ಬೆಂಗಳೂರು : ಫುಟ್‌ಪಾತ್‌ನಲ್ಲಿ ಸಾರ್ವಜನಿಕರು ಓಡಾಡಲು ಜಾಗ ಬಿಡುವಂತೆ ಪ್ರಶ್ನಿಸಿದ್ದಕ್ಕೆ ಸ್ಥಳೀಯರ ಮೇಲೆ ಹೂವಿನ ವ್ಯಾಪಾರಿಗಳು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯಲಹಂಕ ನ್ಯೂ ಟೌನ್‌ನ ಅಟ್ಟೂರು ಲೇಔಟ್‌ನ ಕಾಶಿ ವಿಶ್ವನಾಥ ದೇವಸ್ಥಾನದ ಬಳಿ ಫುಟ್‌ಪಾತ್ ಹಾಗೂ ರಸ್ತೆ ಒತ್ತುವರಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ನಾಗರಾಜ್ ಮತ್ತು ವರದರಾಜು ಎಂಬುವವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.
ಅಟ್ಟೂರು ದೇವಸ್ಥಾನದ ಬಳಿ ಕಿರಣ್ ಎಂಬಾತ ರಸ್ತೆ ಬದಿಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದು, ಅಂಗಡಿಯ ಮುಂದೆ ಫುಟ್‌ಪಾತ್ ಮಾತ್ರವಲ್ಲದೆ ರಸ್ತೆಯ ಒಂದು ಭಾಗವನ್ನೂ ವ್ಯಾಪಾರಕ್ಕೆ ಬಳಸಿಕೊಂಡಿದ್ದ ಎನ್ನಲಾಗಿದೆ. ಇದರಿಂದ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಪ್ರಶ್ನಿಸಿದ್ದರು. ಸೆಪ್ಟೆಂಬರ್ 12ರಂದು ಅಂಗಡಿ ಬಳಿ ತೆರಳಿ ರಸ್ತೆ ಹಾಗೂ ಫುಟ್‌ಪಾತ್ ತೆರವು ಮಾಡುವಂತೆ ಸ್ಥಳೀಯರು ಕೇಳಿದಾಗ ಕಿರಣ್ ಹಾಗೂ ಸ್ಥಳೀಯರ ನಡುವೆ ವಾಗ್ವಾದ ನಡೆದಿತ್ತು.
ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರೂ ರಸ್ತೆ ತೆರವು ಮಾಡದೆ ಕಿರಣ್ ಹಾಗೂ ಆತನ ಜೊತೆಗಿದ್ದವರು ಪುಂಡಾಟ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಸೆಪ್ಟೆಂಬರ್ 13ರಂದು ಇದೇ ವಿಚಾರವಾಗಿ ಮತ್ತೆ ಪ್ರಶ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಈ ವೇಳೆ ನಾಗರಾಜ್ ಮತ್ತು ವರದರಾಜು ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದೆ. ಕಿರಣ್ ಜೊತೆಗಿದ್ದ ನಯನ ಎಂಬುವವರು ವರದರಾಜು ವಿರುದ್ಧ ಪ್ರತಿದೂರು ನೀಡಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಎರಡೂ ಕಡೆಯ ಆರೋಪಗಳನ್ನು ಪರಿಗಣಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಫುಟ್‌ಪಾತ್‌ಗಳು ಸಾರ್ವಜನಿಕರ ಓಡಾಟಕ್ಕೆ ಮುಕ್ತವಾಗಿರಬೇಕಾದ ಸಂದರ್ಭದಲ್ಲಿ ರಸ್ತೆ ಬದಿಯ ವ್ಯಾಪಾರದಿಂದ ಜನರಿಗೆ ತೊಂದರೆಯಾಗುತ್ತಿದೆ ಎಂಬ ಸ್ಥಳೀಯರ ಆರೋಪವಿದೆ. ಇದೇ ವಿಚಾರವನ್ನು ಪ್ರಶ್ನಿಸಿದಾಗ ಗಲಾಟೆ ಹಾಗೂ ಹಲ್ಲೆಯವರೆಗೂ ಪ್ರಕರಣ ತಲುಪಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.
ಸಾರ್ವಜನಿಕರು ಓಡಾಡಲು ಜಾಗ ಕೇಳಿದ್ದಕ್ಕೆ ಹಲ್ಲೆಯಾಗಬೇಕಾ? ಎಂಬ ಪ್ರಶ್ನೆಯನ್ನು ಸ್ಥಳೀಯರು ಎತ್ತಿದ್ದು, ಇಂತಹ ಅಕ್ರಮ ಒತ್ತುವರಿ ಹಾಗೂ ಗಲಾಟೆಗಳಿಗೆ ಕಡಿವಾಣ ಹಾಕುವಂತೆ ಸಚಿವ ಕೃಷ್ಣಬೈರೇಗೌಡ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ ; ಆ್ಯಪಲ್ ಏರ್‌ಟ್ಯಾಗ್, ನಕಲಿ ಕೀ ಬಳಸಿ ಹಿಂಬಾಲಿಸಿ ಭಾರತೀಯ ಮೂಲದ ಮಹಿಳೆಯ ಭೀಕರ ಹತ್ಯೆ



















