ಎಡ್ಜ್‌ಬಾಸ್ಟನ್ : ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕ್ರಿಕೆಟ್ ದಂತಕಥೆ ಮಹೇಂದ್ರ ಸಿಂಗ್ ಧೋನಿ ಅನಿರೀಕ್ಷಿತವಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿ ವರ್ಷಗಳೇ ಕಳೆದಿದ್ದರೂ, ಭಾರತೀಯರ ಹೃದಯದಲ್ಲಿ ‘ಕ್ಯಾಪ್ಟನ್ ಕೂಲ್’ ಮೇಲಿರುವ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮೈದಾನದಲ್ಲಿ ಟೀಮ್ ಇಂಡಿಯಾದ ಹಾಲಿ ಆಟಗಾರರ ನಡುವೆ ತೀವ್ರ ಹಣಾಹಣಿ ನಡೆಯುತ್ತಿದ್ದರೆ, ಇತ್ತ ಗ್ಯಾಲರಿಯಲ್ಲಿದ್ದ ಧೋನಿ ಇಡೀ ಪಂದ್ಯದ ಲೈಮ್‌ಲೈಟ್ ಅನ್ನು ತಮ್ಮತ್ತ ಸೆಳೆದುಕೊಂಡು ಭಾರಿ ಸಂಚಲನ ಮೂಡಿಸಿದರು.
ಕ್ರೀಡಾಂಗಣದಲ್ಲಿ ಮುಗಿಲುಮುಟ್ಟಿದ ‘ಧೋನಿ… ಧೋನಿ’ ಕೇಕೆ
ಪಂದ್ಯ ವೀಕ್ಷಿಸಲು ಕ್ರೀಡಾಂಗಣದ ಗ್ಯಾಲರಿಯಲ್ಲಿ ಸಾಮಾನ್ಯ ಪ್ರೇಕ್ಷಕರಂತೆ ಕುಳಿತಿದ್ದ ಧೋನಿಯನ್ನು ಕ್ಯಾಮೆರಾಗಳು ಸೆರೆಹಿಡಿಯುತ್ತಿದ್ದಂತೆಯೇ, ಇಡೀ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲುಮುಟ್ಟಿತ್ತು. ಟೀಮ್ ಇಂಡಿಯಾಕ್ಕೆ ಎರಡು ವಿಶ್ವಕಪ್ ತಂದುಕೊಟ್ಟ ನೆಚ್ಚಿನ ನಾಯಕನನ್ನು ಬಿಗ್ ಸ್ಕ್ರೀನ್ ಮೇಲೆ ಕಣ್ತುಂಬಿಕೊಂಡ ಅಭಿಮಾನಿಗಳು ಎದ್ದು ನಿಂತು ಕರತಾಡನ ಮಾಡುವ ಮೂಲಕ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.
ಭಾರತ ಹಾಗೂ ಇಂಗ್ಲೆಂಡ್ ಆಟಗಾರರು ಮೈದಾನದಲ್ಲಿ ಕಠಿಣ ಪೈಪೋಟಿ ನಡೆಸುತ್ತಿದ್ದರೆ, ಪ್ರೇಕ್ಷಕರ ಕಣ್ಣು ಮಾತ್ರ ಧೋನಿಯವರ ಮೇಲಿತ್ತು. ತಮ್ಮ ಎಂದಿನ ಶಾಂತ ಸ್ವಭಾವ ಹಾಗೂ ಕೂಲ್ ಅಂದಾಜಿನಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಧೋನಿಯವರ ಉಪಸ್ಥಿತಿ, ಅಲ್ಲಿ ಸೇರಿದ್ದ ಸಾವಿರಾರು ಕ್ರೀಡಾಭಿಮಾನಿಗಳಿಗೆ ಬಹುದೊಡ್ಡ ಅಚ್ಚರಿ ಹಾಗೂ ಸಂತಸ ತಂದಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ದೃಶ್ಯಗಳು
ಎಂಎಸ್ ಧೋನಿ ಅವರು ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಅವರ ಫೋಟೋಗಳು ಹಾಗೂ ವಿಡಿಯೋಗಳು ಎಕ್ಸ್ (ಹಿಂದಿನ ಟ್ವಿಟರ್), ಇನ್‌ಸ್ಟಾಗ್ರಾಮ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದವು. ಪ್ರಸಾರಕ ವಾಹಿನಿಗಳು ಧೋನಿ ಪಂದ್ಯ ವೀಕ್ಷಿಸುತ್ತಿರುವ ವಿಡಿಯೋಗಳನ್ನು ಅಧಿಕೃತವಾಗಿ ಹಂಚಿಕೊಂಡಿದ್ದು, ಅಭಿಮಾನಿಗಳು ಈ ದೃಶ್ಯವನ್ನು ನೋಡಿ ಸಂಭ್ರಮಿಸಿದ್ದಾರೆ. ಇನ್ನು ಧೋನಿ ಪಕ್ಕದಲ್ಲಿ ಕುಳಿತು ಪಂದ್ಯ ವೀಕ್ಷಿಸಿದ ಪುಟ್ಟ ಅಭಿಮಾನಿಯೊಬ್ಬನ ಫೋಟೋವನ್ನು ಹಂಚಿಕೊಂಡು ನೆಟ್ಟಿಗರು, “ಇದಕ್ಕಿಂತ ಅದೃಷ್ಟ ಮತ್ತೊಂದಿಲ್ಲ, ಆತನ ಜೀವನದ ಅತ್ಯುತ್ತಮ ಕ್ಷಣವಿದು” ಎಂದು ಬಣ್ಣಿಸಿದ್ದಾರೆ. ಈ ದೃಶ್ಯಗಳು ಕ್ರಿಕೆಟ್ ವಲಯದಲ್ಲಿ ಎಂಎಸ್ ಧೋನಿ ಅವರ ಅಪ್ರತಿಮ ಜನಪ್ರಿಯತೆಯನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿವೆ.
ಇಂದಿಗೂ ಕಿಂಚಿತ್ತೂ ಕಡಿಮೆಯಾಗದ ಕ್ರೇಜ್
ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಸಾಕಷ್ಟು ವರ್ಷಗಳು ಕಳೆದಿವೆ. ಪ್ರಸ್ತುತ ಕೇವಲ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಆದರೂ, ವಿಶ್ವದ ಯಾವುದೇ ಮೂಲೆಯಲ್ಲಿ ಕ್ರಿಕೆಟ್ ಪಂದ್ಯ ನಡೆದರೂ, ಅಲ್ಲಿ ಧೋನಿ ಅಭಿಮಾನಿಗಳು ಇದ್ದೇ ಇರುತ್ತಾರೆ ಎಂಬ ಮಾತಿಗೆ ಈ ಘಟನೆ ಮತ್ತೊಮ್ಮೆ ಪುಷ್ಟಿ ನೀಡಿದೆ. .
ಇದನ್ನೂ ಓದಿ : ಆಂಗ್ಲರ ನಾಡಲ್ಲಿ ಮಿಂಚಿದ ಗುರ್ನೂರ್ ಬ್ರಾರ್‌ಗೆ ಗಾಯದ ಆಘಾತ ; ಟೀಮ್ ಇಂಡಿಯಾ ಪಾಳಯದಲ್ಲಿ ತಲ್ಲಣ!



















