ಬೆಂಗಳೂರು : ಆನ್‌ಲೈನ್ ವಂಚನೆ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿವೆ. ಸೈಬರ್ ವಂಚಕರು ಜನರನ್ನು ಯಾಮಾರಿಸಿ ಕೋಟ್ಯಂತರ ರೂಪಾಯಿಯನ್ನು ಅವರ ಬ್ಯಾಂಕ್ ಖಾತೆಯಿಂದ ಲಪಟಾಯಿಸುತ್ತಿದ್ದಾರೆ. ಇದರ ಮಧ್ಯೆಯೇ, ಆಧಾರ್ ಕಾರ್ಡ್ ಬಳಸಿ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ವಂಚಕರು ಎಗರಿಸಬಹುದೇ ಎಂಬ ಆತಂಕ, ಪ್ರಶ್ನೆ ಜನರನ್ನು ಕಾಡುತ್ತಿವೆ. ಹಾಗಾಗಿ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಮಹತ್ವದ ಸ್ಪಷ್ಟನೆಯೊಂದನ್ನು ನೀಡಿದೆ.
ಹೌದು, ಕೇವಲ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಿ ಜನರ ಖಾತೆಯಿಂದ ಹಣವನ್ನು ಲಪಟಾಯಿಸಲು ಸಾಧ್ಯವಿಲ್ಲ ಎಂದು ಪ್ರಾಧಿಕಾರವು ಸ್ಪಷ್ಟನೆ ನೀಡಿದೆ. ಆನ್ ಲೈನ್ ವಹಿವಾಟು ನಡೆಸಲು, ಯಾವುದಾದರೂ ಖಾತೆಯಿಂದ ಹಣ ಹಿಂಪಡೆಯಲು ಎರಡು ಹಂತದ ದೃಢೀಕರಣ (Two-factor authentication) ಕಡ್ಡಾಯವಾಗಿದೆ. ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆ, ಪಿನ್, ಒಟಿಪಿ ಇಲ್ಲದೆಯೇ ಬ್ಯಾಂಕ್ ಖಾತೆಯಿಂದ ಯಾರೂ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯಲ್ಲಿಯೂ ಬಯೋಮೆಟ್ರಿಕ್ ದೃಢೀಕರಣ ಇಲ್ಲದೆ ಹಣ ಡ್ರಾ ಮಾಡಲು ಆಗುವುದಿಲ್ಲ. ಗ್ರಾಹಕನ ಬೆರಳಚ್ಚು (Fingerprint) ಅಥವಾ ಕಣ್ಣಿನ ರೆಟಿನಾ ಸ್ಕ್ಯಾನ್ ಇಲ್ಲದೆ ಯಾವುದೇ ಹಣಕಾಸು ಸಂಸ್ಥೆಯು ವಹಿವಾಟನ್ನು ಅನುಮೋದಿಸುವುದಿಲ್ಲ. ಹಾಗಾಗಿ, ಗ್ರಾಹಕರು ಆಧಾರ್ ಕಾರ್ಡ್ ಕಳೆದುಕೊಂಡರೆ ಅಥವಾ ಸಾರ್ವಜನಿಕ ವೇದಿಕೆಯಲ್ಲಿ ಲಭ್ಯವಿದ್ದರೆ ಹೆಚ್ಚು ಆತಂಕಪಡುವ ಅಗತ್ಯವಿಲ್ಲ ಎಂದು ಪ್ರಾಧಿಕಾರ ಭರವಸೆ ನೀಡಿದೆ.
ಇಷ್ಟಾದರೂ, ಗ್ರಾಹಕರು ಮುನ್ನೆಚ್ಚರಿಕೆಯಿಂದ ಇರುವುದು ಅತ್ಯವಶ್ಯಕವಾಗಿದೆ. ಗ್ರಾಹಕರು ಮುನ್ನೆಚ್ಚರಿಕಾ ಕ್ರಮವಾಗಿ ಆಧಾರ್ ಬಯೋಮೆಟ್ರಿಕ್ ವಿವರಗಳನ್ನು ಯುಐಡಿಎಐ ಪೋರ್ಟಲ್ ಅಥವಾ ಎಂ-ಆಧಾರ್ ಆ್ಯಪ್ ಮೂಲಕ ಲಾಕ್ ಮಾಡಿಕೊಳ್ಳಬೇಕು. ಹಾಗೆಯೇ, ಅಪರಿಚಿತ ವ್ಯಕ್ತಿಗಳಿಗೆ ಒಟಿಪಿ ವಿವರ ನೀಡುವುದು, ಕಾರ್ಡ್ ಸಂಖ್ಯೆಯನ್ನು ಹೇಳುವುದು ಸೇರಿ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದಿರುವುದು ತುಂಬ ಸುರಕ್ಷಿತ ವಿಧಾನವಾಗಿದೆ.
ಇದನ್ನೂ ಓದಿ : ಕೊಲ್ಲೂರು ಮೂಕಾಂಬಿಕೆ, ಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದ ಅನಂತ್ ಅಂಬಾನಿ!



















