ನ್ಯೂಯಾರ್ಕ್/ಜೆನಿವಾ : ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (UNHRC) ಕಾಶ್ಮೀರ ಹಾಗೂ ಭಾರತದ ಅಲ್ಪಸಂಖ್ಯಾತರ ಕುರಿತು ಪಾಕಿಸ್ತಾನ ಎತ್ತಿದ ಪ್ರಶ್ನೆಗಳಿಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪಾಕ್ನ ನಿಜ ಬಣ್ಣ ಬಯಲು ಮಾಡಿ ಜಾಗತಿಕ ವೇದಿಕೆಯಲ್ಲೇ ಛೀಮಾರಿ ಹಾಕಿದೆ. ಜೊತೆಗೆ ಪಾಕಿಸ್ತಾನವು ಆಕ್ರಮಿಸಿಕೊಂಡಿರುವ ಜಮ್ಮು -ಕಾಶ್ಮೀರದ ಭಾಗವನ್ನು ತಕ್ಷಣವೇ ಖಾಲಿ ಮಾಡುವಂತೆ ಆಗ್ರಹಿಸಿದೆ.
ಭಾರತದ ಪ್ರತಿನಿಧಿ ಮತ್ತು ರಾಜತಾಂತ್ರಿಕ ಅಧಿಕಾರಿ ಕ್ಷಿತಿಜ್ ತ್ಯಾಗಿ ಅವರು ಸಭೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿ ಮಾತನಾಡಿ, “ಪಾಕಿಸ್ತಾನವು ಭಾರತದ ಭಾಗಗಳ ಆಕ್ರಮಣ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ಪೋಷಿಸುವುದನ್ನು ಬಿಟ್ಟು, ಸಾಲದ ಸುಳಿಯಲ್ಲಿ ಸಿಲುಕಿರುವ ತನ್ನದೇ ಆರ್ಥಿಕತೆಯನ್ನು ಸರಿಪಡಿಸಿಕೊಳ್ಳಲು ಗಮನಹರಿಸಲಿ” ಎಂದು ಟಾಂಗ್ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರವು ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಮುಂದೆಯೂ ಆಗಿರಲಿದೆ. ವಿದೇಶಿ ಆಕ್ರಮಣದಲ್ಲಿರುವ ಏಕೈಕ ಭಾಗವೆಂದರೆ ಪಾಕಿಸ್ತಾನ ಅಕ್ರಮವಾಗಿ ವಶಪಡಿಸಿಕೊಂಡಿರುವ ಪ್ರದೇಶ ಮಾತ್ರ ಎಂದು ಭಾರತ ಸ್ಪಷ್ಟಪಡಿಸಿತು.
ಕಾಶ್ಮೀರಿ ಪಂಡಿತರ ನಿರ್ಗಮನದ ನೆನಪು
1990ರಲ್ಲಿ ಕಾಶ್ಮೀರಿ ಪಂಡಿತರನ್ನು ಅವರ ಸ್ವಂತ ಮನೆಗಳಿಂದ ಬಲವಂತವಾಗಿ ಓಡಿಸಿದ ಭೀಕರ ಘಟನೆಯನ್ನು ಕ್ಷಿತಿಜ್ ತ್ಯಾಗಿ ಸಭೆಯಲ್ಲಿ ನೆನಪಿಸಿದರು. “ಪಾಕಿಸ್ತಾನವೇ ತರಬೇತಿ ನೀಡಿ, ಶಸ್ತ್ರಸಜ್ಜಿತಗೊಳಿಸಿ ಗಡಿ ದಾಟಿಸಿ ಕಳುಹಿಸಿದ ಭಯೋತ್ಪಾದಕರಿಂದಾಗಿ ಕಾಶ್ಮೀರಿ ಪಂಡಿತರು ತಮ್ಮ ಮನೆಗಳನ್ನು ತೊರೆಯಬೇಕಾಯಿತು ಎಂಬುದನ್ನು ವಿಶ್ವಸಂಸ್ಥೆಗೆ ಪಾಕಿಸ್ತಾನ ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ. ಅದೇ ಭಯೋತ್ಪಾದಕರು ಮುಂದೆ ಮುಸ್ಲಿಮರು ಸೇರಿದಂತೆ ಪ್ರತಿಯೊಂದು ಧರ್ಮದ ಕಾಶ್ಮೀರಿಗಳನ್ನು ಹತ್ಯೆ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಯೋತ್ಪಾದನೆಯನ್ನು ಪೋಷಿಸಿದ ದೇಶವೇ ಈಗ ಈ ಮಂಡಳಿಯಲ್ಲಿ ತನಿಖೆಗೆ ಆಗ್ರಹಿಸುತ್ತಿರುವುದು ಹಾಸ್ಯಾಸ್ಪದ ಮತ್ತು ದ್ವಂದ್ವ ನೀತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಭಾರತ ವಾಗ್ದಾಳಿ ನಡೆಸಿತು.
