ಕಠ್ಮಂಡು : ನೇಪಾಳ ಮತ್ತು ಟಿಬೆಟ್ ಗಡಿ ಭಾಗದಲ್ಲಿ ಕಳೆದ ಬುಧವಾರ ಸಂಭವಿಸಿದ ಭೀಕರ ಜಲಪ್ರಳಯ ಹಾಗೂ ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ 903ಕ್ಕೆ ಏರಿಕೆಯಾಗಿದೆ. 4,200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಜಲವಿದ್ಯುತ್ ಯೋಜನೆಗಳ ಸುರಂಗಗಳಲ್ಲಿ ಸಿಲುಕಿರುವ ನೂರಾರು ಜನರನ್ನು ರಕ್ಷಿಸಲು ಭಾರತ, ಚೀನಾ ಹಾಗೂ ನೇಪಾಳದ ರಕ್ಷಣಾ ಪಡೆಗಳು ಹಗಲಿರುಳು ಕಾರ್ಯಾಚರಣೆ ನಡೆಸುತ್ತಿವೆ. ಹಿಮಪಾತ ಹಾಗೂ ಮಣ್ಣಿನ ಪ್ರವಾಹವು ವ್ಯಾಪಕ ವಿನಾಶವನ್ನು ಸೃಷ್ಟಿಸಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಭೀತಿ ವ್ಯಕ್ತವಾಗಿದೆ.
ತ್ರಿಶೂಲಿ-3ಎ ಸೇರಿದಂತೆ ಅರ್ಧ ಡಜನ್‌ಗೂ ಹೆಚ್ಚು ಜಲವಿದ್ಯುತ್ ಯೋಜನೆಗಳ ಸುರಂಗಗಳಲ್ಲಿ ಶೋಧ ಕಾರ್ಯ ತೀವ್ರಗೊಂಡಿದೆ. ಜಲವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದ 933 ಜನರು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಚಿಲಿಮೆ ಮತ್ತು ಲಾಂಗ್‌ಟಾಂಗ್ ಪ್ರದೇಶಗಳಲ್ಲಿ ಹಿಮ ಮತ್ತು ಮಣ್ಣಿನ ರಾಶಿಗಳನ್ನು ತೆರವುಗೊಳಿಸಲು ಭಾರತೀಯ ಸುರಂಗ ರಕ್ಷಣಾ ತಂಡವು ನೇಪಾಳಿ ಸೇನೆಯೊಂದಿಗೆ ಕೈಜೋಡಿಸಿದೆ. ಸುರಂಗಗಳ ದ್ವಾರದಲ್ಲಿ ಬೃಹತ್ ಪ್ರಮಾಣದ ಮಣ್ಣು ಮತ್ತು ಕಲ್ಲುಗಳು ಬಿದ್ದು ಹಾದಿ ಬಂದ್ ಆಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡಚಣೆ ಉಂಟಾಗಿದೆ ಎಂದು ನೇಪಾಳಿ ಸೇನೆಯ ವಕ್ತಾರ ರಾಜಾ ರಾಮ್ ಬಸ್ನೆಟ್ ತಿಳಿಸಿದ್ದಾರೆ.
ಮಂಜುಗಡ್ಡೆ, ಬಂಡೆಗಳ ಸರಣಿ ಕುಸಿತವೇ ದುರಂತಕ್ಕೆ ಕಾರಣ
ಹಿಮಸರೋವರ ಸ್ಫೋಟಗೊಂಡಿದ್ದರಿಂದ (GLOF) ಈ ಪ್ರವಾಹ ಬಂದಿಲ್ಲ ಎಂಬುದನ್ನು ನೇಪಾಳಿ ವಿಜ್ಞಾನಿಗಳ ಪ್ರಾಥಮಿಕ ಅಧ್ಯಯನ ಸ್ಪಷ್ಟಪಡಿಸಿದೆ. ರಸುವಾ ಜಿಲ್ಲೆಯ ಲಾಂಗ್‌ಟಾಂಗ್-ಲಿರುಂಗ್ ವ್ಯಾಪ್ತಿಯ ಸುಮಾರು 5,200 ಮೀಟರ್ ಎತ್ತರದಲ್ಲಿ ಸಂಭವಿಸಿದ ಭೀಕರ ಹಿಮ ಹಾಗೂ ಬಂಡೆಗಳ ಸರಣಿ ಕುಸಿತವೇ ಈ ದುರಂತಕ್ಕೆ ಮುಖ್ಯ ಕಾರಣ. ಈ ರಭಸದ ಪ್ರವಾಹವು ಲ್ಹೆಂಡೆ ನದಿಯನ್ನು ಸೇರಿ, ಆ ಬಳಿಕ ಭೋಟೆಕೋಶಿ ಮತ್ತು ತ್ರಿಶೂಲಿ ನದಿಗಳ ಮೂಲಕ ಹರಿದು ಸಕಲವನ್ನೂ ಕೊಚ್ಚಿಕೊಂಡು ಹೋಗಿದೆ. ದುರಂತದಲ್ಲಿ ಟಿಬೆಟ್ ಭಾಗದಲ್ಲೂ 16 ಜನರು ಸಾವನ್ನಪ್ಪಿದ್ದು, 546 ಜನರು ನಾಪತ್ತೆಯಾಗಿದ್ದಾರೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಶೋಧ ಕಾರ್ಯವನ್ನು ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಂತ್ರಸ್ತರ ನೆರವಿಗೆ ಧಾವಿಸಿದ ಭದ್ರತಾ ಪಡೆಗಳು
ನೇಪಾಳ ಪ್ರಧಾನಿ ಬಲೇಂದ್ರ ಶಾ ಅವರು ಈ ಘಟನೆಯನ್ನು “ಅಪಾರ ಪ್ರಮಾಣದ ವಿನಾಶಕಾರಿ ನೈಸರ್ಗಿಕ ವಿಕೋಪ” ಎಂದು ಕರೆದಿದ್ದು, ರಕ್ಷಣಾ ಕಾರ್ಯಕ್ಕಾಗಿ ಸುಮಾರು 21,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದಿದ್ದಾರೆ. ರೆಡ್ ಕ್ರಾಸ್ ಸಂಸ್ಥೆಯ ಅಂದಾಜಿನ ಪ್ರಕಾರ ಈ ಪ್ರವಾಹದಿಂದ 90,000ಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಪ್ರಸ್ತುತ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮೃತದೇಹಗಳ ಗುರುತು ಪತ್ತೆ ಹಚ್ಚುವ ಮತ್ತು ನಿರಾಶ್ರಿತರಿಗೆ ಪರಿಹಾರ ತಲುಪಿಸುವ ಕಾರ್ಯ ಭರದಿಂದ ಸಾಗಿದೆ.
ಇದನ್ನೂ ಓದಿ : ಲಾರ್ಕ್ ದ್ವೀಪದ ಮೇಲೆ ದಾಳಿ ಬೆನ್ನಲ್ಲೇ ‘ಖರ್ಗ್’ ಧ್ವಂಸಗೊಳಿಸಿದಂತೆ ಬಿಂಬಿಸುವ ವಿಡಿಯೋ ಹಂಚಿಕೊಂಡ ಟ್ರಂಪ್!



















