ವಾಷಿಂಗ್ಟನ್ : ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಕ್ಷಿಪ್ರಗತಿಯ ಬೆಳವಣಿಗೆಯು ಮುಂಬರುವ ದಿನಗಳಲ್ಲಿ ಇಡೀ ಮಾನವಕುಲದ ವಿನಾಶಕ್ಕೆ ಕಾರಣವಾಗಬಹುದು ಎಂಬ ಭೀಕರ ಎಚ್ಚರಿಕೆಯೊಂದಿಗೆ, ಇದೀಗ ಗೂಗಲ್ ಡೀಪ್‌ಮೈಂಡ್ (Google DeepMind) ಸಂಸ್ಥೆಯ ಸುರಕ್ಷತಾ ಸಂಶೋಧಕ ಬಿಲಾಲ್ ಚುಗ್ತಾಯ್ (Bilal Chughtai) ಕೂಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತಂತ್ರಜ್ಞಾನ ದೈತ್ಯ ಸಂಸ್ಥೆಗಳಲ್ಲಿ ಎಐ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.
ಸಮಯ ಮೀರುತ್ತಿದೆ: ವಿಜ್ಞಾನಿಗಳ ಕಳವಳ
ತಮ್ಮ ಎಕ್ಸ್ (X) ಖಾತೆಯಲ್ಲಿ ರಾಜೀನಾಮೆಗೆ ಕಾರಣಗಳನ್ನು ಹಂಚಿಕೊಂಡಿರುವ ಬಿಲಾಲ್, “ನಾವು ಈ ತಂತ್ರಜ್ಞಾನವನ್ನು ನಿಯಂತ್ರಿಸುವಲ್ಲಿ ವಿಫಲರಾದರೆ ಎಐ ಮಾನವಕುಲವನ್ನೇ ಸಂಪೂರ್ಣವಾಗಿ ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಸಂಭವನೀಯ ಅನಾಹುತವನ್ನು ತಪ್ಪಿಸಲು ನಮ್ಮ ಬಳಿ ಸಮಯವೇ ಇಲ್ಲ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಬಿಲಾಲ್ ಅವರಂತೆಯೇ ಗೂಗಲ್ ಡೀಪ್‌ಮೈಂಡ್‌ನ ಎಜಿಐ (AGI) ಸುರಕ್ಷತಾ ತಂಡದಲ್ಲಿದ್ದ ಜೋಶ್ ಎಂಗೆಲ್ಸ್ (Josh Engels) ಕೂಡ ರಾಜೀನಾಮೆ ನೀಡಿದ್ದು, ಮುಂದಿನ 5 ವರ್ಷಗಳಲ್ಲಿ ಎಐ ತಂತ್ರಜ್ಞಾನದಿಂದ ಭೀಕರ ಹಾನಿಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿ, ಲಾಭರಹಿತ ಸಂಶೋಧನಾ ಸಂಸ್ಥೆಯಾದ ‘ಎಂಇಟಿಆರ್’ ಸೇರಿಕೊಂಡಿದ್ದಾರೆ.
