ಇಸ್ಲಾಮಾಬಾದ್ : ದುರಂಧರ್ ಶೈಲಿಯ ಹತ್ಯೆಗಳು ಪಾಕಿಸ್ತಾನದ ನಿಷೇಧಿತ ಭಯೋತ್ಪಾದಕ ಸಂಘಟನೆ ‘ಲಷ್ಕರ್-ಎ-ತೊಯ್ಬಾ‘ (LeT) ಜಾಲದಲ್ಲಿ ನಡುಕ ಹುಟ್ಟಿಸಿದೆ. ಪಾಕಿಸ್ತಾನದೊಳಗೆ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ತಮ್ಮ ಸಂಘಟನೆಯ 30ಕ್ಕೂ ಹೆಚ್ಚು ಉಗ್ರರನ್ನು “ಅನಾಮಧೇಯ ಬಂದೂಕುಧಾರಿಗಳು” ಹತ್ಯೆ ಮಾಡಿದ್ದಾರೆ ಎಂದು ಲಷ್ಕರ್‌ನ ಹಿರಿಯ ಉಗ್ರ ರಿಜ್ವಾನ್ ಹನೀಫ್ ಕ್ಯಾಮೆರಾ ಎದುರು ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ. ಈ ಕುರಿತ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಜಾಗತಿಕ ಮಟ್ಟದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಪಾಕ್, ಪಿಒಕೆ ಪ್ರದೇಶಗಳಲ್ಲಿ ಸರಣಿ ಹತ್ಯೆ
2008ರ ಮುಂಬೈ ಭೀಕರ ಉಗ್ರರ ದಾಳಿಗೆ ಕಾರಣವಾಗಿರುವ ಲಷ್ಕರ್-ಎ-ತೊಯ್ಬಾವನ್ನು ತಾನು ಎಂದೋ ನಿಷೇಧಿಸಿ ರದ್ದುಗೊಳಿಸಿದ್ದೇನೆ ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತಾ ಬಂದಿದೆ. ಆದರೆ, ಈಗ ವೈರಲ್ ಆಗಿರುವ ವಿಡಿಯೋದಲ್ಲಿ ರಿಜ್ವಾನ್ ಹನೀಫ್, ಪಾಕಿಸ್ತಾನದ ಪೇಶಾವರ, ಕರಾಚಿ, ರಾವಲ್ಪಿಂಡಿ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ರಾವಲಕೋಟ್, ಮುಜಫರಾಬಾದ್ ಮುಂತಾದ ಕಡೆಗಳಲ್ಲಿ ತಮ್ಮ ಕಾರ್ಯಕರ್ತರನ್ನು ಗುರಿಯಾಗಿಸಿ ಹತ್ಯೆ ಮಾಡಲಾಗಿದೆ ಎಂದು ಹೇಳಿಕೊಂಡಿರುವುದು ಪಾಕಿಸ್ತಾನದ ನಿಜ ಬಣ್ಣವನ್ನು ಬಯಲು ಮಾಡಿದೆ. ಲಷ್ಕರ್ ಸಂಘಟನೆಯ ಉಗ್ರನೊಬ್ಬ ಸಾರ್ವಜನಿಕವಾಗಿ ಇಷ್ಟೊಂದು ದೊಡ್ಡ ಮಟ್ಟದ ಸರಣಿ ಹತ್ಯೆಗಳನ್ನು ಒಪ್ಪಿಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ.
ವಿಡಿಯೋದ ಸತ್ಯಾಸತ್ಯತೆ ದೃಢಪಡಿಸಿದ ಭಾರತೀಯ ಏಜೆನ್ಸಿಗಳು
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋ ನಿಜವಾದದ್ದು ಎಂದು ಭಾರತೀಯ ರಕ್ಷಣಾ ಮತ್ತು ತನಿಖಾ ಏಜೆನ್ಸಿಗಳು ದೃಢಪಡಿಸಿವೆ. ವಿಡಿಯೋದಲ್ಲಿ ಮಾತನಾಡಿರುವ ವ್ಯಕ್ತಿ ಭಾರತಕ್ಕೆ ಬೇಕಾಗಿರುವ ಲಷ್ಕರ್-ಎ-ತೊಯ್ಬಾದ ಹಿರಿಯ ಉಗ್ರ ರಿಜ್ವಾನ್ ಹನೀಫ್ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಯೋಜನಾಬದ್ಧ ಹತ್ಯೆಗಳ ಹಿಂದೆ ಭಾರತೀಯ ತನಿಖಾ ಸಂಸ್ಥೆಗಳ ಕೈವಾಡವಿದೆ ಎಂದು ಹನೀಫ್ ಆರೋಪಿಸಿದ್ದಾನಾದರೂ, ಭಾರತ ಸರ್ಕಾರ ಈ ಆಧಾರರಹಿತ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ.
ಧಾರ್ಮಿಕ ಭಾವನೆ ಕೆರಳಿಸುವ ಯತ್ನ
ವಿಡಿಯೋದಲ್ಲಿ ಉಗ್ರ ರಿಜ್ವಾನ್ ಹನೀಫ್ ಹಿಂದೂ ಧರ್ಮದ ವಿರುದ್ಧ ಅತ್ಯಂತ ನಿಂದನಾತ್ಮಕ ಮತ್ತು ದ್ವೇಷಪೂರಿತ ಪದಗಳನ್ನು ಬಳಸಿರುವುದೂ ಕಂಡುಬಂದಿದೆ. ಭಯೋತ್ಪಾದಕ ಸಂಘಟನೆಗಳು ಯುವಕರನ್ನು ತೀವ್ರವಾದದತ್ತ ಸೆಳೆಯಲು ಮತ್ತು ಸಮಾಜದಲ್ಲಿ ದ್ವೇಷವನ್ನು ಹರಡಲು ಧಾರ್ಮಿಕ ಭಾವನೆಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತವೆ ಎಂಬುದಕ್ಕೆ ಈ ವಿಡಿಯೋ ಸ್ಪಷ್ಟ ನಿದರ್ಶನವಾಗಿದೆ. 2005ರಲ್ಲೇ ಅಲ್-ಖೈದಾ ಮತ್ತು ತಾಲಿಬಾನ್ ಜೊತೆಗಿನ ನಂಟಿನ ಕಾರಣಕ್ಕೆ ವಿಶ್ವಸಂಸ್ಥೆಯಿಂದ ನಿಷೇಧಕ್ಕೊಳಗಾಗಿರುವ ಈ ಸಂಘಟನೆಯ ಅಸಲಿ ಮುಖವಾಡ ಈಗ ಮತ್ತೊಮ್ಮೆ ಕಳಚಿಬಿದ್ದಿದೆ.
ಇದನ್ನೂ ಓದಿ : ನಟಿ ತ್ರಿಷಾ ಬಗ್ಗೆ ವಿವಾದಾತ್ಮಕ ಹೇಳಿಕೆ : ತಮಿಳುನಾಡು ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಬಂಧನ



















