ವಾಷಿಂಗ್ಟನ್ : ಅಮೆರಿಕ ಮತ್ತು ಇರಾನ್ ಸಂಘರ್ಷವು ಮತ್ತೊಂದು ಮಜಲು ತಲುಪಿದ್ದು, ಇತ್ತೀಚೆಗಷ್ಟೇ ಅಮೆರಿಕ ವಿಧಿಸಿದ್ದ ನೌಕಾ ದಿಗ್ಬಂಧನವನ್ನು ಉಲ್ಲಂಘಿಸಲು ಯತ್ನಿಸಿದ ಇರಾನ್ ಧ್ವಜ ಹೊಂದಿದ ‘ತೌಸ್ಕಾ’ (Touska) ಎಂಬ ಬೃಹತ್ ಸರಕು ಹಡಗನ್ನು ಅಮೆರಿಕದ ನೌಕಾಪಡೆ ಒಮಾನ್ ಕೊಲ್ಲಿಯಲ್ಲಿ ಗುಂಡಿನ ದಾಳಿ ನಡೆಸಿ ವಶಪಡಿಸಿಕೊಂಡಿದೆ. ಈ ಘಟನೆಯು ಉಭಯ ದೇಶಗಳ ನಡುವಿನ ಕದನ ವಿರಾಮಕ್ಕೆ ದೊಡ್ಡ ಪೆಟ್ಟು ನೀಡಿದ್ದು, ಇರಾನ್ ಇದನ್ನು “ಸಶಸ್ತ್ರ ಕಡಲ್ಗಳ್ಳತನ” ಎಂದು ಕರೆದಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ ನೀಡಿರುವ ಮಾಹಿತಿಯಂತೆ, ಗೈಡೆಡ್-ಮಿಸೈಲ್ ವಿಧ್ವಂಸಕ ನೌಕೆ ‘ಯುಎಸ್ಎಸ್ ಸ್ಪ್ರೂಯನ್ಸ್’ (USS Spruance) ಇರಾನ್‌ನ ಬಂದರ್ ಅಬ್ಬಾಸ್ ಕಡೆಗೆ ಸಾಗುತ್ತಿದ್ದ ತೌಸ್ಕಾ ಹಡಗನ್ನು ತಡೆದಿದೆ. ಸುಮಾರು ಆರು ಗಂಟೆಗಳ ಕಾಲ ಹಡಗನ್ನು ನಿಲ್ಲಿಸುವಂತೆ ಪದೇ ಪದೇ ಎಚ್ಚರಿಕೆ ನೀಡಿದರೂ, ತೌಸ್ಕಾ ಸಿಬ್ಬಂದಿ ಅದನ್ನು ನಿರ್ಲಕ್ಷಿಸಿದ್ದಾರೆ. ಅಂತಿಮವಾಗಿ, ಹಡಗನ್ನು ನಿಲ್ಲಿಸಲು ಸ್ಪ್ರೂಯನ್ಸ್ ನೌಕೆಯು 5-ಇಂಚಿನ ಎಂಕೆ 45 ಗನ್ ಮೂಲಕ ಹಡಗಿನ ಎಂಜಿನ್ ರೂಮ್ ಗುರಿಪಡಿಸಿ ಗುಂಡು ಹಾರಿಸಿದೆ. ಎಂಜಿನ್ ಸ್ಫೋಟಗೊಂಡು ಹಡಗು ನಿಂತ ಬಳಿಕ, ಅಮೆರಿಕದ ಮರೀನ್ ಪಡೆಯು ಹಡಗನ್ನು ಏರಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.
ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ಈ ಬಗ್ಗೆ ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಸರಿಯಾದ ಎಚ್ಚರಿಕೆ ನೀಡಿದರೂ ಅದನ್ನು ಇರಾನ್ ಹಡಗು ನಿರ್ಲಕ್ಷಿಸಿತು. ಹಾಗಾಗಿ ನಮ್ಮ ನೌಕಾಪಡೆ ಅದರ ಎಂಜಿನ್ ರೂಮ್‌ಗೆ ರಂಧ್ರ ಕೊರೆಯುವ ಮೂಲಕ ಅದನ್ನು ದಾರಿಯಲ್ಲೇ ತಡೆದಿದೆ. ಈ ಹಡಗು ಅಮೆರಿಕದ ಹಣಕಾಸು ಇಲಾಖೆಯ ನಿರ್ಬಂಧದ ಪಟ್ಟಿಯಲ್ಲಿದೆ ಮತ್ತು ಇದು ಕಾನೂನುಬಾಹಿರ ಚಟುವಟಿಕೆಗಳ ಇತಿಹಾಸ ಹೊಂದಿದೆ,” ಎಂದು ತಿಳಿಸಿದ್ದಾರೆ. ಅಲ್ಲದೆ, ಇರಾನ್ ಮಾತುಕತೆಗೆ ಬರದಿದ್ದರೆ ಅಲ್ಲಿನ ವಿದ್ಯುತ್ ಸ್ಥಾವರ ಮತ್ತು ಸೇತುವೆಗಳನ್ನು ನಾಶಪಡಿಸುವುದಾಗಿ ಅವರು ನೇರ ಬೆದರಿಕೆ ಹಾಕಿದ್ದಾರೆ.
ಮುರಿದುಬಿದ್ದ ಶಾಂತಿ ಮಾತುಕತೆ
ಈ ಬೆಳವಣಿಗೆಯ ಬೆನ್ನಲ್ಲೇ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಎರಡನೇ ಸುತ್ತಿನ ಶಾಂತಿ ಮಾತುಕತೆಯಲ್ಲಿ ಭಾಗವಹಿಸಲು ಅದು ನಿರಾಕರಿಸಿದೆ. ಚಾಲ್ತಿಯಲ್ಲಿರುವ ಕದನ ವಿರಾಮವು ಏಪ್ರಿಲ್ 22ಕ್ಕೆ ಮುಕ್ತಾಯಗೊಳ್ಳಲಿದ್ದು, ಇರಾನ್ ಈ ದಾಳಿಗೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳುವ ಎಚ್ಚರಿಕೆ ನೀಡಿದೆ. ಇದರಿಂದಾಗಿ ಜಗತ್ತಿನ ಒಟ್ಟು ತೈಲ ಪೂರೈಕೆಯ ಐದನೇ ಒಂದು ಭಾಗ ಹಾದುಹೋಗುವ ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಸ್ಥಗಿತಗೊಂಡಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಮನೆಮಾಡಿದೆ.
ಇದನ್ನೂ ಓದಿ : ತಪ್ಪಿತು ಮಹಾ ದುರಂತ – 4 ಗಂಟೆ ಆಗಸದಲ್ಲೇ ಸುತ್ತಾಡಿ ಬೆಂಗಳೂರಲ್ಲಿ ವಿಮಾನ ಲ್ಯಾಂಡ್!



















