೋಜಿಸಲಾಗಿದೆ. ಭದ್ರತೆ ಬಿಗಿಯಾಗಿದ್ದರೂ ಉಗ್ರರ ಈ ದಾಳಿ ನಡೆದಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಪಾಕ್‌ನಲ್ಲಿ ಭೀಕರ ಹಿಮಪಾತ : ಖ್ಯಾತ ಪರ್ವತಾರೋಹಿ ನಿರ್ಮಲ್ ಪುರ್ಜಾ ನಾಪತ್ತೆ.. ಇಬ್ಬರು ಸಾವು!



