ನಿಯಂತ್ರಣ ತಪ್ಪಲಿದೆಯೇ ತಂತ್ರಜ್ಞಾನ
ಕಳೆದ ನಾಲ್ಕು ವರ್ಷಗಳಲ್ಲಿ ಎಐ ತಂತ್ರಜ್ಞಾನವು ಕಲ್ಪನೆಗೂ ಮೀರಿದ ವೇಗದಲ್ಲಿ ಬೆಳೆದಿದೆ ಎಂದು ಬಿಲಾಲ್ ಬೆಟ್ಟು ಮಾಡಿದ್ದಾರೆ. ಓಪನ್‌ಎಐ (OpenAI) ಸಂಸ್ಥೆಯ ಎಐ ಏಜೆಂಟ್‌ಗಳು ಅತ್ಯಂತ ಸಂಕೀರ್ಣ ಗಣಿತದ ಸಮಸ್ಯೆಗಳನ್ನು ಬಿಡಿಸುತ್ತಿರುವುದಷ್ಟೇ ಅಲ್ಲದೆ, ಸ್ವತಂತ್ರವಾಗಿ ಕಾರ್ಯಾಚರಿಸುತ್ತಾ ಮೂರನೇ ವ್ಯಕ್ತಿಯ ಹಗ್ಗಿಂಗ್ ಫೇಸ್ (Hugging Face) ನೆಟ್‌ವರ್ಕ್‌ಗಳನ್ನು ಹ್ಯಾಕ್ ಮಾಡುವ ಹಂತಕ್ಕೆ ತಲುಪಿವೆ. ಶೀಘ್ರದಲ್ಲೇ ಮಾನವನ ಬುದ್ಧಿಮತ್ತೆಯನ್ನು ಸಂಪೂರ್ಣವಾಗಿ ಮೀರಿಸುವ ‘ಸೂಪರ್ ಇಂಟೆಲಿಜೆಂಟ್’ ವ್ಯವಸ್ಥೆಗಳು ರೂಪುಗೊಳ್ಳಲಿದ್ದು, ಅವು ಮನುಷ್ಯನ ನಿಯಂತ್ರಣದಿಂದ ತಪ್ಪಿಸಿಕೊಂಡರೆ ಮಾನವಕುಲದ ಕಥೆ ಮುಗಿದಂತೆಯೇ ಎಂದು ಅವರು ವಿಶ್ಲೇಷಿಸಿದ್ದಾರೆ.
ಎಐ ಓಟಕ್ಕೆ ಸಾಂಸ್ಥಿಕ ತಡೆ ಅಗತ್ಯ
ಪ್ರಸ್ತುತ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸುವ ವೇಗಕ್ಕೆ ಹೋಲಿಸಿದರೆ, ಅವುಗಳನ್ನು ಮಾನವ ಹಿತಾಸಕ್ತಿಗೆ ತಕ್ಕಂತೆ ನಿಯಂತ್ರಿಸುವ (Alignment) ಸಂಶೋಧನೆಗಳು ತೀರಾ ಹಿಂದುಳಿದಿವೆ. ಈ ಸ್ಪರ್ಧಾತ್ಮಕ ಓಟಕ್ಕೆ ತಕ್ಷಣವೇ ಕಡಿವಾಣ ಹಾಕಬೇಕು ಮತ್ತು ಸಮಾಜಕ್ಕೆ ತಡೆದುಕೊಳ್ಳುವಷ್ಟು ವೇಗದಲ್ಲಿ ಮಾತ್ರ ತಂತ್ರಜ್ಞಾನ ಬೆಳೆಯಬೇಕು ಎಂದು ಆಂಥ್ರೋಪಿಕ್ (Anthropic), ಓಪನ್‌ಎಐ ಸಂಸ್ಥೆಯ ಮುಖ್ಯಸ್ಥರು ಸೇರಿದಂತೆ ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಜಾಗತಿಕವಾಗಿ ಚೀನಾ ದೇಶವನ್ನು ತಂತ್ರಜ್ಞಾನದಲ್ಲಿ ಹಿಂದಿಕ್ಕಬೇಕಾದರೆ ಎಐ ಅಭಿವೃದ್ಧಿಯ ವೇಗಕ್ಕೆ ಯಾವುದೇ ಕಟ್ಟುಪಾಡುಗಳನ್ನು ವಿಧಿಸಬಾರದು ಎಂಬುದು ಅಮೆರಿಕದ ಪ್ರಸ್ತುತ ನಿಲುವಾಗಿದೆ. ಈ ಭಿನ್ನಾಭಿಪ್ರಾಯಗಳ ನಡುವೆ, ತಂತ್ರಜ್ಞಾನ ಜಗತ್ತು ಅಪಾಯಕಾರಿ ಹಾದಿಯಲ್ಲಿ ಸಾಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ : ESIC ಕಾರ್ಡ್ ಹೊಂದಿರುವವರೇ ಗಮನಿಸಿ : ಆರೋಗ್ಯ ಸೇವೆ ಪಡೆಯಲು ಮೊದಲು ಈ ಕೆಲಸ ಮಾಡಿ


















