ಗುರುಗ್ರಾಮ : ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಮಹಿಳಾ ಬೈಕರ್ ಸಿಯಾ ಅವರ ಆಪ್ರಿಲಿಯಾ ಸ್ಪೋರ್ಟ್ಸ್ ಬೈಕ್‌ಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಭಾರೀ ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ಘಟನೆಗೆ ಸಂಬಂಧಿಸಿದಂತೆ, ಗುರುಗ್ರಾಮ ಪೊಲೀಸರು ಆರೋಪಿ ಕಲ್ಯಾಣ್ ಬೈನ್ಸ್ಲಾ ವಿರುದ್ಧ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಭಾನುವಾರ ಬೆಳಗಿನ ಜಾವ ನಡೆದಿರುವ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.
ಘಟನೆ ನಡೆದ ಎರಡು ದಿನಗಳ ಬಳಿಕ, ಸಿಸಿಟಿವಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯಡಿ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾದ ಕೊಲೆಯತ್ನ ಕಾಯ್ದೆಯಡಿ ಕಠಿಣ ಪ್ರಕರಣ ದಾಖಲಿಸಿದ್ದಾರೆ. “ಯಾವುದೇ ಕಾರಣಕ್ಕೂ ಕಾನೂನು ಉಲ್ಲಂಘನೆಯನ್ನು ಸಹಿಸುವುದಿಲ್ಲ, ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ಪೊಲೀಸರು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಇನ್ನೊಂದೆಡೆ, ಆರೋಪಿ ಕಲ್ಯಾಣ್ ಬೈನ್ಸ್ಲಾ ಮಾಧ್ಯಮ ಸಂದರ್ಶನವೊಂದರಲ್ಲಿ, “ಬೈಕ್ ಚಲಾಯಿಸುತ್ತಿದ್ದದ್ದು ಮಹಿಳೆ ಎಂದು ನನಗೆ ತಿಳಿದಿರಲಿಲ್ಲ, ಘಟನೆಯ ಒಂದು ಬದಿಯಷ್ಟೇ ಬಿತ್ತರವಾಗುತ್ತಿದೆ. ನಮ್ಮ ವಾದವನ್ನು ಯಾರೂ ಆಲಿಸುತ್ತಿಲ್ಲ” ಎಂದು ಆರೋಪಿಸಿದ್ದು, ಸಿಯಾ ಅವರ ಬಗ್ಗೆ ಸಹಾನುಭೂತಿ ಇದೆ ಎಂದಿದ್ದಾರೆ.
ಆರೋಪಿಯ ಹೇಳಿಕೆಗೆ ಬೈಕರ್ ಸಿಯಾ ತೀವ್ರ ಆಕ್ರೋಶ
ಆರೋಪಿಯ ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಬೈಕರ್ ಸಿಯಾ, “ನಿಮಗೆ ನಿಜವಾಗಿಯೂ ಅನುಕಂಪವಿದ್ದರೆ ಅಪಘಾತದ ನಂತರ ಕಾರನ್ನು ಏಕೆ ನಿಲ್ಲಿಸಲಿಲ್ಲ? ನಾನು ಸ್ಥಳದಲ್ಲೇ ಪ್ರಾಣ ಕಳೆದುಕೊಳ್ಳಬೇಕಿತ್ತು. ಅದೃಷ್ಟವಶಾತ್ ಬದುಕುಳಿದಿದ್ದೇನೆ” ಎಂದು ಪ್ರತ್ಯುತ್ತರ ನೀಡಿದ್ದಾರೆ. ಅಲ್ಲದೆ, ನನ್ನ ಕೇಶವೂ ಉದ್ದವಿದೆ. ಕಾರಿನಲ್ಲಿದ್ದವರು ಹತ್ತಿರ ಬಂದು ಸನ್ನೆಗಳನ್ನೂ ಮಾಡಿದ್ದರು. ಅಂದರೆ ನಾನು ಬೈಕರ್ ಮಹಿಳೆ ಎಂಬುದು ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು ಎಂದು ತಿಳಿಸಿದ್ದಾರೆ. “ಅಪಾಯಕಾರಿಯಾಗಿ ಬೈಕ್ ಚಲಾಯಿಸುತ್ತಿದ್ದೆವು ಎಂದು ಆರೋಪಿಸುವ ಕಾರಿನಲ್ಲಿದ್ದವರು, ಉದ್ದಕ್ಕೂ ನನ್ನನ್ನೇಕೆ ಬೆನ್ನಟ್ಟುತ್ತಿದ್ದರು?” ಎಂದು ಪ್ರಶ್ನಿಸಿರುವ ಸಿಯಾ, ನ್ಯಾಯಕ್ಕಾಗಿ ತಮ್ಮ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.
ಅಪಘಾತದ ಭೀಕರತೆ
ಬಿಳಿ ಬಣ್ಣದ ಸಿಯಾಜ್ (Ciaz) ಕಾರಿನಲ್ಲಿದ್ದವರು ಮದ್ಯಪಾನ ಮಾಡಿದ್ದು, ಬೈಕನ್ನು ತಡೆಯಲು ಯತ್ನಿಸಿ ಕೊನೆಗೆ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಬೈಕ್ ಸುಮಾರು 300 ಮೀಟರ್‌ಗಳಷ್ಟು ರಸ್ತೆಯಲ್ಲಿ ಎಳೆಯಲ್ಪಟ್ಟು ಬೆಂಕಿಯ ಕಿಡಿಗಳು ಹಾರಿದ್ದವು ಎಂದು ಸಿಯಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯಲ್ಲಿ ಸಿಯಾ ಅವರಿಗೆ ಮೂಳೆ ಮುರಿತದಂತಹ ದೊಡ್ಡ ಗಾಯಗಳಾಗದಿದ್ದರೂ, ಶರೀರದಾದ್ಯಂತ ತೀವ್ರ ಸ್ನಾಯು ನೋವು ಹಾಗೂ ಸವೆತದ ಗಾಯಗಳಾಗಿವೆ. ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುಗ್ರಾಮದ ಸೆಕ್ಟರ್ 56 ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಂತ್ರಸ್ತೆಯ ಹೇಳಿಕೆಯನ್ನು ಪಡೆದು ತನಿಖೆ ಚುರುಕುಗೊಳಿಸಲಾಗಿದೆ.
ಇದನ್ನೂ ಓದಿ : ‘ಧೋನಿಯೇ ಸಾಕು’ : CSK ಕೋಚ್ ಹುದ್ದೆಗೆ ಹೆಮಾಂಗ್ ಬದಾನಿ ಹೆಸರು ತಿರಸ್ಕರಿಸಿದ ಶ್ರೀಕಾಂತ್



















