ಬೆಂಗಳೂರು : ಜಾಗತಿಕ ಭೌಗೋಳಿಕ ಸಂಘರ್ಷದ ಹಿನ್ನೆಲೆಯಲ್ಲಿ ಭಾರತದ ಆರ್ಥಿಕತೆ ದೃಷ್ಟಿಯಿಂದ ಮುಂದಿನ ಒಂದು ವರ್ಷದವರೆಗೆ ದೇಶದ ಜನ ಚಿನ್ನ ಖರೀದಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ, ಮಂಗಳವಾರ (ಮೇ 12) ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 54 ರೂಪಾಯಿ ಏರಿಕೆಯಾಗಿದೆ. ಹಾಗಾಗಿ, ಮುಂದೇನಾಗಬಹುದು ಎಂಬ ಕುತೂಹಲ, ಆತಂಕ ಜನರಲ್ಲಿ ಮೂಡಿದೆ.
ಬೆಂಗಳೂರಿನಲ್ಲಿ ಮಂಗಳವಾರ 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 54 ರೂಪಾಯಿ ಜಾಸ್ತಿಯಾಗಿದೆ. ಇದರೊಂದಿಗೆ 10 ಗ್ರಾಂ ಚಿನ್ನದ ಬೆಲೆಯು 1,53,980 ರೂಪಾಯಿ ಆಗಿದೆ. ಹಾಗೆಯೇ, 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಒಂದು ಗ್ರಾಂಗೆ 50 ರೂಪಾಯಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆಯು 1,41,150 ರೂಪಾಯಿ ಆಗಿದೆ. ಸೋಮವಾರ ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿತ್ತು.
ಬೆಳ್ಳಿಯ ಬೆಲೆಯಲ್ಲೂ ಭಾರಿ ಏರಿಕೆ
ಚಿನ್ನ ಮಾತ್ರವಲ್ಲ, ಬೆಳ್ಳಿಯ ಬೆಲೆಯಲ್ಲೂ ಮಂಗಳವಾರ ಭಾರಿ ಏರಿಕೆಯಾಗಿದೆ. ಒಂದು ಕೆ.ಜಿ ಬೆಳ್ಳಿಯ ದರದಲ್ಲಿ ಬರೋಬ್ಬರಿ 15 ಸಾವಿರ ರೂಪಾಯಿ ಜಾಸ್ತಿಯಾಗಿದೆ. ಇದರೊಂದಿಗೆ ರಾಜ್ಯ ರಾಜಧಾನಿಯಲ್ಲಿ ಒಂದು ಕೆ.ಜಿ ಬೆಳ್ಳಿಯ ಬೆಲೆಯು 2.9 ಲಕ್ಷ ರೂಪಾಯಿ ಆಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬೆಳ್ಳಿ ಹಾಗೂ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿರುವುದು ಭಾರತದ ಮೇಲೂ ಪರಿಣಾಮ ಬೀರಿದೆ ಎಂದು ವರದಿಯಾಗಿದೆ.
ಇರಾನ್ ಹಾಗೂ ಅಮೆರಿಕ ಮಧ್ಯೆ ಸಂಘರ್ಷ ನಡೆಯುತ್ತಿರುವ ಕಾರಣ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಾಣುತ್ತಿದೆ. ಇಂಧನ ಪೂರೈಕೆಯಲ್ಲೂ ವ್ಯತ್ಯಯವಾಗಿದೆ. ಇದರಿಂದಾಗಿಯೇ ಮೋದಿ ಅವರು ಚಿನ್ನ ಖರೀದಿ ಬೇಡ ಎಂದು ಕರೆ ನೀಡಿದ್ದಾರೆ. ಹಾಗೆಯೇ, ಪೆಟ್ರೋಲ್, ಡೀಸೆಲ್ ಅನವಶ್ಯಕ ಬಳಕೆ, ಮನೆಯಿಂದಲೇ ಕೆಲಸ ಮಾಡುವುದು, ಆನ್ ಲೈನ್ ಕ್ಲಾಸ್ ನಡೆಸುವುದು ಸೇರಿ ಹಲವು ಕರೆ ನೀಡಿದ್ದಾರೆ.
ಇದನ್ನೂ ಓದಿ : ಭಾರತಕ್ಕೆ ಬಿಕ್ಕಟ್ಟು ಸ್ಥಿತಿ – ಮತ್ತೆ ಆನ್‌ಲೈನ್ ಕ್ಲಾಸ್ ಚರ್ಚೆ!


















