ಪಾಟ್ನಾ : ಬಿಹಾರದಲ್ಲಿ ನೈತಿರ ಪೊಲೀಸ್ಗಿರಿ ಹಾಗೂ ಮಹಿಳೆಯರು, ಅಪ್ರಾಪ್ತ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿದ್ದು, ಅಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಹಲವು ಪ್ರಶ್ನೆಗಳು ಮೂಡುವಂತೆ ಮಾಡಿವೆ. ಜಮೂಯಿ ಹಾಗೂ ಸಮಸ್ತಿಪುರದಲ್ಲಿ ನಡೆದ ಕಿರುಕುಳ ಘಟನೆಗಳ ಬೆನ್ನಲ್ಲೇ, ಇದೀಗ ಬಂಕಾ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣ ಮಂದಾರ ಪರ್ವತದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಯುವಕರ ಗುಂಪೊಂದು ಕಿರುಕುಳ ನೀಡಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂದು ವಾರದ ಅವಧಿಯಲ್ಲಿ ವರದಿಯಾದ ಇಂತಹ ಮೂರನೇ ಘಟನೆ ಇದಾಗಿದೆ.
ವೈರಲ್ ಆಗಿರುವ ವಿಡಿಯೋವನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದು, ಬೌನ್ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆಯು ಜೂನ್ 3ರಂದು ನಡೆದಿದೆ ಎಂದು ಶಂಕಿಸಲಾಗಿದ್ದು, ಘಟನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಹಾಗೂ ಸಂದರ್ಭಗಳನ್ನು ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಣ ಸುಲಿಗೆ, ಬೆದರಿಕೆ
ಪೊಲೀಸ್ ಎಫ್ಐಆರ್ ಪ್ರಕಾರ, ಸಂತ್ರಸ್ತ ಯುವತಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಮಂದಾರ ಪರ್ವತ ವೀಕ್ಷಣೆಗೆ ತೆರಳಿದ್ದಾಗ ಮೂವರು ಯುವಕರು ಅವರನ್ನು ತಡೆದು ನಿಂದಿಸಿದ್ದಾರೆ. ಅಲ್ಲದೆ, ಕೊಲೆ ಬೆದರಿಕೆ ಹಾಕಿ, ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.
ಆರೋಪಿಗಳನ್ನು ಅಬ್ದುಲ್ಲಾ, ನಿತೀಶ್ ಕುಮಾರ್ ರಾಯ್ ಮತ್ತು ವಿಕಾಸ್ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿ ಅಬ್ದುಲ್ಲಾ ಸಂತ್ರಸ್ತೆಯ ಸ್ನೇಹಿತನ ಆನ್ಲೈನ್ ಖಾತೆಯಿಂದ ಬಲವಂತವಾಗಿ 1,500 ರೂಪಾಯಿ ವರ್ಗಾವಣೆ ಮಾಡಿಸಿಕೊಂಡ ನಂತರವಷ್ಟೇ ಅವರನ್ನು ಅಲ್ಲಿಂದ ಹೋಗಲು ಬಿಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗುತ್ತಿದ್ದು, ಸಂತ್ರಸ್ತೆಯ ಗುರುತು ಬಹಿರಂಗಪಡಿಸಿ ವಿಡಿಯೋ ಹಂಚಿಕೊಂಡವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುತ್ತಿದೆ.
ಬಿಹಾರ ಸರ್ಕಾರದ ವಿರುದ್ಧ ತೇಜಸ್ವಿ ಯಾದವ್ ವಾಗ್ದಾಳಿ
ಈ ವೈರಲ್ ವಿಡಿಯೋವನ್ನು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ಆರ್ಜೆಡಿ ನಾಯಕ ತೇಜಸ್ವಿ ಯಾದವ್, ಬಿಜೆಪಿ-ಜೆಡಿಯು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಿಹಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹಳಿ ತಪ್ಪಿದೆ. ಅದು ಸಾವು-ಬದುಕಿನ ನಡುವೆ ಹೋರಾಡುತ್ತಿದೆ” ಎಂದು ಅವರು ವೀಡಿಯೋ ಸಮೇತ ಟೀಕಿಸಿದ್ದಾರೆ.
“ಜಮೂಯಿ ಮತ್ತು ಸಮಸ್ತಿಪುರದ ಘಟನೆಗಳ ಬೆನ್ನಲ್ಲೇ, ಈಗ ಬಂಕಾದ ಐತಿಹಾಸಿಕ ಮಂದಾರ ಪರ್ವತದಲ್ಲೂ ಅಪ್ರಾಪ್ತ ಬಾಲಕಿಯ ಮೇಲೆ ಅಸಭ್ಯ ವರ್ತನೆ ಹಾಗೂ ಹಲ್ಲೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಮೃಗಗಳನ್ನು ಯಾವಾಗ ಬಂಧಿಸಲಾಗುತ್ತದೆ?” ಎಂದು ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ. ಜೊತೆಗೆ, ಹಿಂದಿನ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ತೆಗೆದುಕೊಂಡ ಕ್ರಮಗಳ ಕುರಿತಾಗಿಯೂ ಅವರು ಸರ್ಕಾರಕ್ಕೆ ಸವಾಲು ಎಸೆದಿದ್ದಾರೆ.
ವಾರದಲ್ಲಿ ಸರಣಿ ಕಿರುಕುಳ ಘಟನೆಗಳು
ಬಿಹಾರದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ. ಜಮೂಯಿಯಲ್ಲಿ ಕೋಚಿಂಗ್ ಸೆಂಟರ್ ನಿಂದ ವಾಪಸಾಗುತ್ತಿದ್ದ ವಿದ್ಯಾರ್ಥಿನಿಗೆ ದಾರಿಯಲ್ಲಿ ಕಿರುಕುಳ ನೀಡಿದ ಪ್ರಕರಣದಲ್ಲಿ ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಪ್ರಮುಖ ಆರೋಪಿಗಳು ಗಾಯಗೊಂಡಿದ್ದು, ಒಟ್ಟು ಐವರನ್ನು ಬಂಧಿಸಲಾಗಿದೆ. ಅದೇ ರೀತಿ ದರ್ಭಾಂಗಾದ ಕೀರತ್ಪುರ ಗ್ರಾಮದಲ್ಲೂ ಶಾಲೆಗೆ ತೆರಳುತ್ತಿದ್ದ ಬಾಲಕಿಯ ದುಪಟ್ಟಾ ಎಳೆದು ಕಿರುಕುಳ ನೀಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಪೋಕ್ಸೋ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ : ಸೂರ್ಯವಂಶಿಗೆ ನ್ಯೂಜಿಲೆಂಡ್ನಲ್ಲಿ ಕಠಿಣ ಸವಾಲು ; ವೇಗ..ಬೌನ್ಸ್ ಹೇಗೆ ಆಡ್ತಾರೆ ನೋಡ್ಬೇಕು ಎಂದ ವಾಲ್ಟರ್!



















