ಬೆಂಗಳೂರು : ನಿರಂಜನ್ ಸುಧೀಂದ್ರ ನಟನೆಯ ‘ಸ್ಪಾರ್ಕ್’ ಚಿತ್ರದ ‘ಮಧುರ ಮುಗುಳುನಗೆ’ ಹಾಡು ಬಿಡುಗಡೆಯಾಗಿದೆ. ಈ ಗೀತೆಯ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡ ತಾರೆಯರು ‘ಮುಗುಳುನಗೆ’ ಬೀರಿದ್ದಾರೆ. ಯಾಕೆಂದರೆ ಈ ರೊಮ್ಯಾಂಟಿಕ್ ಹಾಡಿನಲ್ಲಿ ನಿರಂಜನ್ ಅಷ್ಟೇ ಮುದ್ದಾಗಿ ಕಾಣಿಸಿದ್ದಾರೆ.

ಸ್ಟಾರ್ ಕುಟುಂಬದಿಂದ ಬಂದವರು ನಿರಂಜನ್ ಸುಧೀಂದ್ರ. ಹೀಗಾಗಿಯೇ ಚಿಕ್ಕಮ್ಮ ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಕುಟುಂಬದ ಪ್ರಮುಖರೆಲ್ಲ ಹಾಜರಿದ್ದರು. ಖುದ್ದು ನಿರಂಜನ್ ಅವರ ಅಜ್ಜಿ (ಉಪೇಂದ್ರ ಅವರ ತಾಯಿ) ಅನಸೂಯಮ್ಮ ಈ ಹಾಡನ್ನು ಬಿಡುಗಡೆಗೊಳಿಸಿದರು. ಹಾಡಿನ ಪ್ರದರ್ಶನದ ಬಳಿಕ ಮಾತನಾಡಿದ ಪ್ರಿಯಾಂಕಾ ಅವರು, “ನಾನು ವಿವಾಹವಾಗಿ ಮೊದಲ ಬಾರಿಗೆ ಉಪೇಂದ್ರ ಅವರ ಮನೆಗೆ ಬಂದಾಗ ನನ್ನನ್ನು ಸ್ವಾಗತಿಸಿದ್ದಂತ ಮಗು ಈತ. ಈ ಹಾಡು ತುಂಬಾನೇ ಚೆನ್ನಾಗಿದೆ. ಈ ಹಿಂದೆ ಇದೇ ಚಿತ್ರದ “ಶಕಲಕ” ಹಾಡು ತೆರೆಕಂಡಾಗ ರೀಲ್ಸ್ ಮಾಡುವ ಬಗ್ಗೆ ನಾನು ಮತ್ತು ಉಪ್ಪಿ ಮಾತನಾಡಿಕೊಂಡಿದ್ದೆವು. ಆದರೆ ನಮಗೆ ಸ್ಟೆಪ್ಸ್ ಹಾಕಲು ಅದಕ್ಕಿಂತ ಈ ಹಾಡು ಸುಲಭವಾದೀತು ಅಂತ ಅನಿಸಿದೆ. ಖಂಡಿತವಾಗಿ ರೀಲ್ಸ್ ಮಾಡುತ್ತೇವೆ. ನಿರಂಜನ್ ಜೊತೆ ನಾನು ಸಿನಿಮಾದಲ್ಲಿಯೂ ಕೆಲಸ ಮಾಡಿದ್ದೇನೆ. ನನ್ನ ಮಗನಿಗೂ ಅವನನ್ನು ನೋಡಿ ಕಲಿಯಲು ಹೇಳುತ್ತಿರುತ್ತೇನೆ. ಹೀಗೆ ಸದಾ ಮಾದರಿಯಾಗಿರು” ಎಂದರು.
