ಭುವನೇಶ್ವರ : ಬಂಗಾಳ ಕೊಲ್ಲಿಯಲ್ಲಿ ಒಡಿಶಾದ ಪಾರದೀಪ್ ಕರಾವಳಿಯಿಂದ ಸುಮಾರು 240 ನಾಟಿಕಲ್ ಮೈಲು ದೂರದಲ್ಲಿ ಪನಾಮಾ ದೇಶದ ಧ್ವಜ ಹೊಂದಿದ್ದ ಬೃಹತ್ ಸರಕು ಹಡಗೊಂದು ಮುಳುಗಿದ ಘಟನೆ ಶನಿವಾರ ಸಂಜೆ ನಡೆದಿದೆ. ಹಡಗಿನಲ್ಲಿದ್ದ ಒಟ್ಟು 24 ಮಂದಿ ವಿದೇಶಿ ಸಿಬ್ಬಂದಿಯ ಪೈಕಿ ಇಬ್ಬರನ್ನು ರಕ್ಷಿಸಲಾಗಿದ್ದು, ನಾಪತ್ತೆಯಾಗಿರುವ ಉಳಿದ 22 ಸಿಬ್ಬಂದಿಯ ಪತ್ತೆಗಾಗಿ ಭಾರತೀಯ ಕರಾವಳಿ ರಕ್ಷಕ ಪಡೆ (Indian Coast Guard) ಹಾಗೂ ನೌಕಾಪಡೆ ಜಂಟಿಯಾಗಿ ಶೋಧ ಕಾರ್ಯಾಚರಣೆ ಕೈಗೊಂಡಿವೆ.
ದುರಂತಕ್ಕೀಡಾದ ಹಡಗನ್ನು ‘ಎಂವಿ ಓಷನ್ ವಿನ್ನರ್’ (MV Ocean Winner) ಎಂದು ಗುರುತಿಸಲಾಗಿದೆ. ಈ ಬೃಹತ್ ಹಡಗು ಒಡಿಶಾದ ಪಾರದೀಪ್ ಬಂದರಿನಿಂದ ಅಪಾರ ಪ್ರಮಾಣದ ಕಬ್ಬಿಣದ ಅದಿರನ್ನು ತುಂಬಿಕೊಂಡು ಸಿಂಗಾಪುರಕ್ಕೆ ಪಯಣ ಆರಂಭಿಸಿತ್ತು. ಶನಿವಾರ ಸಮುದ್ರ ಮಧ್ಯದಲ್ಲಿದ್ದಾಗ ಹಡಗಿನ ಸಂಪರ್ಕ ಇದ್ದಕ್ಕಿದ್ದಂತೆ ಕಡಿತಗೊಂಡಿದೆ. ಈ ಕುರಿತು ಶನಿವಾರ ಬೆಳಗ್ಗೆ 11.48ರ ಸುಮಾರಿಗೆ ಸಂಬಂಧಿಸಿದ ಸಂಸ್ಥೆಯಿಂದ ಕರಾವಳಿ ರಕ್ಷಕ ಪಡೆಯ ಸಮುದ್ರ ರಕ್ಷಣಾ ಸಮನ್ವಯ ಕೇಂದ್ರಕ್ಕೆ ತುರ್ತು ಕರೆ ಬಂದ ತಕ್ಷಣವೇ ಅಧಿಕಾರಿಗಳು ರಕ್ಷಣಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ದೋಣಿಯಲ್ಲಿ ಪತ್ತೆಯಾದ ಇಬ್ಬರು ಸಿಬ್ಬಂದಿ
ಘಟನೆಯ ತೀವ್ರತೆಯನ್ನು ಅರಿತ ಕರಾವಳಿ ರಕ್ಷಕ ಪಡೆ, ಘಟನಾ ಸ್ಥಳದ ಸಮೀಪದಲ್ಲೇ ಸಂಚರಿಸುತ್ತಿದ್ದ ‘ಎಂಟಿ ಐಸೋಪೋಸ್’ (MT Aisopos) ಎಂಬ ವಾಣಿಜ್ಯ ಹಡಗಿಗೆ ತಕ್ಷಣ ಮಾಹಿತಿ ರವಾನಿಸಿ ಶೋಧ ಕಾರ್ಯಕ್ಕೆ ನಿಯೋಜಿಸಿತು. ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಕತ್ತಲಲ್ಲಿ ಸಮುದ್ರದಲ್ಲಿ ತೇಲುತ್ತಿದ್ದ ಎರಡು ಪ್ರತ್ಯೇಕ ಲೈಫ್ ಬೋಟ್ ಗಳನ್ನು (Lifeboats) ಗುರುತಿಸಿದ ಎಂಟಿ ಐಸೋಪೋಸ್ ಹಡಗಿನ ಸಿಬ್ಬಂದಿ, ಅದರಲ್ಲಿದ್ದ ಇಬ್ಬರು ಸಿಬ್ಬಂದಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ. ಹಡಗಿನಲ್ಲಿದ್ದ ಒಟ್ಟು 24 ಸಿಬ್ಬಂದಿಯಲ್ಲಿ 20 ಮಂದಿ ಚೀನಾ ಪ್ರಜೆಗಳು, ಮೂವರು ಮ್ಯಾನ್ಮಾರ್ ಪ್ರಜೆಗಳು ಹಾಗೂ ಒಬ್ಬರು ಬಾಂಗ್ಲಾದೇಶದ ಪ್ರಜೆಯಾಗಿದ್ದಾರೆ.
ಹಡಗು ಮುಳುಗಲು ಕಾರಣ ಅಸ್ಪಷ್ಟ:
ಈ ಭೀಕರ ಅಪಘಾತಕ್ಕೆ ಹಡಗಿನಲ್ಲಿ ಉಂಟಾದ ತಾಂತ್ರಿಕ ದೋಷ ಕಾರಣವೇ, ಪ್ರತಿಕೂಲ ಹವಾಮಾನ ಹಾಗೂ ಸಮುದ್ರದ ಅಲೆಗಳ ಹೊಡೆತ ಕಾರಣವೇ ಅಥವಾ ಸರಕಿನ ಭಾರ ಹೆಚ್ಚಾಗಿ ಹಡಗು ಮಗುಚಿಕೊಂಡಿತೇ ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ. ಪ್ರಸ್ತುತ ಉಳಿದ 22 ಮಂದಿಯ ಜೀವ ಉಳಿಸುವುದೇ ಮೊದಲ ಆದ್ಯತೆಯಾಗಿದ್ದು, ಭಾರತೀಯ ಕರಾವಳಿ ಕಾವಲು ಪಡೆಯ ‘ವರದ್’ ಮತ್ತು ‘ಅನ್ಮೋಲ್’ ಹಡಗುಗಳು ಶೋಧ ನಿರತವಾಗಿವೆ. ಹೆಚ್ಚುವರಿ ನೆರವಿಗಾಗಿ ಶ್ರೀ ವಿಜಯಪುರಂನಿಂದ ‘ವಿಜಿತ್’ ಹಡಗನ್ನು ಕಳುಹಿಸಿಕೊಡಲಾಗಿದೆ. ನೌಕಾಪಡೆಯೂ ಕೈಜೋಡಿಸಿದ್ದು, ಕಡಲಲ್ಲಿ ಸಂಚರಿಸುವ ಇತರೆ ಹಡಗುಗಳ ಸಹಾಯದೊಂದಿಗೆ ನಾಪತ್ತೆಯಾದವರ ಹುಡುಕಾಟ ಮುಂದುವರಿದಿದೆ.
ಇದನ್ನೂ ಓದಿ : ‘ಟಾಕ್ಸಿಕ್’ ಇವೆಂಟ್‌ನಲ್ಲಿ ಯಶ್ ಭಾಷಣದ ವೇಳೆ ಭಾರಿ ಅನಾಹುತ : ಧ್ವನಿವರ್ಧಕ ವ್ಯವಸ್ಥೆ ಕುಸಿದು ಫ್ಯಾನ್ಸ್‌ಗೆ ಗಾಯ!



















