ನವದೆಹಲಿ : ದೇಶದಲ್ಲಿ ಎಥನಾಲ್ ಮಿಶ್ರಿತ ಇ-20 ಪೆಟ್ರೋಲ್ ಬಳಕೆ ಕಡ್ಡಾಯಗೊಳಿಸಿದ ದಿನದಿಂದ ಮೈಲೇಜ್ ಕುಸಿತದ ಬಗ್ಗೆ ವಾಹನ ಸವಾರರಿಂದ ವ್ಯಾಪಕ ದೂರುಗಳು ಕೇಳಿಬರುತ್ತಿದ್ದು, ಸರ್ಕಾರದ ನಿರ್ಧಾರ ಭಾರೀ ಆಕ್ರೋಶವೂ ವ್ಯಕ್ತವಾಗುತ್ತಿದೆ. ಈ ವಿವಾದದ ನಡುವೆಯೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದು, ಸಾಮಾನ್ಯ ಕಾರು ಮಾಲೀಕರು ತಮ್ಮ ವಾಹನಗಳ ಮೈಲೇಜ್ ಅನ್ನು ತಾವಾಗಿಯೇ ನಿಖರವಾಗಿ ಅಳೆಯಲು ಸಾಧ್ಯವಿಲ್ಲ. ಇದಕ್ಕಾಗಿ ಅಧಿಕೃತ ಡೀಲರ್‌ಗಳ ಬಳಿ ಇರುವ ಯಂತ್ರಗಳನ್ನೇ ಅವಲಂಬಿಸಬೇಕು ಎಂದು ಹೇಳಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆಯೊಂದರ ಸಂದರ್ಶನದಲ್ಲಿ ನಿತಿನ್ ಗಡ್ಕರಿ ಅವರಿಗೆ, ಇ-20 ಪೆಟ್ರೋಲ್ ಬಳಸಿದ ನಂತರ ಕಾರಿನ ಮೈಲೇಜ್ ಗಣನೀಯವಾಗಿ ಕುಸಿದಿದೆ ಎಂದು ಪತ್ರಕರ್ತೆಯೊಬ್ಬರು ಹೇಳಿದರು. ತಮ್ಮ ಕಾರಿನ ಮೈಲೇಜ್ ಪ್ರತಿ ಲೀಟರ್‌ಗೆ 11 ಕಿಲೋಮೀಟರ್‌ನಿಂದ 7 ಕಿಲೋಮೀಟರ್‌ಗೆ ಕುಸಿದಿದೆ ಎಂದು ಡ್ಯಾಶ್‌ಬೋರ್ಡ್ ಡಿಸ್ ಪ್ಲೇ (Dashboard Display) ಆಧಾರದ ಮೇಲೆ ಆಕೆ ವಿವರಿಸಿದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, “ನೀವು ಅಥವಾ ನಾನು ಕಾರಿನ ಮೈಲೇಜ್ ಅನ್ನು ಸ್ವತಃ ಪರಿಶೀಲಿಸಲು ಸಾಧ್ಯವಿಲ್ಲ. ಕಾರಿನ ನೈಜ ಇಂಧನ ದಕ್ಷತೆಯನ್ನು ಕಂಪನಿ ಅಧಿಕೃತಗೊಳಿಸಿದ ಡೀಲರ್ ಬಳಿ ಇರುವ ವಿಶೇಷ ಯಂತ್ರದ ಮೂಲಕ ಮಾತ್ರವೇ ನಿಖರವಾಗಿ ಅಳೆಯಲು ಸಾಧ್ಯ” ಎಂದು ಸ್ಪಷ್ಟಪಡಿಸಿದರು.