ಡಿ.ಮಹಾಂತೇಶ್ ಹಂದ್ರಾಳ್ ನಿರ್ದೇಶನದಲ್ಲಿರುವ ‘ಸ್ಪಾರ್ಕ್ ಚಿತ್ರ ಇದೇ ಸಪ್ಟಂಬರ್ ತಿಂಗಳ 25ರಂದು ತೆರೆಗೆ ಬರಲಿದೆ. ಮಹಾಂತೇಶ್ ಅವರಿಗೆ ಆರಂಭಕಾಲದಲ್ಲಿ ತಮ್ಮ ತಂಡದಲ್ಲಿ ಅವಕಾಶ ನೀಡಿದ ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತು ಡಾರ್ಲಿಂಗ್ ಕೃಷ್ಣ ಅತಿಥಿಗಳಾಗಿ ಆಗಮಿಸಿ ಚಿತ್ರಕ್ಕೆ ಶುಭ ಕೋರಿದರು. ದಯಾಳ್ ಮಾತನಾಡಿ ನಾನು ‘ಯೋಗರಾಜ್ ಬಟ್’ ಎನ್ನುವ ಸಿನಿಮಾ ಮಾಡುವಾಗ ಅದರ ಡಿಜಿಟಲ್ ಪೋರ್ಶನ್ ಚಿತ್ರೀಕರಣಕ್ಕಾಗಿ ಪರದಾಡುತ್ತಿದ್ದೆ. ಆಗ ನನಗೆ ಸಹಾಯಕರಾಗಿ ಬಂದವರು ಮಹಾಂತೇಶ್. ಹಾಡಿನಲ್ಲಿ ನಂದಿ ಹಿಲ್ಸ್ ಅನ್ನು ಇದುವರೆಗೆ ಕಂಡಿರದಷ್ಟು ವಿಭಿನ್ನವಾಗಿ ತೋರಿಸಿದ್ದಾರೆ. ಒಟ್ಟಿನಲ್ಲಿ ಈಗ ನಾನೇ ಹೆಮ್ಮೆ ಪಡುವಂಥ ಚಿತ್ರ ಮಾಡಿದ್ದಾರೆ.
ಕನ್ನಡದ ಎರಡನೇ ಜನರೇಶನ್ ನಲ್ಲಿ ನಾಯಕರಿಲ್ಲ ಎಂದು ಅಂದುಕೊಂಡಿದ್ದ ಸಂದರ್ಭದಲ್ಲಿ ಈ ಚಿತ್ರದ ನಾಯಕರಾಗಿರುವ ನಿರಂಜನ್ ಭರವಸೆಯ ಹೀರೋ ಅನಿಸಿದ್ದಾರೆ. ಅದೇ ರೀತಿ ಉಪೇಂದ್ರ ಅವರಿಗೆ ತಮ್ಮ ಅಣ್ಣ ಸುಧೀಂದ್ರ ಅವರೊಡನೆ ಇರುವ ಅನುಬಂಧ ನನಗೆ ಗೊತ್ತು. ಅದೇ ರೀತಿ ಈ ಚಿತ್ರದಲ್ಲಿ ಪ್ರೇಮ್ ಅವರ ಹೊಸ ಲುಕ್ ಇಷ್ಟವಾಯಿತು. ನಾನು ಚೆನ್ನೈನಲ್ಲಿ ಇದ್ದರೂ ಕನ್ನಡ ಚಿತ್ರಗಳನ್ನು ಥಿಯೇಟರ್ ನಲ್ಲೇ ನೋಡುತ್ತಿರುತ್ತೇನೆ. ಕೆಲವೊಮ್ಮೆ ಸಿನಿಮಾದ ಪ್ರಚಾರ ಅತಿಯಾಗಿದೆ ಎಂದು ಅನಿಸುವುದಿದೆ. ಆದರೆ ಈ ಚಿತ್ರದ ಪ್ರಚಾರ ಹಂತಹಂತವಾಗಿ ಕರಾರುವಕ್ಕಾಗಿ ನಡೆದಿದೆ.
ವ್ಯಾಪಾರದ ವಿಚಾರದಲ್ಲಿ ಕನ್ನಡ ಸಿನಿಮಾ ಇಂದಿಗೂ ಕೆಳಹಂತದಲ್ಲಿದೆ. ಇಂಥ ಸಂದರ್ಭದಲ್ಲಿ ಇಷ್ಟು ಗುಣಮಟ್ಟದಲ್ಲಿ ಚಿತ್ರ ಮಾಡಿರುವ ನಿರ್ಮಾಪಕರಿಗೆ ಅಭಿನಂದನೆಗಳು.