ಅಲ್ಪಸಂಖ್ಯಾತರ ಸ್ಥಿತಿಗತಿಯ ಕುರಿತು ಪಾಕ್ನ ಮುಖವಾಡ ಕಳಚಿದ ಭಾರತ
ಭಾರತದಲ್ಲಿನ ಅಲ್ಪಸಂಖ್ಯಾತರ ಕುರಿತು ಪಾಕಿಸ್ತಾನ ಮಾಡಿದ ಆರೋಪಗಳಿಗೆ ಉತ್ತರಿಸಿದ ತ್ಯಾಗಿ, “ವಿಶ್ವದಲ್ಲೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ನಮ್ಮ ದೇಶದ ಅಲ್ಪಸಂಖ್ಯಾತರು ಮತ ಚಲಾಯಿಸುತ್ತಾರೆ, ಶಾಸಕರಾಗುತ್ತಾರೆ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗುತ್ತಾರೆ ಮತ್ತು ಪ್ರಮುಖ ಸಂಸ್ಥೆಗಳನ್ನು ಮುನ್ನಡೆಸುತ್ತಾರೆ. ಆದರೆ ಸ್ವಾತಂತ್ರ್ಯದ ನಂತರ ಪಾಕಿಸ್ತಾನದಲ್ಲಿ ಹಿಂದೂ, ಸಿಖ್ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ” ಎಂದು ಅಂಕಿಅಂಶಗಳ ಸಮೇತ ತಿರುಗೇಟು ನೀಡಿದರು.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಹೆಣ್ಣುಮಕ್ಕಳನ್ನು ಅಪಹರಿಸಿ, ಬಲವಂತದ ಮತಾಂತರ ಹಾಗೂ ಮದುವೆ ಮಾಡಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಪ್ರತಿಯೊಂದು ಅಲ್ಪಸಂಖ್ಯಾತ ಕುಟುಂಬದ ಮೇಲೆಯೂ ಧರ್ಮನಿಂದನೆ ಕಾನೂನಿನ ಕತ್ತಿ ತೂಗಾಡುತ್ತಿದ್ದು, ಶಿಯಾ, ಅಹ್ಮದಿಯಾ, ಇಸ್ಮಾಲಿ ಮತ್ತು ಹಜಾರಾ ಮುಸ್ಲಿಂ ಅಲ್ಪಸಂಖ್ಯಾತರೂ ಅಲ್ಲಿ ವ್ಯವಸ್ಥಿತ ಕಿರುಕುಳ ಮತ್ತು ಧಾರ್ಮಿಕ ಸ್ಥಳಗಳ ಮೇಲಿನ ದಾಳಿಯನ್ನು ಎದುರಿಸುತ್ತಿದ್ದಾರೆ ಎಂದು ಭಾರತ ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ನೈಜ ಮುಖವನ್ನು ಬಯಲು ಮಾಡಿತು.
ಸಿಂಧೂ ನದಿ ನೀರು ಹಂಚಿಕೆ ಕುರಿತ ಪಾಕ್ ಪ್ರತಿಪಾದನೆ ತಳ್ಳಿಹಾಕಿದ ಭಾರತ
ಇನ್ನೊಂದೆಡೆ, ಸಿಂಧೂ ನದಿ ನೀರು ಒಪ್ಪಂದಕ್ಕೆ ಸಂಬಂಧಿಸಿದಂತೆ ‘ಖಾಯಂ ಮಧ್ಯಸ್ಥಿಕೆ ನ್ಯಾಯಾಲಯ’ದ ತೀರ್ಪಿನ ಕುರಿತು ಪಾಕಿಸ್ತಾನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುತ್ತೋಲೆ ಹೊರಡಿಸಿದ್ದಕ್ಕೆ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನವು ತನ್ನ ದುಷ್ಪ್ರಚಾರಕ್ಕಾಗಿ ಅಂತಾರಾಷ್ಟ್ರೀಯ ಕಾನೂನು ಸಂಸ್ಥೆಗಳ ಮಾಹಿತಿಯನ್ನು ತಿರುಚುವ ಅಭ್ಯಾಸ ಮಾಡಿಕೊಂಡಿದೆ ಎಂದು ಜೈಸ್ವಾಲ್ ಆರೋಪಿಸಿದರು. “ಪಾಕಿಸ್ತಾನ ಬಿಂಬಿಸುತ್ತಿರುವ ತೀರ್ಪು ಖಾಯಂ ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪಲ್ಲ, ಬದಲಾಗಿ ಕಾನೂನುಬಾಹಿರವಾಗಿ ರಚನೆಯಾದ ನ್ಯಾಯಾಲಯದ ತೀರ್ಪಾಗಿದೆ. ನಿಜಸ್ಥಿತಿಯನ್ನು ತಿರುಚುವ ಪಾಕಿಸ್ತಾನದ ಮತ್ತೊಂದು ಯತ್ನ ಇದಾಗಿದ್ದು, ಈ ವಿಚಾರದಲ್ಲಿ ಭಾರತದ ನಿಲುವು ಅತ್ಯಂತ ಸ್ಪಷ್ಟವಾಗಿದೆ” ಎಂದು ಅವರು ಪುನರುಚ್ಚರಿಸಿದರು.
ಇದನ್ನೂ ಓದಿ : ಇಂಗ್ಲೆಂಡ್ ಸರಣಿಯಿಂದ ಸ್ಯಾಮ್ಸನ್ನ ಕೈಬಿಟ್ಟಿದ್ದೇಕೆ? ಕಾರಣ ಬಿಚ್ಚಿಟ್ಟ ಗಂಭೀರ್!



















