ಬೆಂಗಳೂರು : ಇಂದು ಗೌರಿ ಗಣೇಶ ಹಬ್ಬದ ಹಿನ್ನೆಲೆ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ನಗರದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಸೂಕ್ಷ್ಮ ಪ್ರದೇಶಗಳು, ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವ ಸ್ಥಳಗಳು, ಮೆರವಣಿಗೆ ಮಾರ್ಗಗಳು ಹಾಗೂ ಗಣೇಶ ವಿಸರ್ಜನೆ ನಡೆಯುವ ಸ್ಥಳಗಳಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ.
ಭದ್ರತೆಗಾಗಿ ನಗರದಲ್ಲಿ ಹೆಚ್ಚುವರಿಯಾಗಿ ಸುಮಾರು 3 ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅದರಲ್ಲೂ ಸೂಕ್ಷ್ಮ ಪ್ರದೇಶಗಳು ಹಾಗೂ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿಟಿವಿಗಳನ್ನು ಅಳವಡಿಸಿ, ಕಮಾಂಡ್ ಸೆಂಟರ್‌ನಿಂದ ನಿರಂತರವಾಗಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಸಿಸಿಟಿವಿ ಜೊತೆಗೆ ಡ್ರೋಣ್‌ಗಳ ಮೂಲಕವೂ ಪ್ರಮುಖ ಪ್ರದೇಶಗಳ ಮೇಲೆ ನಿಗಾ ಇರಿಸಲಾಗಿದೆ.
ಹೆಚ್ಚುವರಿಯಾಗಿ ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದ್ದು, ಆಯಾ ಠಾಣಾ ವ್ಯಾಪ್ತಿಯಲ್ಲಿ ಮಫ್ತಿ ಪೊಲೀಸರು ಹಾಗೂ ಹೊಯ್ಸಳ ಸಿಬ್ಬಂದಿ ಗಸ್ತು ನಡೆಸಲಿದ್ದಾರೆ. ಗಣೇಶ ಮೂರ್ತಿ ಕೂರಿಸಿರುವ ಸ್ಥಳಗಳು ಮತ್ತು ಮೆರವಣಿಗೆ ಮಾರ್ಗಗಳಲ್ಲಿ ಯಾವುದೇ ರೀತಿಯ ಗಲಾಟೆ ಅಥವಾ ಅಹಿತಕರ ಘಟನೆ ನಡೆಯದಂತೆ ಪೊಲೀಸರು ವಿಶೇಷ ನಿಗಾ ವಹಿಸಿದ್ದಾರೆ.
ಗಣೇಶೋತ್ಸವದ ವೇಳೆ ನಿಗದಿತ ಡೆಸಿಬಲ್ ಮಿತಿಯಲ್ಲೇ ಧ್ವನಿವರ್ಧಕಗಳನ್ನು ಬಳಸುವಂತೆ ಆಯೋಜಕರಿಗೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆಗೆ ಸಂಬಂಧಿಸಿದಂತೆ ಈಗಾಗಲೇ ಆಯೋಜಕರಿಗೆ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಲಾಗಿದ್ದು, ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಇದರ ಜೊತೆಗೆ ಮದ್ಯಪಾನ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ಹಾಗೂ ಕೀಟಲೆ ಮಾಡುವ ಕಿಡಿಗೇಡಿಗಳ ಮೇಲೂ ಪೊಲೀಸರು ವಿಶೇಷ ನಿಗಾ ಇರಿಸಲಿದ್ದಾರೆ. ಮೆರವಣಿಗೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ನಗರದ ಒಟ್ಟಾರೆ ಭದ್ರತಾ ವ್ಯವಸ್ಥೆಯ ಮೇಲೆ ನಗರ ಪೊಲೀಸ್ ಕಮೀಷನರ್ ಸೇರಿದಂತೆ ಹಿರಿಯ ಅಧಿಕಾರಿಗಳು ನಿರಂತರವಾಗಿ ನಿಗಾ ವಹಿಸುತ್ತಿದ್ದಾರೆ. ಗೌರಿ ಗಣೇಶ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಸಾರ್ವಜನಿಕರು ಹಾಗೂ ಗಣೇಶೋತ್ಸವ ಆಯೋಜಕರು ಪೊಲೀಸರ ಸೂಚನೆಗಳನ್ನು ಪಾಲಿಸುವಂತೆ ಇಲಾಖೆ ಮನವಿ ಮಾಡಿದೆ.
ಇದನ್ನೂ ಓದಿ : ನಾಡಿನಾದ್ಯಂತ ಗಣೇಶ ಚತುರ್ಥಿ ಸಂಭ್ರಮ ; ಕೆ.ಆರ್ ಮಾರ್ಕೆಟ್‌ನಲ್ಲಿ ಹೂ, ಹಣ್ಣು ಖರೀದಿಗೆ ಮುಗಿಬಿದ್ದ ಜನ!



