ಮೈಲೇಜ್ ಕುಸಿತ ಒಪ್ಪಿಕೊಂಡ ಕೇಂದ್ರ ಸರ್ಕಾರ
ಕೇಂದ್ರ ಇಂಧನ ಸಚಿವಾಲಯವು ಇತ್ತೀಚೆಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಇ-20 ಪೆಟ್ರೋಲ್ ಬಳಕೆಯಿಂದ ಕೆಲವು ವಾಹನಗಳಲ್ಲಿ ಶೇಕಡಾ 3 ರಿಂದ 5ರಷ್ಟು ಮೈಲೇಜ್ ಕುಸಿತವಾಗುವುದನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ. ಆದರೆ, ವಾಹನ ಚಾಲನೆಯಲ್ಲಿ ಕೇವಲ ಮೈಲೇಜ್ ಒಂದನ್ನೇ ಮಾನದಂಡವಾಗಿ ನೋಡಬಾರದು ಎಂದು ಸರ್ಕಾರ ವಾದಿಸಿದೆ. ಕಚ್ಚಾ ತೈಲ ಆಮದು ಅವಲಂಬನೆಯನ್ನು ತಗ್ಗಿಸಲು, ಪರಿಸರ ಮಾಲಿನ್ಯ ನಿಯಂತ್ರಿಸಲು ಮತ್ತು ಇಂಧನ ಸ್ವಾವಲಂಬನೆ ಸಾಧಿಸಲು ಏ.1ರಿಂದ ದೇಶಾದ್ಯಂತ ಇ-20 ಪೆಟ್ರೋಲ್ ವಿತರಣೆಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಹಳೆಯ ವಾಹನಗಳ ಕಾರ್ಯಕ್ಷಮತೆಯ ಮೇಲೆ ಇದು ಬೀರುವ ಪರಿಣಾಮದ ಬಗ್ಗೆ ವಾಹನ ತಯಾರಕರು ಮತ್ತು ಸವಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ತಜ್ಞರ ವಿಶ್ಲೇಷಣೆಯೇನು?
ವಾಹನ ತಜ್ಞರ ಪ್ರಕಾರ, ಕಾರುಗಳ ಡ್ಯಾಶ್‌ಬೋರ್ಡ್‌ಗಳು ನೀಡುವ ಮೈಲೇಜ್ ಮಾಹಿತಿ ಅಂದಾಜಾಗಿದ್ದರೂ, ಇಂಧನ ಟ್ಯಾಂಕ್ ಅನ್ನು ಪೂರ್ತಿ ಭರ್ತಿ ಮಾಡಿ ಲೆಕ್ಕಾಚಾರ ಹಾಕುವ ಸಾಂಪ್ರದಾಯಿಕ ವಿಧಾನವು ಗ್ರಾಹಕರಿಗೆ ನೈಜ ಮೈಲೇಜ್ ತಿಳಿಯಲು ಅತ್ಯಂತ ನಿಖರವಾದ ದಾರಿಯಾಗಿದೆ. ಇನ್ನು ಕಂಪನಿಗಳ ಡೀಲರ್ ಬಳಿ ಇರುವ ಯಂತ್ರಗಳು ಕೇವಲ ಇಂಧನ ದಕ್ಷತೆಯನ್ನು ಪ್ರದರ್ಶಿಸುವುದಿಲ್ಲ, ಬದಲಿಗೆ ಇಂಜೆಕ್ಟರ್‌ಗಳು ಹಾಗೂ ಸೆನ್ಸಾರ್‌ಗಳ ತಾಂತ್ರಿಕ ಸ್ಥಿತಿಯನ್ನು ಪರೀಕ್ಷಿಸುತ್ತವೆ. ಸಂಚಾರ ದಟ್ಟಣೆ, ಚಾಲನಾ ಶೈಲಿ ಮತ್ತು ರಸ್ತೆಯ ಸ್ಥಿತಿಗತಿಗಳು ಮೈಲೇಜ್ ಮೇಲೆ ಪರಿಣಾಮ ಬೀರುವುದರಿಂದ, ಕೇವಲ ಯಂತ್ರಗಳ ರೀಡಿಂಗ್ ಮಾತ್ರವೇ ಅಂತಿಮವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಚುನಾವಣಾ ಕಣಕ್ಕಿಳಿದಿರುವ ಪ್ರಶಾಂತ್ ಕಿಶೋರ್ ಆಸ್ತಿ ಎಷ್ಟು ಗೊತ್ತಾ? ಪತ್ನಿಯೇ ಹೆಚ್ಚು ಶ್ರೀಮಂತೆ!



















