ಬೆಂಗಳೂರು : ನೌಕರರ ರಾಜ್ಯ ವಿಮಾ ನಿಗಮವು (ESIC) ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ಪ್ರಮುಖ ಸರ್ಕಾರಿ ಸಂಸ್ಥೆಯಾಗಿದೆ. ಮಾಸಿಕ 21 ಸಾವಿರ ರೂ. ಅಥವಾ ಅದಕ್ಕಿಂತ ಕಡಿಮೆ ಸಂಬಳ ಹೊಂದಿರುವ ಖಾಸಗಿ ಉದ್ಯೋಗಿಗಳು, ಸಂಘಟಿತ ವಲಯದ ಕಾರ್ಮಿಕರಿಗೆ ಇಎಸ್ಐ ಕಾರ್ಡ್ ನೀಡಲಾಗುತ್ತದೆ. ಇವರಿಗೆ ಕಡಿಮೆ ವೆಚ್ಚದ ಅಥವಾ ಉಚಿತ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಈಗ ಇಎಸ್ಐ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ.
ವಿಮಾದಾರರು ಇಎಸ್ಐ ಕಾರ್ಡಿಗೆ (ಇ-ಪೆಹಚಾನ್ ಕಾರ್ಡ್) ಆಧಾರ್ ಲಿಂಕ್ ಮಾಡುವುದನ್ನು ಈಗ ಕಡ್ಡಾಯಗೊಳಿಸಲಾಗಿದೆ. ಕಡಿಮೆ ವೆಚ್ಚದಲ್ಲಿ ಅಥವಾ ನಿಯಮಾನುಸಾರ ಉಚಿತ ವೈದ್ಯಕೀಯ ಚಿಕಿತ್ಸೆ ಸೇರಿ ಹಲವು ಸೌಲಭ್ಯಗಳನ್ನು ಪಡೆಯಲು ಲಿಂಕ್ ಮಾಡುವುದು ಅನಿವಾರ್ಯವಾಗಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಸಾಮಾಜಿಕ ಭದ್ರತಾ ಸಂಹಿತೆ-2020ರ ಸೆಕ್ಷನ್ 142ರ ಅನ್ವಯ ಆಧಾರ್ ದೃಢೀಕರಣಕ್ಕೆ ಸಂಬಂಧಿಸಿದ ಕ್ರಮಗಳನ್ನು ಜಾರಿಗೆ ತರಲು ಇಎಸ್ಐಸಿಗೆ ಮಹತ್ವದ ಸೂಚನೆ ನೀಡಿದೆ.
ಹಾಗಾಗಿ, ಇಎಸ್ಐ ಕಾರ್ಡ್ ಹೊಂದಿರುವವರು ಕೂಡಲೇ ಇಎಸ್ಐ ಕಾರ್ಡಿಗೆ ಆಧಾರ್ ಲಿಂಕ್ ಮಾಡಬೇಕು. ಭವಿಷ್ಯದಲ್ಲಿ ಯಾವುದೇ ಆರೋಗ್ಯ ಸೇವೆಗಳನ್ನು ತಡೆರಹಿತವಾಗಿ ಪಡೆಯಲು ಲಿಂಕ್ ಮಾಡುವುದು ಉತ್ತಮವಾಗಿದೆ. ಇದಕ್ಕಾಗಿ ವಿಮಾದಾರರು ಕಚೇರಿಗಳಿಗೆ ಅಲೆಯಬೇಕಿಲ್ಲ. ಆನ್ ಲೈನ್ ಮೂಲಕವೇ ಲಿಂಕ್ ಮಾಡಬಹುದಾಗಿದೆ. ಹೇಗೆ ಮಾಡಬೇಕು ಎಂಬುದರ ಗೈಡೆನ್ಸ್ ಇಲ್ಲಿದೆ.
ಆಧಾರ್ ಲಿಂಕ್ ಮಾಡುವುದು ಹೇಗೆ?
- ಇಎಸ್ಐಸಿ ಅಧಿಕೃತ ವೆಬ್ ಸೈಟ್ https://www.esic.gov.in ಗೆ ಭೇಟಿ ನೀಡಬೇಕು.
- ಹೋಮ್ ಪೇಜ್ ನಲ್ಲಿ Insured Person/Beneficiary ಮೇಲೆ ಕ್ಲಿಕ್ ಮಾಡಬೇಕು.
- ನಿಮ್ಮ ವಿಮೆದಾರರ ಖಾತೆಯ ಲಾಗಿನ್ ವಿವರ ನಮೂದಿಸಬೇಕು.
- ಲಾಗಿನ್ ಆದ ಬಳಿಕ Aadhaar Seeding ಅಥವಾ ಆಧಾರ್ ಜೋಡಣೆ ಆಪ್ಶನ್ ಹುಡುಕಬೇಕು.
- ಆಧಾರ್ ಸಂಖ್ಯೆ ನಮೂದಿಸುವ ಮೂಲಕ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಬೇಕು.
- ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಬೇಕು.
- ಇದರೊಂದಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿಯುತ್ತದೆ.
ಇದನ್ನೂ ಓದಿ : ಗುರುಗ್ರಾಮ ಹಿಟ್ ಆ್ಯಂಡ್ ರನ್ ಕೇಸ್ : ಆರೋಪಿ ಕಲ್ಯಾಣ್ ವಿರುದ್ಧ ಕೊ* ಯತ್ನ ಪ್ರಕರಣ ದಾಖಲು



















