ಬೆಂಗಳೂರು : ವಿಧಾನಪರಿಷತ್ ಚುನಾವಣೆಯ ಅಡ್ಡಮತದಾನ ಇದೀಗ ರಾಜ್ಯ ಬಿಜೆಪಿ ನಾಯಕರ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ವಿಪಕ್ಷ ನಾಯಕ ಆರ್. ಅಶೋಕ್ ಅವರ ನಾಯಕತ್ವದ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ಅಶೋಕ್ ಅವರು ಬಿಡದಿ ಟೌನ್‌ಶಿಪ್ ವಿಚಾರವಾಗಿ ಬೃಹತ್ ಹೋರಾಟಕ್ಕೆ ಮುಂದಾಗಿರುವುದು ಕೂಡ ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಮೂಲಗಳ ಪ್ರಕಾರ, ವಿಧಾನಪರಿಷತ್ ಚುನಾವಣೆಯ ಅಡ್ಡಮತದಾನ ವಿಚಾರವಾಗಿ ಆರ್. ಅಶೋಕ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ರಾಜ್ಯ ಬಿಜೆಪಿ ಶಾಸಕರ ಮೇಲೆ ಹಿಡಿತ ಇಲ್ಲ, ಪಕ್ಷ ರಾಜ್ಯದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಅಸಮಾಧಾನವನ್ನು ನಿತಿನ್ ನಬಿನ್ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕ್ರಾಸ್ ವೋಟಿಂಗ್‌ಗೆ ನಾಯಕತ್ವದ ವೈಫಲ್ಯವೇ ಕಾರಣ ಎಂಬ ಮಾತುಗಳೂ ಕೇಳಿಬಂದಿವೆ ಎಂಬ ಮಾಹಿತಿ ಇದೆ.
ಹೀಗಾಗಿ ಅಡ್ಡಮತದಾನದ ನಂತರ ವಿಪಕ್ಷ ನಾಯಕ ಸ್ಥಾನದಲ್ಲಿ ಬದಲಾವಣೆ ಆಗಬಹುದು ಎಂಬ ಚರ್ಚೆ ಪಕ್ಷದೊಳಗೆ ಜೋರಾಗಿದೆ. ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನಗಳಿಗೆ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯವೂ ಕೆಲ ವಲಯಗಳಲ್ಲಿ ಕೇಳಿಬರುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇದೇ ಹಿನ್ನೆಲೆಯಲ್ಲಿ ಬಿಡದಿ ಟೌನ್‌ಶಿಪ್ ವಿರುದ್ಧ ರಾಜ್ಯ ಬಿಜೆಪಿ ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ಧತೆ ನಡೆಸಿದೆ. ಈಗಾಗಲೇ ರೈತರು ಹಾಗೂ ಜೆಡಿಎಸ್ ನಾಯಕರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದು, ಬಿಜೆಪಿ ಕೂಡ ಎರಡು ಹಂತಗಳಲ್ಲಿ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಿದೆ ಎನ್ನಲಾಗಿದೆ.
ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಚರ್ಚೆಗಳ ಪ್ರಕಾರ, ಈ ಹೋರಾಟದ ಮೂಲಕ ರಾಜ್ಯ ಬಿಜೆಪಿ ಸಕ್ರಿಯವಾಗಿದೆ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸುವುದು, ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿಲ್ಲ ಎಂಬುದನ್ನು ತೋರಿಸುವುದು, ಶಾಸಕರನ್ನು ಒಗ್ಗೂಡಿಸುವ ನಾಯಕತ್ವವಿದೆ ಎಂಬುದನ್ನು ಪ್ರದರ್ಶಿಸುವುದು ಹಾಗೂ ರಾಜ್ಯದಲ್ಲಿ ಸಮರ್ಥ ವಿಪಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಭಾವನೆ ಮೂಡಿಸುವುದು ಪ್ರಮುಖ ಉದ್ದೇಶವಾಗಿರಬಹುದು ಎನ್ನಲಾಗುತ್ತಿದೆ.
ಈ ಎಲ್ಲಾ ಕಾರಣಗಳು ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳಾಗಿದ್ದು, ಆರ್. ಅಶೋಕ್ ಅಥವಾ ಬಿಜೆಪಿ ಹೈಕಮಾಂಡ್ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಶೀಘ್ರದಲ್ಲೇ ಬಿಡದಿ ಟೌನ್‌ಶಿಪ್ ವಿಚಾರವಾಗಿ ರಾಜ್ಯ ಬಿಜೆಪಿ ಬೃಹತ್ ಹೋರಾಟ ನಡೆಸುವ ಸಾಧ್ಯತೆ ಇದೆ.
ಇದನ್ನೂ ಓದಿ : ಹಣದಾಸೆಗೆ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ರಾ ಆರ್‌ಐ? ; ಕೂಡ್ಲಿಗಿ ಕಂದಾಯ ನಿರೀಕ್ಷಕರ ವಿರುದ್ಧ ಗಂಭೀರ ಆರೋಪ!


















