ಬೆಂಗಳೂರು : ಆಧ್ಯಾತ್ಮಿಕ ಗುರು ರವಿಶಂಕರ್ ಅವರು ಸ್ಥಾಪಿಸಿರುವ ಬೆಂಗಳೂರಿನ ಕನಕಪುರ ರಸ್ತೆಯ ‘ದಿ ಆರ್ಟ್ ಆಫ್ ಲಿವಿಂಗ್’ ಆಶ್ರಮವು ದಲಿತರ ಜಮೀನನ್ನು ಕಬಳಿಸಿದೆ ಎಂಬ ಆರೋಪದ ವಿರುದ್ದ ಸಮತಾ ಸೈನಿಕ ದಳ (SSD) ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದೆ. ಇಂದು (ಆಗಸ್ಟ್ 2) ಆಶ್ರಮದ ಮುಂಭಾಗದಲ್ಲಿ ಬೃಹತ್ ತಮಟೆ ಚಳುವಳಿ, ಪೊರಕೆ ಯೋಗ ಚಳುವಳಿ ಹಾಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಆಶ್ರಮವು ಜಮೀನನ್ನು ದಲಿತರಿಗೆ ವಾಪಸ್ ನೀಡುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ‘ಸಮತಾ ಸೈನಿಕ ದಳ’ ತಿಳಿಸಿದೆ.
ಇಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೃಹತ್ ಮಟ್ಟದ ತಮಟೆ ಚಳುವಳಿ ನಡೆಯಲಿದ್ದು, ಬಳಿಕ ಮಧ್ಯಾಹ್ನ 2ರಿಂದ 2.30ರವರೆಗೆ 30 ನಿಮಿಷಗಳ ಪೊರಕೆ ಯೋಗ ಚಳುವಳಿ ಹಮ್ಮಿಕೊಳ್ಳಲಾಗಿದೆ. ನಂತರ ಮಧ್ಯಾಹ್ನ 3 ಗಂಟೆಯಿಂದ ಮತ್ತೆ ತಮಟೆ ಚಳುವಳಿ ಮುಂದುವರಿಯಲಿದ್ದು, ರಾತ್ರಿಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭವಾಗಲಿದೆ. ದಲಿತರ ಜಮೀನನ್ನು ವಾಪಸ್ ನೀಡುವವರೆಗೆ ಯಾವುದೇ ಅಡ್ಡಿ-ಆತಂಕಗಳಿಗೆ ಮಣಿಯದೆ ಹೋರಾಟವನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದು ಸಮತಾ ಸೈನಿಕ ದಳ ಘೋಷಿಸಿದೆ.
ಇಂದಿನ ಈ ಹೋರಾಟಕ್ಕೆ ದಲಿತಪರ ಸಂಘಟನೆಗಳು, ರೈತಪರ ಸಂಘಟನೆಗಳು, ಮಹಿಳಾ ಚಳುವಳಿ ಸಂಘಟನೆಗಳು, ವಿದ್ಯಾರ್ಥಿ ಒಕ್ಕೂಟಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿ ಹೋರಾಟ ಯಶಸ್ವಿಗೊಳಿಸುವಂತೆ ಸಮತಾ ಸೈನಿಕ ದಳ ಕರೆ ನೀಡಿದೆ.
ಇನ್ನು, ಆರ್ಟ್ ಆಫ್ ಲಿವಿಂಗ್ ಆಶ್ರಮದ ಜಮೀನು ಅಕ್ರಮ ಕಬಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆಗೆ ಆದೇಶ ನೀಡಿದೆ. ಈ ಪ್ರಕರಣದ ತನಿಖೆ ಮುಂದುವರಿದಿರುವ ಬೆನ್ನಲ್ಲೇ ಸಮತಾ ಸೈನಿಕ ದಳ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದು, ತನಿಖೆ ಪಾರದರ್ಶಕವಾಗಿ ನಡೆಯಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಇದನ್ನೂ ಓದಿ : 45 ಕೋಟಿ ವೆಚ್ಚದ ‘ವಿವೇಕ ಸ್ಮಾರಕ’ ಉದ್ಘಾಟಿಸಿದ ಪ್ರಧಾನಿ ಮೋದಿ


















