ನವದೆಹಲಿ: ಜಾಗತಿಕ ತೈಲ ವ್ಯಾಪಾರದ ಜೀವನಾಡಿ ಹಾರ್ಮುಜ್ ಜಲಸಂಧಿಯಲ್ಲಿ ಶನಿವಾರ ಸಂಜೆ ಭಾರತದ ಧ್ವಜ ಹೊಂದಿರುವ ಎರಡು ವಾಣಿಜ್ಯ ಹಡಗುಗಳ ಮೇಲೆ ಇರಾನ್‌ನ ಗನ್‌ಬೋಟ್‌ಗಳು ಗುಂಡಿನ ದಾಳಿ ನಡೆಸಿವೆ. ಅದೃಷ್ಟವಶಾತ್, ಈ ದಾಳಿಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಮತ್ತು ಹಡಗುಗಳಿಗೆ ಹಾನಿಯಾಗಿಲ್ಲ ಎಂದು ಅಧಿಕೃತ ಮೂಲಗಳು ಖಚಿತಪಡಿಸಿವೆ.
ದಾಳಿಗೊಳಗಾದ ಹಡಗುಗಳಲ್ಲಿ ಒಂದು ‘ವೆರಿ ಲಾರ್ಜ್ ಕ್ರೂಡ್ ಕ್ಯಾರಿಯರ್’ (VLCC) ವರ್ಗಕ್ಕೆ ಸೇರಿದ ಬೃಹತ್ ತೈಲ ಟ್ಯಾಂಕರ್ ಆಗಿದೆ. ಇವುಗಳನ್ನು ಸಾಮಾನ್ಯವಾಗಿ ದೂರದ ದೇಶಗಳಿಗೆ ಅಪಾರ ಪ್ರಮಾಣದ ಕಚ್ಚಾ ತೈಲವನ್ನು ಸಾಗಿಸಲು ಬಳಸಲಾಗುತ್ತದೆ. ವರದಿಗಳ ಪ್ರಕಾರ, ‘ಜಗ್ ಅರ್ನವ್’ (Jag Arnav) ಮತ್ತು ‘ಸನ್ಮಾರ್ ಹೆರಾಲ್ಡ್’ (Sanmar Herald) ಎಂಬ ಹೆಸರಿನ ಈ ಎರಡು ನೌಕೆಗಳು ಒಮಾನ್‌ನ ಈಶಾನ್ಯ ಭಾಗದ ಶಿಪ್ಪಿಂಗ್ ಲೇನ್‌ನಲ್ಲಿ ಚಲಿಸುತ್ತಿದ್ದಾಗ ನೇರ ದಾಳಿಗೆ ತುತ್ತಾಗಿವೆ. ಘಟನೆಯ ಬೆನ್ನಲ್ಲೇ ಸುರಕ್ಷತೆಯ ದೃಷ್ಟಿಯಿಂದ ಈ ಹಡಗುಗಳು ತಮ್ಮ ಪ್ರಯಾಣವನ್ನು ಅರ್ಧಕ್ಕೇ ಮೊಟಕುಗೊಳಿಸಿ ವಾಪಸ್ ಬಂದಿವೆ.
ಇರಾನ್ ರಾಯಭಾರಿಗೆ ಭಾರತದ ಸಮನ್ಸ್
ಈ ಗಂಭೀರ ವಿದ್ಯಮಾನವನ್ನು ಕೇಂದ್ರ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಇರಾನ್ ರಾಯಭಾರಿಯನ್ನು ಕರೆಸಿಕೊಂಡು ಭಾರತದ ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ. ಸಮುದ್ರಯಾನ ಮಾಡುವ ನೌಕೆಗಳು ಮತ್ತು ನಾವಿಕರ ಸುರಕ್ಷತೆಗೆ ಭಾರತ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ವಿದೇಶಾಂಗ ಕಾರ್ಯದರ್ಶಿಗಳು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈ ಹಿಂದೆ ಭಾರತಕ್ಕೆ ಬರುವ ಹಡಗುಗಳಿಗೆ ಇರಾನ್ ನೀಡಿದ್ದ ಸಹಕಾರವನ್ನು ನೆನಪಿಸಿರುವ ಭಾರತ, ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮತ್ತು ಹಡಗುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಆಗ್ರಹಿಸಿದೆ.
