ಇಂಫಾಲ : ಗಲಭೆಪೀಡಿತ ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಬಾಂಬ್ ಸ್ಫೋಟದಲ್ಲಿ ಇಬ್ಬರು ಹಸುಗೂಸುಗಳು ಬಲಿಯಾದ ಘಟನೆಯನ್ನು ಖಂಡಿಸಿ ನಾಗರಿಕ ಸಂಘಟನೆಗಳು ಕರೆ ನೀಡಿರುವ ಐದು ದಿನಗಳ ‘ಮಣಿಪುರ ಬಂದ್’ನಿಂದಾಗಿ ರಾಜ್ಯದ ಕಣಿವೆಯ ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣ ಸ್ತಬ್ಧಗೊಂಡಿದೆ. ಭಾನುವಾರದಿಂದ ಆರಂಭವಾಗಿರುವ ಈ ಬಂದ್ ಈಗ ಹಿಂಸಾತ್ಮಕ ರೂಪ ಪಡೆದಿದ್ದು, ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಅಲ್ಲಲ್ಲಿ ಘರ್ಷಣೆಗಳು ವರದಿಯಾಗಿವೆ.
ಮಕ್ಕಳ ಸಾವಿನ ಆಕ್ರೋಶ
ಏಪ್ರಿಲ್ 7 ರಂದು ಬಿಷ್ಣುಪುರದಲ್ಲಿ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ ಐದು ವರ್ಷದ ಬಾಲಕ ಮತ್ತು ಕೇವಲ ಐದು ತಿಂಗಳ ಹೆಣ್ಣು ಮಗು ಪ್ರಾಣ ಕಳೆದುಕೊಂಡಿದ್ದವು. ಈ ಘಟನೆಯು ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ‘ಮೀರಾ ಪೈಬಿ’ (ಮಹಿಳಾ ಸಂಘಟನೆ) ಸೇರಿದಂತೆ ಹಲವು ಸಂಘಟನೆಗಳು ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಹಾಗೂ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಏ.23ರವರೆಗೆ ಬಂದ್‌ಗೆ ಕರೆ ನೀಡಿವೆ. ಶಾಲಾ-ಕಾಲೇಜುಗಳು, ಕಚೇರಿಗಳು ಮತ್ತು ಮಾರುಕಟ್ಟೆಗಳು ಮುಚ್ಚಲ್ಪಟ್ಟಿದ್ದು, ಸಾರಿಗೆ ಸಂಪರ್ಕವು ಕಡಿತಗೊಂಡಿದೆ.
ಬಂದ್‌ನ ಮೊದಲ ದಿನವಾದ ಭಾನುವಾರ ರಾತ್ರಿ ಇಂಫಾಲದ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಸಾವಿರಾರು ಮಹಿಳೆಯರು ಕೈಯಲ್ಲಿ ಪಂಜು ಹಿಡಿದು ಬೃಹತ್ ಮೆರವಣಿಗೆ ನಡೆಸಿದರು. ಈ ವೇಳೆ ಕಕ್ಚಿಂಗ್ ಜಿಲ್ಲೆ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿವೆ.
ಮಣಿಪುರದ ಪ್ರಸ್ತುತ ಜನಾಂಗೀಯ ಸಂಘರ್ಷದ ಹಿನ್ನೆಲೆಯಲ್ಲಿ, ಪ್ರತಿಭಟನಾಕಾರರು ಈ ದಾಳಿಯ ಹಿಂದೆ ಕುಕಿ ಉಗ್ರಗಾಮಿಗಳ ಕೈವಾಡವಿದೆ ಎಂದು ಆರೋಪಿಸಿ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಪ್ರತಿಭಟನೆಯ ನಡುವೆ ಸಮಾಜಘಾತುಕ ಶಕ್ತಿಗಳು ನುಸುಳಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿವೆ ಎಂದು ಮಣಿಪುರ ಪೊಲೀಸರು ಎಚ್ಚರಿಸಿದ್ದಾರೆ. ಪ್ರತಿಭಟನಾಕಾರರ ವೇಷದಲ್ಲಿರುವ ಕೆಲವರು ಪೆಟ್ರೋಲ್ ಬಾಂಬ್ ಮತ್ತು ಕಲ್ಲುಗಳನ್ನು ಬಳಸಿ ಭದ್ರತಾ ಪಡೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಒಂದು ವೇಳೆ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಸಂಘಟಕರು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಹೊರ್ಮುಜ್ ಜಲಸಂಧಿ ಮತ್ತೆ ಉದ್ವಿಗ್ನ : ಇರಾನ್ ಹಡಗನ್ನೇ ವಶಪಡಿಸಿಕೊಂಡ ಅಮೆರಿಕ ನೌಕಾಪಡೆ!


















