ಬೆಂಗಳೂರು : ರಾಜ್ಯದಲ್ಲಿ 7 ಸಾವಿರ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್‌ಐವಿ ಸೋಂಕು ದೃಢಪಟ್ಟಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳು ಹಾಗೂ ಕೆಲ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಮಾಹಿತಿ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡದೆ, ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, 2026ರ ಏಪ್ರಿಲ್‌ನಿಂದ ಜೂನ್‌ವರೆಗೆ 5.53 ಲಕ್ಷಕ್ಕೂ ಹೆಚ್ಚು ಮಂದಿಗೆ ಹೆಚ್‌ಐವಿ ಪರೀಕ್ಷೆ ನಡೆಸಲಾಗಿದ್ದು, ಈ ಅವಧಿಯಲ್ಲಿ 3,091 ಮಂದಿಯಲ್ಲಿ ಹೆಚ್‌ಐವಿ ಸೋಂಕು ದೃಢಪಟ್ಟಿದೆ. ಇದೇ ವೇಳೆ 2.81 ಲಕ್ಷಕ್ಕೂ ಹೆಚ್ಚು ಗರ್ಭಿಣಿಯರ ಪರೀಕ್ಷೆ ನಡೆಸಲಾಗಿದ್ದು, ಅವರಲ್ಲಿ 111 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಒಟ್ಟಾರೆ ಈ ಮೂರು ತಿಂಗಳಲ್ಲಿ 3,202 ಹೆಚ್‌ಐವಿ ಪ್ರಕರಣಗಳು ಮಾತ್ರ ದೃಢಪಟ್ಟಿದ್ದು, 7 ಸಾವಿರ ಕಾಲೇಜು ವಿದ್ಯಾರ್ಥಿಗಳಿಗೆ ಸೋಂಕು ಎಂಬ ವರದಿಗೆ ಯಾವುದೇ ಆಧಾರವಿಲ್ಲ ಎಂದು ಇಲಾಖೆ ತಿಳಿಸಿದೆ.
ಇನ್ನು, 2004ರಿಂದ 18ರಿಂದ 35 ವರ್ಷದೊಳಗಿನ 39,028 ಮಂದಿ ಹೆಚ್‌ಐವಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಂಕಿ-ಅಂಶವನ್ನು ತಪ್ಪಾಗಿ ಅರ್ಥೈಸಿ 7 ಸಾವಿರ ಕಾಲೇಜು ವಿದ್ಯಾರ್ಥಿಗಳಿಗೆ ಸೋಂಕು ಎಂಬ ರೀತಿಯಲ್ಲಿ ಕೆಲವರು ತಪ್ಪು ಮಾಹಿತಿ ಹರಡಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ.
ಇದಲ್ಲದೆ, HIV/AIDS (ತಡೆ ಮತ್ತು ನಿಯಂತ್ರಣ) ಕಾಯ್ದೆ–2017ರ ಪ್ರಕಾರ ಹೆಚ್‌ಐವಿ ಪರೀಕ್ಷೆ ಕಡ್ಡಾಯವಲ್ಲ. ಸೋಂಕಿನ ಅಪಾಯವಿದೆ ಎಂದು ಅನುಮಾನವಿದ್ದರೆ ICTC (Integrated Counselling and Testing Centre) ಕೇಂದ್ರಗಳಲ್ಲಿ ಸ್ವಯಂಪ್ರೇರಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕಾಲೇಜುಗಳಲ್ಲಿ MAS ಹಾಗೂ ರೆಡ್ ರಿಬ್ಬನ್ ಅಭಿಯಾನಗಳ ಮೂಲಕ ಹೆಚ್‌ಐವಿ ಕುರಿತು ನಿರಂತರ ಜಾಗೃತಿ ಮೂಡಿಸಲಾಗುತ್ತಿದ್ದು, ತಪ್ಪು ಮಾಹಿತಿ ನಂಬಬೇಡಿ, ನಿಖರ ಮಾಹಿತಿಯನ್ನೇ ಪ್ರಸಾರ ಮಾಡಿ ಎಂದು ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಮನವಿ ಮಾಡಿದೆ.
ಇದನ್ನೂ ಓದಿ : ‘ಆರ್ಟ್ ಆಫ್ ಲಿವಿಂಗ್’ ಭೂಕಬಳಿಕೆ ವಿರುದ್ಧ ಸಿಡಿದೆದ್ದ ಸಮತಾ ಸೈನಿಕ ದಳ – ಇಂದಿನಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ !


















