ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ಒಂದೇ ಕುಟುಂಬದ ಮೂವರು ದುರ್ಮರಣ ಹೊಂದಿರುವ ದಾರುಣ ಘಟನೆ ನಡೆದಿದೆ.

ಮೃತರನ್ನು ಮಲ್ಲಿಕಾರ್ಜುನ (35), ನಾಗವೇಣಿ (28), ಸಂತೋಷ (3) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೊಕ್ಕರೆಗಾರು ಗ್ರಾಮದ ನಿವಾಸಿಗಳು ಎಂಬುದು ತಿಳಿದುಬಂದಿದೆ. ತಡರಾತ್ರಿ 2:30 ವೇಳೆಯಲ್ಲಿ ಎಲ್ಲರೂ ಮಲಗಿದ್ದಾಗ ಮನೆ ಮೇಲೆ ಏಕಾಏಕಿ ಗುಡ್ಡ ಕುಸಿದಿದೆ. ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ತೆರವು ಕಾರ್ಯಕ್ಕೆ ಮಳೆಯಿಂದ ಕಷ್ಟವಾಗುತ್ತಿದೆ ಎಂದು ತಿಳಿದುಬಂದಿದೆ.
ಗುಡ್ಡದ ಕೆಳಭಾಗದಲ್ಲಿ ಶಡ್ ನಿರ್ಮಾಣ ಮಾಡಿಕೊಂಡು ಕುಟುಂಬ ವಾಸವಿತ್ತು. ಘಟನೆಯಲ್ಲಿ ಪಕ್ಕದ ಶೆಡ್ನಲ್ಲಿದ್ದವರಿಗೂ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಸದ್ಯದ ಮಾಹಿತಿ ಪ್ರಕಾರ ಅವಶೇಷಗಳ ಅಡಿ ಸಿಲುಕಿದ್ದ ಹನುಮಂತ ಎಂಬವರನ್ನು ರಕ್ಷಣಾ ತಂಡ ರಕ್ಷಿಸಿದೆ. ಅವರನ್ನು ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಗೆ ಸಾಗಿಸಲಾಗಿದೆ.
ಸ್ಥಳಕ್ಕೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : 7 ಸಾವಿರ ವಿದ್ಯಾರ್ಥಿಗಳಿಗೆ HIV ಸೋಂಕು ಎಂಬ ಸುದ್ದಿ ಸುಳ್ಳು : ಆರೋಗ್ಯ ಇಲಾಖೆ ಸ್ಪಷ್ಟನೆ!


