ಡಾರ್ಲಿಂಗ್ ಕೃಷ್ಣ ಮಾತನಾಡಿ ನಿರಂಜನ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸ್ಟಂಟ್ ಮಾಡುವುದನ್ನು ಹಂಚಿಕೊಳ್ತಿರುತ್ತಾರೆ. ಡಾನ್ಸ್, ಫೈಟ್ ಎಂದು ಸಂಪೂರ್ಣವಾಗಿ ತಯಾರಿ ಪಡೆದಿರುವ ನಟ ಇವರು. ಕನ್ನಡದ ಹೃತಿಕ್ ರೋಶನ್ ಅಂತಾನೇ ಹೇಳಬಹುದು. ಹಾಡಿನಲ್ಲಿ ರಚನಾ ಜೊತೆಗೆ ಮುದ್ದಾದ ಕೆಮಿಸ್ಟ್ರಿ ಇದೆ ಎಂದು ಮೆಚ್ಚುಗೆ ಸೂಚಿಸಿದರು.
ಚಿತ್ರದ ನಾಯಕ ನಿರಂಜನ್ ಸುಧೀಂದ್ರ ತಾವು ಈ ಚಿತ್ರದಲ್ಲಿ ಮಾಧ್ಯಮದ ಪ್ರತಿನಿಧಿಯಾಗಿ ನಟಿಸಿದ್ದೇನೆ ಎಂದರು. ನನ್ನ ಮೇಲೆ ಚಿತ್ರತಂಡ ಇಟ್ಟಿರುವ ಭರವಸೆ ಕಂಡು ಸಂಬಳ ಮೀರಿ ಕೆಲಸ ಮಾಡಿದ್ದೇನೆ ಎಂದರು. ಬಿಡುಗಡೆಯಾದ ಪ್ರೇಮಗೀತೆಯನ್ನು ಸಂಗೀತ ನಿರ್ದೇಶಕ ಸಚಿನ್ ಬಸ್ರೂರು ಅವರೇ ಹಾಡಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ.
ನಿರಂಜನ್ ಜೋಡಿಯಾಗಿ ನಟಿಸಿರುವ ರಚನಾ ಇಂದರ್, ಈ ಚಿತ್ರದಲ್ಲಿ ತಮ್ಮ ಮೊದಲ ಶಾಟ್ ಇದೇ ಹಾಡಿಗಾಗಿ ತೆಗೆಯಲಾಗಿತ್ತು. ನಿರ್ದೇಶಕರ ಸೂಚನೆಯಂತೆ ಚಿತ್ರಕ್ಕಾಗಿ ಗುಂಗುರು ಕೂದಲು ಮಾಡಿಕೊಂಡಿದ್ದೇನೆ. ಎಂಬಿಬಿಎಸ್ ವಿದ್ಯಾರ್ಥಿನಿಯ ಪಾತ್ರದಲ್ಲಿ ನಟಿಸಿದ್ದೇನೆ ಎಂದರು.
ಚಿತ್ರದಲ್ಲಿ ಖಳ ಪಾತ್ರವನ್ನು ಲವ್ಲಿಸ್ಟಾರ್ ಪ್ರೇಮ್ ನಿರ್ವಹಿಸಿದ್ದಾರೆ.
