ಲಂಡನ್ : ಇಂಗ್ಲೆಂಡ್ ಪುರುಷರ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಮಹತ್ವದ ಬದಲಾವಣೆಗಳಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಮೂಡಿಸಿದೆ. ಇಂಗ್ಲೆಂಡ್ ಟೆಸ್ಟ್ ತಂಡದ ನೂತನ ಮುಖ್ಯ ತರಬೇತುದಾರರಾಗಿ ನ್ಯೂಜಿಲೆಂಡ್‌ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಅವರನ್ನು ನೇಮಕ ಮಾಡಲಾಗಿದೆ. ಇದುವರೆಗೆ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬ್ರೆಂಡನ್ ಮೆಕಲಮ್ ಅವರ ಸ್ಥಾನವನ್ನು ಫ್ಲೆಮಿಂಗ್ ತುಂಬಲಿದ್ದಾರೆ. ಮತ್ತೊಂದೆಡೆ, ಬೆನ್ ಸ್ಟೋಕ್ಸ್ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ತಂಡದ ನಾಯಕತ್ವದ ಜವಾಬ್ದಾರಿಯನ್ನು ಸ್ಟಾರ್ ಬ್ಯಾಟರ್ ಜೋ ರೂಟ್ ಅವರಿಗೆ ಮರಳಿ ನೀಡಲಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಸುದೀರ್ಘ ಹಾಗೂ ಕಠಿಣ ಆಯ್ಕೆ ಪ್ರಕ್ರಿಯೆಯ ನಂತರ ಈ ಮಹತ್ವದ ನಿರ್ಧಾರಗಳನ್ನು ಅಧಿಕೃತವಾಗಿ ಪ್ರಕಟಿಸಿದೆ.
ಸ್ಟೀಫನ್ ಫ್ಲೆಮಿಂಗ್ ಹೆಗಲಿಗೆ ಹೊಚ್ಚ ಹೊಸ ಜವಾಬ್ದಾರಿ
ಬ್ರೆಂಡನ್ ಮೆಕಲಮ್ ನಿರ್ಗಮನದ ಬಳಿಕ ಇಸಿಬಿ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಟೀಫನ್ ಫ್ಲೆಮಿಂಗ್ ಅವರನ್ನು ಮಂಡಳಿಯ ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಿದೆ. ವಿಶ್ವದ ಅತ್ಯಂತ ಗೌರವಾನ್ವಿತ ಕ್ರಿಕೆಟ್ ಕೋಚ್‌ಗಳಲ್ಲಿ ಒಬ್ಬರಾಗಿರುವ ಫ್ಲೆಮಿಂಗ್ ಇಂಗ್ಲೆಂಡ್‌ನ ರೆಡ್-ಬಾಲ್ ಕ್ರಿಕೆಟ್‌ನ ಮುಂದಿನ ಪಯಣವನ್ನು ಮುನ್ನಡೆಸಲಿದ್ದಾರೆ. ಈ ಮಹತ್ವದ ಜವಾಬ್ದಾರಿ ವಹಿಸಿಕೊಂಡ ನಂತರ ಮಾತನಾಡಿದ ಫ್ಲೆಮಿಂಗ್, ಇಂಗ್ಲೆಂಡ್ ಟೆಸ್ಟ್ ತರಬೇತುದಾರನಾಗಿ ಸೇರ್ಪಡೆಗೊಳ್ಳುತ್ತಿರುವುದು ಅತ್ಯಂತ ರೋಮಾಂಚಕಾರಿಯಾಗಿದೆ. ಇದು ವಿಶ್ವ ಕ್ರಿಕೆಟ್‌ನ ಅತ್ಯಂತ ಪ್ರತಿಷ್ಠಿತ ತರಬೇತುದಾರ ಹುದ್ದೆಗಳಲ್ಲಿ ಒಂದಾಗಿದ್ದು, ಈ ಜವಾಬ್ದಾರಿ ಲಭಿಸಿರುವುದು ನನಗೆ ಸಂದ ಗೌರವ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಬ್ರೆಂಡನ್ ಮೆಕಲಮ್ ಮತ್ತು ಬೆನ್ ಸ್ಟೋಕ್ಸ್ ತಂಡಕ್ಕೆ ತಂದುಕೊಟ್ಟಿರುವ ಗೆಲುವುಗಳ ಹಾದಿಯನ್ನು ಮುಂದುವರಿಸಿಕೊಂಡು ಹೋಗುವ ಭರವಸೆ ವ್ಯಕ್ತಪಡಿಸಿರುವ ಅವರು, ಯುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ವಿಶ್ವದರ್ಜೆಯ ಕ್ರಿಕೆಟಿಗರನ್ನಾಗಿ ರೂಪಿಸುವತ್ತ ಗಮನಹರಿಸುವುದಾಗಿ ತಿಳಿಸಿದ್ದಾರೆ.
