ಕುಂದಾಪುರ: ಬಡವರು, ಮಧ್ಯಮ ವರ್ಗದವರು ಹಾಗೂ ಗ್ರಾಮೀಣ ಭಾಗದ ಜನರಿಗೆ ಸರ್ಕಾರಿ ಆಸ್ಪತ್ರೆಯೇ ಕೊನೆಯ ಆಸರೆಯಾಗಿದ್ದು, ಕೈಯಲ್ಲಿ ಹಣವಿಲ್ಲದಿದ್ದರೂ ಚಿಕಿತ್ಸೆ ದೊರೆಯುತ್ತದೆ ಎಂಬ ನಂಬಿಕೆಯಿಂದ ಜನರು ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸುತ್ತಾರೆ. ಆದರೆ ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಹಣ ಕೇಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ರೋಗಿಗಳು ಹಾಗೂ ಅವರ ಕುಟುಂಬಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಆಸ್ಪತ್ರೆಯ ಸರ್ಜನ್ ಒಬ್ಬರು ಶಸ್ತ್ರಚಿಕಿತ್ಸೆ ನಡೆಸಲು ಹಣ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಹಣ ನೀಡಲು ಸಾಧ್ಯವಾಗದ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡದೆ ಔಷಧಿ ನೀಡಿ ವಾಪಸ್ ಕಳುಹಿಸಲಾಗುತ್ತಿದೆ ಎಂದು ಕುಟುಂಬಸ್ಥರು ದೂರಿದ್ದಾರೆ.
ಕುಟುಂಬಸ್ಥರ ಆರೋಪದ ಪ್ರಕಾರ, ಶಸ್ತ್ರಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಂದರ್ಭದಲ್ಲೂ ಹಣ ಪಾವತಿಸುವಂತೆ ಸೂಚಿಸಲಾಗುತ್ತಿದ್ದು, ಹಣ ನೀಡದೆ ಡಿಸ್ಚಾರ್ಜ್ ಆಗಲು ಅವಕಾಶ ನೀಡುವುದಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಈ ವಿಚಾರ ಈ ಹಿಂದೆಯೇ ಸ್ಥಳೀಯ ಶಾಸಕರ ಗಮನಕ್ಕೂ ಹೋಗಿದ್ದು, ಆಸ್ಪತ್ರೆಯ ವೈದ್ಯರ ಸಭೆ ನಡೆಸಿ ಯಾವುದೇ ರೀತಿಯ ಹಣ ವಸೂಲಿ ನಡೆಯಬಾರದು ಎಂದು ಎಚ್ಚರಿಕೆ ನೀಡಲಾಗಿತ್ತು ಎನ್ನಲಾಗಿದೆ. ಆದರೂ ಹಣದ ಬೇಡಿಕೆ ಮುಂದುವರಿದಿದೆ ಎಂಬ ಆರೋಪ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮೊಬೈಲ್‌ಗೆ ನಿರ್ಬಂಧ ಆರೋಪ
ಆರೋಪ ಎದುರಿಸುತ್ತಿರುವ ವೈದ್ಯರ ಕ್ಯಾಬಿನ್‌ಗೆ ತೆರಳುವ ರೋಗಿಗಳ ಕುಟುಂಬಸ್ಥರಿಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗದಂತೆ ಸೂಚಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಹಣದ ಬೇಡಿಕೆ ಅಥವಾ ಮಾತುಕತೆ ವಿಡಿಯೊ ಚಿತ್ರೀಕರಣವಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.
ಆದರೆ ಚಿಕಿತ್ಸೆಗಾಗಿ ಆಸ್ಪತ್ರೆಯನ್ನೇ ಅವಲಂಬಿಸಿರುವ ಕಾರಣದಿಂದ ವೈದ್ಯರ ವಿರುದ್ಧ ಬಹಿರಂಗವಾಗಿ ದೂರು ನೀಡಲು ಬಹುತೇಕ ರೋಗಿಗಳ ಕುಟುಂಬಸ್ಥರು ಹಿಂದೇಟು ಹಾಕುತ್ತಿದ್ದಾರೆ.
ಶಸ್ತ್ರಚಿಕಿತ್ಸೆಗೊಳಗಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ರೋಗಿಯೊಬ್ಬರ ಕುಟುಂಬವು ಹೆಸರು ಬಹಿರಂಗಪಡಿಸದಂತೆ ಮನವಿ ಮಾಡಿಕೊಂಡು, ಹಣದ ಬೇಡಿಕೆ ಕುರಿತು ತಮ್ಮ ಅಳಲನ್ನು ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.
ಸೇವೆಯ ಹೆಸರಿಗೆ ಕಪ್ಪುಚುಕ್ಕೆ?
ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆ ಹಲವು ವರ್ಷಗಳಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುತ್ತಿರುವ ಆಸ್ಪತ್ರೆಯಾಗಿ ಗುರುತಿಸಿಕೊಂಡಿದೆ. ಕೋವಿಡ್ ಸಂದರ್ಭದಲ್ಲಿ ವೈದ್ಯ ನಾಗೇಶ್ ಸೇರಿದಂತೆ ಅನೇಕ ವೈದ್ಯರು ಹಾಗೂ ಸಿಬ್ಬಂದಿ ಸಲ್ಲಿಸಿದ ಸೇವೆಯನ್ನು ಸಾರ್ವಜನಿಕರು ಇಂದಿಗೂ ಸ್ಮರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲ ವೈದ್ಯರ ವಿರುದ್ಧ ಕೇಳಿಬರುತ್ತಿರುವ ಹಣ ವಸೂಲಿ ಆರೋಪಗಳು ಆಸ್ಪತ್ರೆಯ ಉತ್ತಮ ಹೆಸರಿಗೆ ಧಕ್ಕೆ ತರುವಂತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಇದನ್ನೂ ಓದಿ : ಬಿಜೆಪಿಗೆ ಶೆಹಜಾದ್ ಪೂನಾವಾಲ ಗುಡ್ ಬೈ : ಸಕ್ರಿಯ ರಾಜಕೀಯಕ್ಕೆ ವಿದಾಯ ಹೇಳಿದ್ಯಾಕೆ ರಾಷ್ಟ್ರೀಯ ವಕ್ತಾರ?


