ಪ್ರಸ್ತುತ ಮಧ್ಯಪ್ರಾಚ್ಯದಲ್ಲಿನ ಯುದ್ಧದ ವಾತಾವರಣ ಮತ್ತು ಅಮೆರಿಕದ ದಿಗ್ಬಂಧನಗಳ ನಡುವೆ ಇರಾನ್‌ನ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಗೊಂದಲ ಸೃಷ್ಟಿಯಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಲೆಬನಾನ್‌ನಲ್ಲಿ ಕದನ ವಿರಾಮ ಘೋಷಣೆಯಾದ ನಂತರ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದಾಗಿ ಇರಾನ್ ಮೊದಲು ಹೇಳಿತ್ತು. ಆದರೆ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಪದೇ ಪದೇ ಹೇಳಿಕೆ ಬದಲಿಸುತ್ತಿರುವುದು ಮತ್ತು ಅಮೆರಿಕದ ನೌಕಾಪಡೆಯ ದಿಗ್ಬಂಧನಕ್ಕೆ ಪ್ರತಿಕ್ರಿಯೆಯಾಗಿ ಮತ್ತೆ ಜಲಸಂಧಿಯನ್ನು ಬಂದ್ ಮಾಡುವುದಾಗಿ ಇರಾನ್ ಕೇಂದ್ರ ಮಿಲಿಟರಿ ಕಮಾಂಡ್ ಇಂದು ಬೆಳಗ್ಗೆ ಘೋಷಿಸಿತ್ತು. ಈ ಗೊಂದಲದ ನಡುವೆಯೇ ಹಲವಾರು ಹಡಗುಗಳು ಜಲಸಂಧಿಯನ್ನು ದಾಟಲು ಪ್ರಯತ್ನಿಸುತ್ತಿದ್ದು, ಈ ವೇಳೆ ಈ ದಾಳಿ ನಡೆದಿದೆ.
ಭಾರತದೊಂದಿಗೆ ಇರಾನ್ ಸ್ನೇಹಹಸ್ತ
ಕುತೂಹಲಕಾರಿ ಸಂಗತಿಯೆಂದರೆ, ಇತ್ತೀಚೆಗಷ್ಟೇ ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಅವರು, ಇರಾನ್ ಪಾಲಿಗೆ ಭಾರತವು ಆಪ್ತ ರಾಷ್ಟ್ರವಾಗಿದ್ದು, ಭಾರತೀಯ ಹಡಗುಗಳಿಗೆ ಹೊರ್ಮುಜ್ ಜಲಸಂಧಿಯಲ್ಲಿ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಹೈದರಾಬಾದ್‌ನಲ್ಲಿರುವ ಇರಾನ್ ಕಾನ್ಸುಲೇಟ್ ನೀಡಿರುವ ಮಾಹಿತಿಯ ಪ್ರಕಾರ, ಕಳೆದ ಒಂದು ವಾರದಲ್ಲಿ ಇರಾನ್‌ನಿಂದ ಒಟ್ಟು 6 ಮಿಲಿಯನ್ ಬ್ಯಾರೆಲ್ ತೈಲವನ್ನು ಭಾರತ ಖರೀದಿಸಿದೆ. ಇಂತಹ ಸ್ನೇಹಯುತ ಸಂಬಂಧದ ನಡುವೆಯೇ ಈ ಗುಂಡಿನ ದಾಳಿ ನಡೆದಿರುವುದು ರಾಜತಾಂತ್ರಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: 1 ಗಂಟೆಯಲ್ಲಿ 7 ಸುಳ್ಳು : ಟ್ರಂಪ್ ದಿಗ್ಬಂಧನ ಹೇಳಿಕೆಗೆ ಕೆರಳಿದ ಇರಾನ್, ಹೊರ್ಮುಜ್ ಜಲಸಂಧಿ ಮತ್ತೆ ಮುಚ್ಚುವ ಎಚ್ಚರಿಕೆ!


















