ಫರೀದಾಬಾದ್ : ಹರ್ಯಾಣದ ಫರೀದಾಬಾದ್‌ನಲ್ಲಿ ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದ್ದು, ಖಾಸಗಿ ಶಾಲೆಯೊಂದರ 29 ವರ್ಷದ ಶಿಕ್ಷಕಿಯನ್ನು ದುಷ್ಕರ್ಮಿಯೊಬ್ಬ ಸಾರ್ವಜನಿಕವಾಗಿಯೇ ಅತ್ಯಂತ ಕ್ರೂರವಾಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಸಿಕ್ರೋನಾ ಗ್ರಾಮದ ಶಾಲೆಯೊಂದರಲ್ಲಿ ಬುಧವಾರ ಬೆಳಗ್ಗೆ ಈ ಘಟನೆ ಸಂಭವಿಸಿದ್ದು, ಮೃತರನ್ನು ಸಂಧ್ಯಾ ಎಂದು ಗುರುತಿಸಲಾಗಿದೆ. ಮುಖವಾಡ ಧರಿಸಿ ಬಂದಿದ್ದ ಪಾತಕಿ, ಕೇವಲ 30 ಸೆಕೆಂಡುಗಳ ಅವಧಿಯಲ್ಲಿ ಶಿಕ್ಷಕಿಗೆ ಬರೋಬ್ಬರಿ 34 ಬಾರಿ ಚಾಕುವಿನಿಂದ ಇರಿದು ರಕ್ತದ ಮಡುವಿನಲ್ಲಿ ನರಳುವಂತೆ ಮಾಡಿ ಪರಾರಿಯಾಗಿದ್ದಾನೆ. ಈ ಭೀಕರ ದೃಶ್ಯ ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಶಾಲೆ ಆವರಣಕ್ಕೆ ಮುಖ ಮುಚ್ಚಿಕೊಂಡು ಬಂದಿದ್ದ ಆರೋಪಿ, ಶಾಲೆಯ ಗೇಟ್ ಬಳಿ ಶಿಕ್ಷಕಿ ಸಂಧ್ಯಾ ಅವರ ಹೆಸರನ್ನು ಹೇಳಿ ಕರೆಸಿಕೊಂಡಿದ್ದಾನೆ. ಅವರು ಹೊರಬರುತ್ತಿದ್ದಂತೆಯೇ ಅವರ ಕತ್ತನ್ನು ಹಿಡಿದು ಹೊರಗೆ ಎಳೆದಾಡಿದ ಆತ, ತಕ್ಷಣವೇ ತನ್ನ ಬಳಿಯಿದ್ದ ಚಾಕುವಿನಿಂದ ಮುಖ, ಕತ್ತು ಹಾಗೂ ಎದೆಯ ಭಾಗಕ್ಕೆ ಸರಸರನೆ ಇರಿಯಲು ಪ್ರಾರಂಭಿಸಿದ್ದಾನೆ. ಶಿಕ್ಷಕಿ ನೆಲಕ್ಕೆ ಬಿದ್ದರೂ ಬಿಡದ ಪಾತಕಿ, ಆಕೆಯ ಹೊಟ್ಟೆ ಮತ್ತು ಮುಖಕ್ಕೆ ಮತ್ತೆ ಮತ್ತೆ ಇರಿದಿದ್ದಾನೆ. ಕಿರುಚಾಟ ಕೇಳಿ ಶಾಲೆಯ ಆಡಳಿತಾಧಿಕಾರಿ ತಡೆಯಲು ಬಂದಾಗ, ಆತನ ಮೇಲೆಯೂ ದಾಳಿಗೆ ಯತ್ನಿಸಿ, ನಂತರ ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಸಂಧ್ಯಾ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಪ್ರೀತಿ ನಿರಾಕರಿಸಿದ್ದಕ್ಕೆ ಕೃತ್ಯ
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕೊಟ್ ಗ್ರಾಮದ ನಿವಾಸಿ, 21 ವರ್ಷದ ಅಮಿತ್ ಎಂಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಅಮಿತ್ ಕಳೆದ ಎರಡು ವರ್ಷಗಳಿಂದ ಸಂಧ್ಯಾ ಅವರನ್ನು ಹಿಂಬಾಲಿಸುತ್ತಾ ಕಿರುಕುಳ ನೀಡುತ್ತಿದ್ದ. ಶಿಕ್ಷಕಿ ಆತನ ಸಂಪರ್ಕವನ್ನು ನಿರಾಕರಿಸಿದ್ದರೂ ಆತ ಬೆನ್ನಟ್ಟುವುದನ್ನು ಬಿಟ್ಟಿರಲಿಲ್ಲ.
ಹಳೆಯ ದ್ವೇಷವೇ ಹತ್ಯೆಗೆ ಕಾರಣ?
ಆರೋಪಿಯ ನಿರಂತರ ಕಿರುಕುಳದಿಂದ ಬೇಸತ್ತಿದ್ದ ಶಿಕ್ಷಕಿ ಸಂಧ್ಯಾ, ಕೆಲವೇ ದಿನಗಳ ಹಿಂದೆ ಆತನ ವಿರುದ್ಧ ಲೈಂಗಿಕ ಕಿರುಕುಳದ (ಮಹಿಳೆ ಮೇಲಿನ ದೌರ್ಜನ್ಯ) ದೂರು ನೀಡಿದ್ದರು. ಆ ಸಮಯದಲ್ಲಿ ಆರೋಪಿ ಸಾರ್ವಜನಿಕವಾಗಿ ಕ್ಷಮೆ ಕೇಳಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದ. ಆದರೆ, ತನ್ನ ವಿರುದ್ಧ ಪೊಲೀಸ್ ದೂರು ನೀಡಿದ್ದನ್ನೇ ಮನಸ್ಸಿನಲ್ಲಿಟ್ಟುಕೊಂಡು ಹಗೆತನ ಬೆಳೆಸಿಕೊಂಡಿದ್ದ ಅಮಿತ್, ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಈ ಭೀಕರ ಹತ್ಯೆ ನಡೆಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ : ಪಾಕ್‌ನಲ್ಲಿ 30ಕ್ಕೂ ಹೆಚ್ಚು ಲಷ್ಕರ್ ಉಗ್ರರ ಹತ್ಯೆಗೈದ ‘ಅನಾಮಧೇಯ ಬಂದೂಕುಧಾರಿಗಳು’ : ಬಾಯ್ಬಿಟ್ಟ ಭಯೋತ್ಪಾದಕ!


















