ಬೆಂಗಳೂರು : ನೇಪಾಳ ಮೂಲದ ವ್ಯಕ್ತಿಯೊಬ್ಬ ತನ್ನ ತಂದೆಯನ್ನೇ ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ನೇಪಾಳ ಮೂಲದ ಚಂದ್ರ ಬಹದ್ದೂರ್ ಶಾಹಿ ಎಂದು ಗುರುತಿಸಲಾಗಿದೆ. ಅವರ ಪುತ್ರ ದ್ರೋಣ ಬಹದ್ದೂರ್ ತಂದೆಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ವರ್ತೂರಿನ ಪಣತ್ತೂರು-ಬೆಳಗೆರೆ ಬಳಿ ವಾಸವಾಗಿದ್ದ ಶೆಡ್‌ನಲ್ಲಿ ನಿನ್ನೆ ರಾತ್ರಿ ಅಪ್ಪ-ಮಗನ ನಡುವೆ ಗಲಾಟೆ ನಡೆದಿದೆ. ಇಬ್ಬರೂ ಸೆಕ್ಯುರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮದ್ಯದ ಮತ್ತಿನಲ್ಲಿ ಇಬ್ಬರ ನಡುವೆ ಜಗಳ ನಡೆದಿದ್ದು, ಈ ವೇಳೆ ಪುತ್ರ ದ್ರೋಣ ಬಹದ್ದೂರ್ ರಾಡ್‌ನಿಂದ ತಂದೆ ಚಂದ್ರ ಬಹದ್ದೂರ್ ಶಾಹಿ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಚಂದ್ರ ಬಹದ್ದೂರ್ ಶಾಹಿ ಅವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವರ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಪುತ್ರ ದ್ರೋಣ ಬಹದ್ದೂರ್‌ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ದೇವಸ್ಥಾನಕ್ಕೆ ಹೋಗೋಣ ಎಂದು ಕರೆದೊಯ್ದು ಅಪ್ರಾಪ್ತೆಯ ಮೇಲೆ ಅತ್ಯಾಚಾರ ; ಮೂವರ ಬಂಧನ!


















