ಕೊಚ್ಚಿ: ಉತ್ತರಪ್ರದೇಶದ ಪ್ರಯಾಗ್‌ರಾಜ್ ಕುಂಭಮೇಳದ ವೇಳೆ ತಮ್ಮ ಆಕರ್ಷಕ ನಗು ಮತ್ತು ಕಣ್ಣುಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ವೈರಲ್ ಆಗಿದ್ದ ಇಂದೋರ್ ಮೂಲದ ಯುವತಿ ಮೊನಾಲಿಸಾ ಭೋಸ್ಲೆ ಅವರ ಅಂತರಧರ್ಮೀಯ ವಿವಾಹದ ವಿವಾದ ಈಗ ಮತ್ತೊಂದು ಕಾನೂನು ತಿರುವು ಪಡೆದುಕೊಂಡಿದೆ. ಮೊನಾಲಿಸಾ ಪತಿ ಫರ್ಮಾನ್ ಖಾನ್ ವಿರುದ್ಧ ಮಧ್ಯಪ್ರದೇಶ ಪೊಲೀಸರು ಈಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ (SC/ST Act) ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ದಂಪತಿಯ ನಿರೀಕ್ಷಣಾ ಜಾಮೀನು ಅರ್ಜಿಗೆ ಕಾನೂನು ಮಾನ್ಯತೆ ಇಲ್ಲ ಎಂದು ಪೊಲೀಸರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೊನಾಲಿಸಾ ಅವರ ತಂದೆ ತನ್ನ ಮಗಳನ್ನು ಅಪಹರಿಸಲಾಗಿದೆ ಎಂದು ಮಧ್ಯಪ್ರದೇಶದಲ್ಲಿ ನೀಡಿದ್ದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿತ್ತು. ತಮಗೆ ಜೀವಬೆದರಿಕೆ ಇದೆ ಎಂದು ಹೇಳಿ ಈ ದಂಪತಿ ಕೇರಳದಲ್ಲಿ ಆಶ್ರಯ ಪಡೆದಿದ್ದು, ಬಂಧನದಿಂದ ರಕ್ಷಣೆ ಕೋರಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಶುಕ್ರವಾರ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರ ಪೀಠದ ಮುಂದೆ ನಡೆದ ವಿಚಾರಣೆಯ ವೇಳೆ ಸರ್ಕಾರದ ಪರ ಹಾಜರಿದ್ದ ಅಡಿಷನಲ್ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಅವರು, ಸಂತ್ರಸ್ತೆ ಪರಿಶಿಷ್ಟ ಪಂಗಡಕ್ಕೆ (ST) ಸೇರಿದವರಾಗಿದ್ದು, ಆರೋಪಿ ಫರ್ಮಾನ್ ಖಾನ್ ಬೇರೆ ಸಮುದಾಯದವರಾಗಿದ್ದಾರೆ. ಎಸ್‌ಸಿ/ಎಸ್‌ಟಿ ಕಾಯ್ದೆಯ ಸೆಕ್ಷನ್ 18ರ ಪ್ರಕಾರ ಇಂತಹ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ವಾದಿಸಿದರು.
ಅಪ್ರಾಪ್ತೆಯ ವಿವಾಹ, ಪೋಕ್ಸೊ ಕೇಸ್
ಕಳೆದ ಮಾರ್ಚ್‌ನಲ್ಲಿ ಕೇರಳಕ್ಕೆ ಆಗಮಿಸಿದ್ದ ಈ ಜೋಡಿ, ತಮಗೆ ರಕ್ಷಣೆ ನೀಡುವಂತೆ ಪೊಲೀಸರನ್ನು ಕೋರಿತ್ತು. ತದನಂತರ ಅಧಿಕಾರಿಗಳ ಸಮ್ಮುಖದಲ್ಲೇ ಇವರ ವಿವಾಹ ನಡೆದಿತ್ತು. ಆದರೆ, ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗವು ಈ ಮದುವೆಯ ಸಮಯದಲ್ಲಿ ಯುವತಿಗೆ ಕೇವಲ 16 ವರ್ಷ ವಯಸ್ಸಾಗಿತ್ತು ಮತ್ತು ಮದುವೆಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದಾಗ ವಿವಾದ ಸ್ಫೋಟಗೊಂಡಿತು. ಇದರ ಬೆನ್ನಲ್ಲೇ ಮಧ್ಯಪ್ರದೇಶ ಪೊಲೀಸರು ಫರ್ಮಾನ್ ವಿರುದ್ಧ ಪೋಕ್ಸೊ (POCSO) ಕಾಯ್ದೆ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಇಡೀ ಘಟನೆಗೆ ಸ್ಥಳೀಯವಾಗಿ ‘ಲವ್ ಜಿಹಾದ್’ ಬಣ್ಣವೂ ಲೇಪಿತವಾಗಿತ್ತು.