ಪ್ರೇಮ್ ಪರವಾಗಿ ಆಗಮಿಸಿ ಮಾತನಾಡಿದ ಪತ್ನಿ ಜ್ಯೋತಿ ಪ್ರೇಮ್ ಅವರಿಗೆ ಆ್ಯಕ್ಷನ್ ರೋಲ್ ಮಾಡಲು ಮೊದಲಿಂದಲೂ ಆಸಕ್ತಿ ಇತ್ತು. ಇಲ್ಲಿ ಆ ಆಸೆ ನೆರವೇರಿದೆ. ಮಾತ್ರವಲ್ಲ ಈ ಚಿತ್ರಕ್ಕಾಗಿ ಅವರು ತುಂಬ ತಯಾರಿ ಮಾಡಿದ್ದಾರೆ. ಎಂದೂ ಸಿಗರೇಟು ಸೇದದ ಅವರು ಪಾತ್ರಕ್ಕಾಗಿ ಧೂಮಪಾನ ಮಾಡಿದ್ದಾರೆ ಎಂದು ತಿಳಿಸಿದರು. ನಟ ಧರ್ಮಣ್ಣ ಕಡೂರು ಅವರು ಮಾತನಾಡಿ ನಿರ್ದೇಶಕರು ಎಲ್ಲವನ್ನು ತುಂಬಾನೇ ಚೆನ್ನಾಗಿ ಯೋಜನೆ ಹಾಕಿಕೊಂಡಿದ್ದಾರೆ ಎಂದರು. ಬಳಿಕ ಮಾತನಾಡಿದ ನಿರ್ದೇಶಕ ಮಹಾಂತೇಶ್ ಈ ಹಾಡಿನ ಗುಣಮಟ್ಟದ ಹಾಗೆಯೇ ಚಿತ್ರವೂ ಮೂಡಿ ಬಂದಿದೆ. ಅದಕ್ಕೆ ಕಾರಣ ನಿರ್ಮಾಪಕರು ಎಂದರು.
ಗುರುಗಳಾದ ದಯಾಳ್ ಅವರಿಂದ ಸಿನಿಮಾ ಮೇಕಿಂಗ್ ನಲ್ಲಿ ಹಣ ಪೋಲು ಮಾಡದಿರುವುದನ್ನು ಮತ್ತು ಡಾರ್ಲಿಂಗ್ ಕೃಷ್ಣ ಅವರಿಂದ ಭಾವನೆಗಳನ್ನು ಪರದೆಯ ಮೇಲೆ ತೋರಿಸುವುದನ್ನು ಮಾದರಿಯಾಗಿ ತೆಗೆದುಕೊಂಡಿದ್ದಾಗಿ ತಿಳಿಸಿದರು. ಸ್ಪಾರ್ಕ್ ನಿರ್ಮಾಣದಲ್ಲಿ ಭಾಗಿಯಾಗಿರುವ ಅವಿನಾಶ್ ವಸಿಷ್ಠ ಮಾತನಾಡಿ ನಾನು ಈಗಾಗಲೇ ಚಿತ್ರವನ್ನು ನೋಡಿದ್ದೇನೆ. ಎರಡು ನಿಮಿಷ ಕೂಡ ನನ್ನ ಗಮನ ಚಿತ್ರದಿಂದ ಹೊರಗೆ ಬಂದಿಲ್ಲ ಎಂದರು. ಮಕ್ಕಳಿಂದ ಹಿರಿಯರ ತನಕ ಎಲ್ಲರೂ ಮೆಚ್ಚುವಂಥ ಚಿತ್ರ ಎಂದು ಸರ್ಟಿಫಿಕೇಟ್ ನೀಡಿದರು. ನಿರ್ಮಾಪಕಿ ಡಾಕ್ಟರ್ ಗರಿಮಾ ತಾವು ಮಹಾಂತೇಶ ಅವರನ್ನು ನಿರ್ದೇಶಕರಾಗಿ ಆಯ್ಕೆ ಮಾಡುವ ಮೊದಲು ಅರವತ್ತರಷ್ಟು ಮಂದಿಯಲ್ಲಿ ಮಾತನಾಡಿದ್ದೆ. ಅದೇ ರೀತಿ 15 ಮಂದಿ ನಾಯಕರಲ್ಲಿ ಮಾತನಾಡಿದ ಬಳಿಕ ನಿರಂಜನ್ ಅವರನ್ನು ಆಯ್ಕೆ ಮಾಡಿದ್ದೇವೆ. ವೈದ್ಯಕೀಯರಂಗದಿಂದ ಬಂದ ನಾನು ಈಗ ಸಿನಿಮಾ ಮಾಡಲು ಕಲಿತೆ ಎಂದರು. ಚಿತ್ರ ಸೆ.25ರಂದು ತೆರೆಕಾಣಲಿದೆ.
ಇದನ್ನೂ ಓದಿ : https://karnatakanewsbeat.com/newsbeat-big-impact-dilapidated-indira-canteen-revived/



















