ನವದೆಹಲಿ : ವಿವಿಧ ಸುದ್ದಿವಾಹಿನಿಗಳ ಸಂವಾದಗಳಲ್ಲಿ ಬಿಜೆಪಿಯ ಪ್ರತಿನಿಧಿಯಾಗಿ ಹಾಗೂ ಪಕ್ಷದ ಪ್ರಖರ ಧ್ವನಿಯಾಗಿ ಗುರುತಿಸಿಕೊಂಡಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲ ಅವರು ಪಕ್ಷ ಹಾಗೂ ಸಕ್ರಿಯ ರಾಜಕೀಯಕ್ಕೆ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ಅವರು ತಮ್ಮ ಹುದ್ದೆಯನ್ನು ತೊರೆದಿರುವುದಾಗಿ ತಿಳಿದುಬಂದಿದೆ.
ತಮ್ಮ ನಿರ್ಧಾರಕ್ಕೂ ಮುನ್ನ ಶೆಹಜಾದ್ ಪೂನಾವಾಲ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ನಲ್ಲಿದ್ದ ‘ಬಿಜೆಪಿ ರಾಷ್ಟ್ರೀಯ ವಕ್ತಾರ’ ಎಂಬ ಹುದ್ದೆಯ ವಿವರವನ್ನು ತೆಗೆದುಹಾಕಿದ್ದರು. ಅದರ ಬದಲಾಗಿ “ಧರ್ಮ: ಇಸ್ಲಾಂ, ಸಂಸ್ಕೃತಿ: ಹಿಂದೂ, ಸಿದ್ಧಾಂತ: ಭಾರತೀಯ. ಲೇಖಕ: ‘ಜಿಎಸ್‌ಟಿ ಕಿ ಯಾತ್ರಾ’; ಪ್ರಧಾನಿ ನರೇಂದ್ರ ಮೋದಿ ಅವರ ಆಜೀವ ಅನುಯಾಯಿ” ಎಂದು ನವೀಕರಿಸಿದ ಬಯೋ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಅವರು ರಾಜಕೀಯ ತೊರೆಯುವ ಕುರಿತು ಹಿಂದೆ ನೀಡಿದ್ದ ಸಂದರ್ಶನದ ವಿಡಿಯೋ ತುಣುಕುಗಳನ್ನು ಮರುಹಂಚಿಕೊಳ್ಳುವ ಮೂಲಕ ರಾಜಕೀಯ ನಿವೃತ್ತಿಯ ಸುಳಿವು ನೀಡಿದ್ದರು.
ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿದ್ದ ಪೂನಾವಾಲ
ವೃತ್ತಿಯಲ್ಲಿ ವಕೀಲರಾಗಿರುವ 38 ವರ್ಷದ ಶೆಹಜಾದ್ ಪೂನಾವಾಲ, ತಮ್ಮ ರಾಜಕೀಯ ಜೀವನವನ್ನು ಕಾಂಗ್ರೆಸ್ ಪಕ್ಷದಿಂದ ಆರಂಭಿಸಿದ್ದರು. 2017ರಲ್ಲಿ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರ ಆಯ್ಕೆಯನ್ನು ‘ವಂಶಪಾರಂಪರ್ಯ ರಾಜಕಾರಣ’ ಎಂದು ಬಹಿರಂಗವಾಗಿ ವಿರೋಧಿಸಿ ಸುದ್ದಿಯಾಗಿದ್ದರು. ತದನಂತರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಅವರಿಗೆ ಪಕ್ಷದ ರಾಷ್ಟ್ರೀಯ ವಕ್ತಾರ ಹುದ್ದೆ ನೀಡಲಾಗಿತ್ತು. ಟಿವಿ ಚರ್ಚೆಗಳಲ್ಲಿ ಪಕ್ಷವನ್ನು ಪ್ರಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದ ಅವರು, ದೆಹಲಿ ಬಿಜೆಪಿಯ ಸೋಷಿಯಲ್ ಮೀಡಿಯಾ ವಿಭಾಗದ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದರು.
ರಾಜಕೀಯ ತೊರೆಯಲು ವೈಯಕ್ತಿಕ ಕಾರಣ
ಸಾಮಾಜಿಕ ಸೇವೆಯು ಸಕ್ರಿಯ ರಾಜಕೀಯಕ್ಕಿಂತಲೂ ದೊಡ್ಡದು ಎಂದು ಭಾವಿಸಿರುವುದಾಗಿ ಹೇಳಿರುವ ಪೂನಾವಾಲ, ದೇಶದ ಪ್ರಮುಖ ಚುನಾವಣೆಗಳ ಬಳಿಕ ನಿವೃತ್ತಿಯಾಗುವ ಯೋಜನೆಯಲ್ಲಿದ್ದೆ ಎಂಬುದಾಗಿ ತಿಳಿಸಿದ್ದಾರೆ. ಪ್ರಸಿದ್ಧ ರಾಜಕೀಯ ವಿಶ್ಲೇಷಕ ತೆಹ್ಸೀನ್ ಪೂನಾವಾಲ ಅವರ ಸಹೋದರರಾಗಿರುವ ಶೆಹಜಾದ್, ಸದ್ಯ ‘ವೈಯಕ್ತಿಕ ಕಾರಣಗಳಿಂದಾಗಿ’ ರಾಜಕೀಯದಿಂದ ದೂರ ಸರಿಯಲು ನಿರ್ಧರಿಸಿದ್ದೇನೆ ಎಂದು ಉಲ್ಲೇಖಿಸಿದ್ದು, ಈ ಕುರಿತು ಶೀಘ್ರದಲ್ಲೇ ಅಧಿಕೃತ ಸ್ಪಷ್ಟನೆ ಹೊರಬೀಳುವ ನಿರೀಕ್ಷೆಯಿದೆ.
ಇದನ್ನೂ ಓದಿ : ಪಾಕ್‌ನಲ್ಲಿ ಭೀಕರ ಹಿಮಪಾತ : ಖ್ಯಾತ ಪರ್ವತಾರೋಹಿ ನಿರ್ಮಲ್ ಪುರ್ಜಾ ನಾಪತ್ತೆ.. ಇಬ್ಬರು ಸಾವು!



