ಫ್ಲೆಮಿಂಗ್ ಬೆನ್ನಿಗಿದೆ ಅಪಾರ ತರಬೇತಿಯ ಅನುಭವ
53 ವರ್ಷದ ಸ್ಟೀಫನ್ ಫ್ಲೆಮಿಂಗ್ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ತರಬೇತುದಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ವಿಶೇಷವಾಗಿ 18 ವರ್ಷಗಳ ಕಾಲ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿರುವ ಅವರು, ತಂಡ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜೊತೆಗೆ ತಂಡವನ್ನು 10 ಬಾರಿ ಫೈನಲ್ ತಲುಪಿಸಿದ ಕೀರ್ತಿಯೂ ಅವರಿಗಿದೆ. 2023ರ ‘ದಿ ಹಂಡ್ರೆಡ್’ ಟೂರ್ನಿಯಲ್ಲಿ ಸದರ್ನ್ ಬ್ರೇವ್ಸ್ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದ ಫ್ಲೆಮಿಂಗ್, ದಕ್ಷಿಣ ಆಫ್ರಿಕಾ ಮತ್ತು ಅಮೆರಿಕದ ಲೀಗ್‌ಗಳಲ್ಲಿ ಸಿಎಸ್‌ಕೆ ಫ್ರಾಂಚೈಸಿಗಳಿಗೆ ಹಾಗೂ ಮೆಲ್ಬರ್ನ್ ಸ್ಟಾರ್ಸ್ ತಂಡಕ್ಕೂ ತರಬೇತಿ ನೀಡಿದ ಅಪಾರ ಅನುಭವ ಹೊಂದಿದ್ದಾರೆ. ಆಟಗಾರನಾಗಿಯೂ ಫ್ಲೆಮಿಂಗ್ ಸಾಧನೆ ಅಪಾರ. 111 ಟೆಸ್ಟ್ ಪಂದ್ಯಗಳನ್ನಾಡಿರುವ ಅವರು, ದಾಖಲೆಯ 80 ಟೆಸ್ಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿ 28 ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಕೌಂಟಿ ಕ್ರಿಕೆಟ್‌ನಲ್ಲೂ ನಾಟಿಂಗ್‌ಹ್ಯಾಮ್‌ಶೈರ್ ತಂಡದ ನಾಯಕರಾಗಿ ತಂಡಕ್ಕೆ 2005ರ ಚಾಂಪಿಯನ್‌ಷಿಪ್ ಗೆದ್ದುಕೊಟ್ಟ ಇತಿಹಾಸ ಅವರಿಗಿದೆ.
ನಾಯಕನಾಗಿ ಮತ್ತೆ ಮುನ್ನೆಲೆಗೆ ಬಂದ ಜೋ ರೂಟ್
ಬೆನ್ ಸ್ಟೋಕ್ಸ್ ನಿವೃತ್ತಿಯ ಕಾರಣ ತೆರವಾಗಿದ್ದ ನಾಯಕನ ಸ್ಥಾನಕ್ಕೆ ಜೋ ರೂಟ್ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ 2017ರಿಂದ 2022ರವರೆಗೆ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದ ರೂಟ್, 64 ಟೆಸ್ಟ್ ಪಂದ್ಯಗಳಲ್ಲಿ ನಾಯಕರಾಗಿ ರಾಷ್ಟ್ರೀಯ ದಾಖಲೆಯ 27 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರು. ಸರಣಿ ಸೋಲುಗಳ ಬಳಿಕ ನಾಯಕತ್ವದಿಂದ ಕೆಳಗಿಳಿದರೂ, ಇಂಗ್ಲೆಂಡ್ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿ ಅವರು ಗುರುತಿಸಿಕೊಂಡಿದ್ದಾರೆ. ನಾಯಕತ್ವದಿಂದ ಕೆಳಗಿಳಿದ ಬಳಿಕ ಬ್ಯಾಟಿಂಗ್‌ನಲ್ಲಿ ಮತ್ತಷ್ಟು ಮಿಂಚಿದ ರೂಟ್, ಸರ್ ಅಲಿಸ್ಟೇರ್ ಕುಕ್ ಅವರ ದಾಖಲೆ ಮುರಿದು ಇಂಗ್ಲೆಂಡ್ ಪರ ಅತಿ ಹೆಚ್ಚು ಟೆಸ್ಟ್ ರನ್ ಕಲೆಹಾಕಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮತ್ತೊಮ್ಮೆ ನಾಯಕನಾಗಿ ಆಯ್ಕೆಯಾಗಿರುವ ಕುರಿತು ಸಂತಸ ಹಂಚಿಕೊಂಡಿರುವ ಜೋ ರೂಟ್, ಇಂಗ್ಲೆಂಡ್ ಪುರುಷರ ಟೆಸ್ಟ್ ತಂಡದ ನಾಯಕನಾಗಿ ಮತ್ತೊಮ್ಮೆ ಆಯ್ಕೆಯಾಗಿರುವುದು ದೊಡ್ಡ ಗೌರವವಾಗಿದೆ. ನಾಯಕನ ಕೆಲಸ ಕಠಿಣವಾದರೂ ಸಾಕಷ್ಟು ತೃಪ್ತಿ ನೀಡುತ್ತದೆ. ಮುಂದಿನ ಪೀಳಿಗೆಯ ಆಟಗಾರರನ್ನು ಶ್ರೇಷ್ಠತೆಯೆಡೆಗೆ ಮುನ್ನಡೆಸಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ. ಸ್ಟೀಫನ್ ಫ್ಲೆಮಿಂಗ್ ಅವರೊಂದಿಗಿನ ಒಡನಾಟದ ಬಗ್ಗೆಯೂ ವಿಶ್ವಾಸ ವ್ಯಕ್ತಪಡಿಸಿರುವ ರೂಟ್, ಅವರೊಬ್ಬ ಅದ್ಭುತ ನಾಯಕ ಎಂಬುದನ್ನು ಸಾಬೀತುಪಡಿಸಿದ್ದಾರೆ, ಅವರ ಕ್ರಿಕೆಟ್ ಜ್ಞಾನ ಅಪಾರ. ಅವರೊಂದಿಗೆ ಕೆಲಸ ಮಾಡಲು ಕಾತುರನಾಗಿದ್ದೇನೆ ಎಂದಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಫ್ಲೆಮಿಂಗ್ ಮತ್ತು ರೂಟ್ ಕಾಂಬಿನೇಷನ್ ಸ್ವದೇಶ ಮತ್ತು ವಿದೇಶಗಳಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.



















