ನವದೆಹಲಿ: ಕೇಂದ್ರ ಸರ್ಕಾರದ ಇ20 (E20) ಪೆಟ್ರೋಲ್ ನೀತಿಯನ್ನು ವಿರೋಧಿಸಿ ಗಾಂಧಿ ಸ್ಮೃತಿಗೆ ಪಾದಯಾತ್ರೆ ನಡೆಸಲು ಹಾಗೂ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದ್ದ ಸಾಮಾಜಿಕ ಕಾರ್ಯಕರ್ತ ತೆಹಸೀನ್ ಪೂನಾವಾಲ ಅವರನ್ನು ದೆಹಲಿ ಪೊಲೀಸರು ಇಂದು(ಶನಿವಾರ) ಬೆಳಗ್ಗಿನಿಂದಲೇ ಗೃಹಬಂಧನದಲ್ಲಿರಿಸಿದ್ದಾರೆ ಎಂದು ಹೇಳಲಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಎಥನಾಲ್ ಮಿಶ್ರಿತ ಇಂಧನ ನೀತಿಯ ವಿರುದ್ಧ ಸಮರ ಸಾರಿರುವ ಪೂನಾವಾಲ ಅವರು, ತಮ್ಮ ನಿವಾಸದ ಮುಂದೆ ಪೊಲೀಸರು ಬೀಡುಬಿಟ್ಟಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. “ನಿತಿನ್ ಗಡ್ಕರಿಯವರು ಎಥನಾಲ್ ವಿಚಾರದಲ್ಲಿ ಭಯಗೊಂಡಿದ್ದಾರೆ. ಮಹಿಳಾ ಅಧಿಕಾರಿಗಳು ಸೇರಿದಂತೆ ದೆಹಲಿ ಪೊಲೀಸರ ಸಂಪೂರ್ಣ ಬೆಟಾಲಿಯನ್ ನನ್ನನ್ನು ಗೃಹಬಂಧನದಲ್ಲಿಟ್ಟಿದೆ” ಎಂದು ಅವರು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
‘ಯಾವ ದಾಖಲೆಯೂ ಇಲ್ಲದೆ ಬಂಧನ’: ಪೂನಾವಾಲ ಪ್ರಶ್ನೆ
ಪೂನಾವಾಲ ಹಂಚಿಕೊಂಡಿರುವ ಮತ್ತೊಂದು ವಿಡಿಯೋದಲ್ಲಿ, ಯಾವುದೇ ಸೂಕ್ತ ದಾಖಲೆಗಳಿಲ್ಲದೆ ತಮ್ಮನ್ನು ಹೇಗೆ ವಶಕ್ಕೆ ಪಡೆಯುತ್ತಿದ್ದೀರಿ ಎಂದು ಅವರು ಪೊಲೀಸ್ ಅಧಿಕಾರಿಯೊಬ್ಬರನ್ನು ಪ್ರಶ್ನಿಸುತ್ತಿರುವುದು ಕಂಡುಬಂದಿದೆ. “ಯಾವುದೇ ಆದೇಶದ ಪ್ರತಿಯಿಲ್ಲ, ಏನೂ ಇಲ್ಲ. ಸ್ವಾತಂತ್ರ್ಯ ದಿನಾಚರಣೆಗೆ ಕೇವಲ 15 ದಿನಗಳಿರುವಾಗ ನನ್ನನ್ನು ಗೃಹಬಂಧನದಲ್ಲಿಡುತ್ತಿದ್ದೀರಿ” ಎಂದು ಅವರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಇದಕ್ಕೆ ಉತ್ತರಿಸಿದ ಪೊಲೀಸ್ ಅಧಿಕಾರಿಯೊಬ್ಬರು, ನಿಮ್ಮ ಈ ಪಾದಯಾತ್ರೆಯಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಬರುವ ಸಾಧ್ಯತೆಯಿರುವುದರಿಂದ ಸಹಕರಿಸುವಂತೆ ವಿನಂತಿಸಿದ್ದಾರೆ.
ಏನಿದು E20 ಇಂಧನ ವಿವಾದ?
ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ ನೇತೃತ್ವದಲ್ಲಿ ದೇಶಾದ್ಯಂತ ವಿದ್ಯಾರ್ಥಿಗಳು ನಡೆಸಿದ ಭಾರೀ ಪ್ರತಿಭಟನೆಯಿಂದಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಇದೀಗ E20 ಇಂಧನ ನೀತಿಯು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರವು ಜಾರಿಗೆ ತಂದಿರುವ ಈ ನೀತಿಯಲ್ಲಿ ಶೇ.80 ಪೆಟ್ರೋಲ್ ಮತ್ತು ಶೇ.20 ಎಥನಾಲ್ ಮಿಶ್ರಣ ಮಾಡಲಾಗುತ್ತಿದ್ದು, ಇದು ವಿರೋಧ ಪಕ್ಷಗಳು ಹಾಗೂ ಸಾರ್ವಜನಿಕರ ತೀವ್ರ ಟೀಕೆಗೆ ಗುರಿಯಾಗಿದೆ. 2023ಕ್ಕಿಂತ ಮುಂಚಿತವಾಗಿ ಖರೀದಿಸಿದ ವಾಹನಗಳಲ್ಲಿ ಈ E20 ಇಂಧನ ಬಳಸುವುದರಿಂದ ಮೈಲೇಜ್ ಕಡಿಮೆಯಾಗುತ್ತಿದೆಯಲ್ಲದೆ, ವಾಹನಗಳ ನಿರ್ವಹಣಾ ವೆಚ್ಚವೂ (ಮೇಂಟೆನೆನ್ಸ್) ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ ಎಂದು ವಾಹನ ಸವಾರರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಇ20 ಇಂಧನ ನೀತಿ ವಿರುದ್ಧ ಮತ್ತು ಸಚಿವ ನಿತಿನ್ ಗಡ್ಕರಿ ರಾಜೀನಾಮೆಗೆ ಆಗ್ರಹಿಸಿ ಹೊಸ ಅಭಿಯಾನವೂ ದೇಶದಲ್ಲಿ ಆರಂಭವಾಗಿದೆ. ಅದರ ಭಾಗವಾಗಿಯೇ ಇದೀಗ ಪೂನಾವಾಲರನ್ನು ಬಂಧಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ : ‘ರೀಲ್ಸ್‌ನಲ್ಲಿ ಮಾತ್ರ ಕ್ಷಮಿಸುವುದೇ? ಕೇಸ್‌ಗಳನ್ನೂ ಹಿಂಪಡೆಯುತ್ತೀರಾ?’ : ಪ್ರಧಾನಿ ಮೋದಿಗೆ ‘ಸಿಜಿಪಿ’ ಅಭಿಜಿತ್ ದೀಪ್ಕೆ ಪ್ರಶ್ನೆ



















