ನ್ಯೂಯಾರ್ಕ್ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ತಮ್ಮ ದೇಶದ ಸೇನಾ ಕಾರ್ಯಾಚರಣೆಗಳನ್ನು ಸಮರ್ಥಿಸಿಕೊಳ್ಳಲು ಹೋಗಿ ಜಾಗತಿಕ ರಾಜತಾಂತ್ರಿಕ ಅಧಿಕಾರಿಗಳಿಂದ ತೀವ್ರ ವಿರೋಧ ಹಾಗೂ ಮುಖಭಂಗ ಎದುರಿಸಿದ್ದಾರೆ. ಭಾಷಣದ ವೇಳೆ ತಮ್ಮ ದೇಶವು ಹೆಜ್ಬುಲ್ಲಾ ಬಂಡುಕೋರರ ವಿರುದ್ಧ ನಡೆಸಿದ ಪೇಜರ್ ಸ್ಫೋಟದ ಕಾರ್ಯಾಚರಣೆಯನ್ನು ನೆನಪಿಸಲು ವೇದಿಕೆಯಲ್ಲೇ ಪೇಜರ್ ಅನ್ನು ಎತ್ತಿ ತೋರಿಸಿದಾಗ, ಸಭೆಯಲ್ಲಿದ್ದ ವಿವಿಧ ದೇಶಗಳ ಪ್ರತಿನಿಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಭಾತ್ಯಾಗ ಮಾಡಿದ ಘಟನೆ ನಡೆದಿದೆ.
ಜಾಗತಿಕ ಮಟ್ಟದಲ್ಲಿ ಇಸ್ರೇಲ್ ಅನುಭವಿಸುತ್ತಿರುವ ರಾಜತಾಂತ್ರಿಕ ಏಕಾಂಗಿತನದ ನಡುವೆಯೇ ವಿಶ್ವಸಂಸ್ಥೆಯಲ್ಲಿ ನೆತನ್ಯಾಹು ಮಾತನಾಡಿದರು. ಕಳೆದ ಮೂರು ವರ್ಷಗಳಲ್ಲಿ ಇಸ್ರೇಲ್ ಏಳು ರಂಗಗಳಲ್ಲಿ ಯುದ್ಧ ಮಾಡಿದೆ ಎಂದು ಪ್ರತಿಪಾದಿಸಿದ ಅವರು, ನ್ಯೂಜೆರ್ಸಿಯಷ್ಟು ಸಣ್ಣ ದೇಶವೊಂದು ಈ ರೀತಿ ಏಳು ರಂಗಗಳಲ್ಲಿ ಹೋರಾಡಿದ ಉದಾಹರಣೆ ಇದೆಯೇ ಎಂದು ಪ್ರಶ್ನಿಸಿದರು.
ಪೇಜರ್ ಪ್ರದರ್ಶಿಸಿ ಮುಖಭಂಗ ಅನುಭವಿಸಿದ ನೆತನ್ಯಾಹು
ತಮ್ಮ ಭಾಷಣದ ಮಧ್ಯೆ ನೆತನ್ಯಾಹು ಸಣ್ಣ ಪೇಜರ್ ವೊಂದನ್ನು ಎತ್ತಿ ಹಿಡಿ ತೋರಿಸಿದರು. ಸೆಪ್ಟೆಂಬರ್ 2024ರಲ್ಲಿ ಲೆಬನಾನ್‌ನ ಇರಾನ್ ಬೆಂಬಲಿತ ಹೆಜ್ಬುಲ್ಲಾ ಸಂಘಟನೆಯ ವಿರುದ್ಧ ಇಸ್ರೇಲಿ ಗೂಢಚಾರ ಸಂಸ್ಥೆಗಳು ರೂಪಿಸಿದ್ದ ಸಂಕೀರ್ಣ ಕಾರ್ಯಾಚರಣೆಯನ್ನು ಆ ಮೂಲಕ ನೆನಪಿಸಿದರು. “ನಿಮಗೆ ಆ ಬೀಪರ್‌ಗಳು ನೆನಪಿವೆಯೇ? ಹೆಜ್ಬುಲ್ಲಾ ಅಂತೂ ಖಂಡಿತವಾಗಿಯೂ ಅವುಗಳನ್ನು ಮರೆಯಲು ಸಾಧ್ಯವಿಲ್ಲ,” ಎಂದು ನೆತನ್ಯಾಹು ಹೇಳಿದರು. ಆದರೆ, ನೆತನ್ಯಾಹು ಅವರಿಂದ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಸಭೆಯಲ್ಲಿದ್ದ ರಾಜತಾಂತ್ರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಡಜನ್‌ಗಟ್ಟಲೆ ದೇಶಗಳ ಪ್ರತಿನಿಧಿಗಳು ನೆತನ್ಯಾಹು ವಿರುದ್ಧ ಕೂಗಾಡಿ, ಭಾಷಣ ಬಹಿಷ್ಕರಿಸಿ ಸಭಾಂಗಣದಿಂದ ಹೊರನಡೆದರು. ಈ ವೇಳೆ ನೆತನ್ಯಾಹು ತಮ್ಮದೇ ಇಸ್ರೇಲಿ ನಿಯೋಗದ ಕಡೆಯಿಂದ ಮಾತ್ರ ಚಪ್ಪಾಳೆ ಗಿಟ್ಟಿಸಿಕೊಂಡರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಸಭೆಯ ಅಧ್ಯಕ್ಷರು ಶಾಂತಿ ಕಾಪಾಡುವಂತೆ ಮನವಿ ಮಾಡಬೇಕಾಯಿತು. ಸಭಾತ್ಯಾಗ ಮಾಡಿದವರನ್ನು ಉದ್ದೇಶಿಸಿ ಮಾತನಾಡಿದ ನೆತನ್ಯಾಹು, “ಇನ್ನೂ ಯಾರಾದರೂ ನೈತಿಕ ಹೇಡಿಗಳು ಉಳಿದಿದ್ದರೆ, ದಯವಿಟ್ಟು ನೀವೂ ಹೊರನಡೆಯಿರಿ” ಎಂದು ಕಿಡಿಕಾರಿದರು.