ಮಧ್ಯಪ್ರದೇಶಕ್ಕೆ ಹೋಗಲು ದಂಪತಿಗೆ ಜೀವಭಯ
ದಂಪತಿಯ ಪರ ವಾದ ಮಂಡಿಸಿದ ಹಿರಿಯ ವಕೀಲ ಶಶೀಂದ್ರನ್ ಅವರು, ಈ ಜೋಡಿಯ ಅಂತರಧರ್ಮೀಯ ವಿವಾಹವನ್ನು ವಿರೋಧಿಸಿ ಮೂಲಭೂತವಾದಿಗಳು ಇವರ ಮದುವೆಯ ಫೋಟೋಗಳನ್ನು ಸಾರ್ವಜನಿಕವಾಗಿ ಸುಟ್ಟು ಹಾಕಿ ದಾಳಿ ನಡೆಸುತ್ತಿದ್ದಾರೆ. ತಮಗೆ ಮಧ್ಯಪ್ರದೇಶದಲ್ಲಿ ತೀವ್ರ ಜೀವಭಯ ಇರುವುದರಿಂದಲೇ ಕೇರಳದಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗಿದೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಲು ಯತ್ನಿಸಿದರು. ಅಲ್ಲದೆ, ತಮ್ಮ ಅರ್ಜಿಯಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಲು ಅನುಮತಿ ಕೋರಿದರು. ಆದರೆ, ಪ್ರಾಸಿಕ್ಯೂಷನ್ ಇದನ್ನು ವಿರೋಧಿಸಿ, ತಮ್ಮ ಕೇಸ್‌ನಲ್ಲಿರುವ ಲೋಪದೋಷಗಳನ್ನು ಮುಚ್ಚಿಹಾಕಲು ದಂಪತಿ ಈ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿತು.
ನ್ಯಾಯಾಲಯದ ಆದೇಶವೇನು?
ಮಧ್ಯಪ್ರದೇಶ ಸರ್ಕಾರವು ಈ ಹಿಂದೆಯೇ ಕೇರಳ ಹೈಕೋರ್ಟ್‌ನ ವ್ಯಾಪ್ತಿಯನ್ನು ಪ್ರಶ್ನಿಸಿತ್ತು. ಎಫ್‌ಐಆರ್ ದಾಖಲಾಗಿರುವುದು ಮಧ್ಯಪ್ರದೇಶದಲ್ಲಿ ಆಗಿರುವುದರಿಂದ, ಜಾಮೀನು ಅರ್ಜಿಯನ್ನು ಸಹ ಅಲ್ಲಿನ ನ್ಯಾಯಾಲಯದಲ್ಲೇ ಸಲ್ಲಿಸಬೇಕು ಎಂದು ವಾದಿಸಿತ್ತು. ಉಭಯ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರು, ಫರ್ಮಾನ್ ಖಾನ್ ಅವರಿಗೆ ನೀಡಲಾಗಿದ್ದ ಮಧ್ಯಂತರ ಬಂಧನ ತಡೆ ಆದೇಶವನ್ನು ಜೂನ್ 2 ರವರೆಗೆ ವಿಸ್ತರಿಸಿದ್ದಾರೆ. ಅರ್ಜಿಯ ತಿದ್ದುಪಡಿ ಕುರಿತು ಮುಂದಿನ ದಿನಗಳಲ್ಲಿ ಹೆಚ್ಚಿನ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದ್ದು, ದಂಪತಿಯ ಭವಿಷ್ಯ ಈಗ ತೂಗುಯ್ಯಾಲೆಯಲ್ಲಿದೆ.


