ಜಾಗತಿಕ ನಾಯಕರ ವಿರುದ್ಧ ವಾಗ್ದಾಳಿ
ನೆತನ್ಯಾಹು ತಮ್ಮ ಭಾಷಣದಲ್ಲಿ ಇರಾನ್ ಸೇರಿದಂತೆ ಹಲವು ದೇಶಗಳ ವಿರುದ್ಧ ತೀವ್ರ ದಾಳಿ ನಡೆಸಿದರು. ಇರಾನ್ ಅನ್ನು “ಕೊಲೆಗಡುಕ ಸರ್ವಾಧಿಕಾರ” ಎಂದು ಬಣ್ಣಿಸಿದ ಅವರು, ಕಳೆದ ಏಳು ತಿಂಗಳುಗಳಿಂದ ಇಸ್ರೇಲ್ ಮತ್ತು ಅಮೆರಿಕ ಪಡೆಗಳು ನಡೆಸಿದ ಜಂಟಿ ದಾಳಿಗಳು ಇರಾನ್‌ನ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಯನ್ನು ತಡೆದಿವೆ ಎಂದು ಹೇಳಿದರು.
ಇಷ್ಟೇ ಅಲ್ಲದೆ, ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಅವರನ್ನು “ಸರ್ವಾಧಿಕಾರಿ” ಎಂದು ಕರೆದ ಅವರು, ಟರ್ಕಿಯು ಹಮಾಸ್ ಸಂಘಟನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು. ಜೊತೆಗೆ, ನ್ಯೂಯಾರ್ಕ್‌ನ ನೂತನ ಮೇಯರ್ ಝೋಹ್ರಾನ್ ಮಮ್ದಾನಿ ಅವರನ್ನೂ ಕಟುವಾಗಿ ವಿಮರ್ಶಿಸಿ, ಅವರ ಆಡಳಿತದಲ್ಲಿ ಯಹೂದಿಗಳಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದರು.
ಬ್ರಿಟನ್, ಫ್ರಾನ್ಸ್ ವಿರುದ್ಧ ವಸಾಹತುಶಾಹಿ ಆರೋಪ
ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಾದ ಬ್ರಿಟನ್ ಮತ್ತು ಫ್ರಾನ್ಸ್ ಕೂಡ ನೆತನ್ಯಾಹು ಅವರ ಟೀಕೆಯಿಂದ ತಪ್ಪಿಸಿಕೊಳ್ಳಲಿಲ್ಲ. ಇಸ್ರೇಲ್ ಅನ್ನು ವಸಾಹತುಶಾಹಿ ದೇಶ ಎಂದು ಟೀಕಿಸುತ್ತಿರುವ ಈ ದೇಶಗಳೇ ಇತಿಹಾಸದಲ್ಲಿ ವಸಾಹತುಶಾಹಿಯನ್ನು ಹುಟ್ಟುಹಾಕಿದ್ದು ಎಂದು ಅವರು ತಿರುಗೇಟು ನೀಡಿದರು. ಇಸ್ರೇಲ್‌ನಲ್ಲಿ ಮುಂಬರುವ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಅಲ್ಪಾವಧಿಯ ಭೇಟಿ ನೀಡಿರುವ ನೆತನ್ಯಾಹು, ಯಾವುದೇ ಪ್ರಮುಖ ಅಮೆರಿಕನ್ ನಾಯಕರನ್ನು ಭೇಟಿಯಾಗದೇ ತಕ್ಷಣವೇ ದೇಶಕ್ಕೆ ಹಿಂತಿರುಗಲಿದ್ದಾರೆ.
ಇದನ್ನೂ ಓದಿ : ಜಿಂಬಾಬ್ವೆ ವಿರುದ್ಧ ಹ್ಯಾಟ್ರಿಕ್ ದಾಖಲೆ ; ವಿರಾಟ್–ರೋಹಿತ್ ಸಾಲಿಗೆ ಸೇರಿದ ಹೇಲಿ ಮ್ಯಾಥ್ಯೂಸ್



















