ಬೆಂಗಳೂರು : ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿ ಮತ್ತು ಅದರ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಉಂಟಾಗುತ್ತಿರುವ ಆತಂಕದ ನಡುವೆ ಪ್ರಧಾನಿ ಮೋದಿ ದೇಶದ ಜನತೆಗೆ ಹಲವು ಮುನ್ನೆಚ್ಚರಿಕಾ ಸಲಹೆಗಳನ್ನು ನೀಡಿದ್ದಾರೆ. ಇಂಧನ ಬಳಕೆ ಕಡಿಮೆ ಮಾಡುವುದು, ಸಾಧ್ಯವಾದಷ್ಟು ವರ್ಕ್ ಫ್ರಂ ಹೋಂಗೆ ಉತ್ತೇಜನ ನೀಡುವುದು ಸೇರಿದಂತೆ ಶಾಲೆಗಳಲ್ಲೂ ಆನ್‌ಲೈನ್ ತರಗತಿಗಳ ಬಗ್ಗೆ ಚರ್ಚೆ ಆರಂಭವಾಗುವಂತೆ ಪ್ರಧಾನಿ ಸಂದೇಶ ನೀಡಿರುವುದು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ.
ಕೊವಿಡ್ ಸಮಯದಂತೆ ಮತ್ತೆ ಶಾಲೆಗಳಲ್ಲಿ ಆನ್‌ಲೈನ್ ಕ್ಲಾಸ್ ಜಾರಿಯಾಗುತ್ತಾ ಎನ್ನುವ ಪ್ರಶ್ನೆ ಶಿಕ್ಷಣ ವಲಯದಲ್ಲಿ ಮೂಡಿದೆ. ಈಗಾಗಲೇ ಬೇಸಿಗೆ ರಜೆ ಇರುವುದರಿಂದ ಶಾಲೆಗಳು ಆರಂಭವಾಗಲು ಇನ್ನೂ ಸುಮಾರು 20 ದಿನಗಳು ಬಾಕಿ ಇವೆ. ಇದೇ ವೇಳೆಯಲ್ಲಿ ಆನ್‌ಲೈನ್ ಶಿಕ್ಷಣದ ಕುರಿತು ಪ್ರಧಾನಿ ನೀಡಿರುವ ಸಲಹೆಗೆ ಖಾಸಗಿ ಶಾಲಾ ಸಂಘಟನೆಗಳು ಹಾಗೂ ಶಿಕ್ಷಣ ತಜ್ಞರಿಂದ ವಿರೋಧ ವ್ಯಕ್ತವಾಗಿದೆ.
ಈ ಬಗ್ಗೆ ಖಾಸಗಿ ಶಾಲಾ ಒಕ್ಕೂಟ ‘ಕೃಪಾ’ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾತನಾಡಿ, “ಕೊವಿಡ್ ಸಮಯದಲ್ಲಿ ಮಕ್ಕಳು ಭಾರೀ ಮಟ್ಟದಲ್ಲಿ ಶಿಕ್ಷಣ ಹಿನ್ನಡೆ ಅನುಭವಿಸಿದ್ದಾರೆ. ಶಾಲಾ ಶಿಕ್ಷಣ ಹಂತದಲ್ಲಿ ಆನ್‌ಲೈನ್ ತರಗತಿಗಳು ಗುಣಮಟ್ಟದ ಕಲಿಕೆಗೆ ಧಕ್ಕೆಯುಂಟು ಮಾಡುತ್ತವೆ. ಚಿನ್ನ ಖರೀದಿ ಕಡಿಮೆ ಮಾಡುವುದು, ಪೆಟ್ರೋಲ್-ಡಿಸೇಲ್ ಬಳಕೆ ಮಿತಿಗೊಳಿಸುವಂತೆ ನೀಡಿದ ಸಲಹೆಗಳನ್ನು ನಾವು ಸ್ವಾಗತಿಸುತ್ತೇವೆ. ಆದರೆ ಶಾಲೆಗಳಲ್ಲಿ ಮತ್ತೆ ಆನ್‌ಲೈನ್ ಕ್ಲಾಸ್ ನಡೆಸುವ ವಿಚಾರವನ್ನು ಒಪ್ಪಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಇನ್ನೊಂದೆಡೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಕೂಡ ಪ್ರಧಾನಿ ಸಲಹೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. “ಆನ್‌ಲೈನ್ ಶಿಕ್ಷಣ ಉನ್ನತ ಶಿಕ್ಷಣ ಅಥವಾ ಹೆಚ್ಚುವರಿ ತರಬೇತಿಗೆ ಸಹಾಯಕವಾಗಬಹುದು. ಆದರೆ ಪ್ರಾಥಮಿಕ ಮತ್ತು ಶಾಲಾ ಶಿಕ್ಷಣದಲ್ಲಿ ಇದು ಮಕ್ಕಳ ಕಲಿಕೆ ಸಾಮರ್ಥ್ಯಕ್ಕೆ ಹಾನಿ ಉಂಟುಮಾಡುತ್ತದೆ. ಕೊವಿಡ್ ಸಮಯದಲ್ಲಿ ಆಗಿದ್ದ ಅನ್ಯಾಯ ಇನ್ನೂ ಸಂಪೂರ್ಣ ಸರಿಯಾಗಿಲ್ಲ. ಇದೇ ರೀತಿಯಲ್ಲಿ ಮತ್ತೆ ಆನ್‌ಲೈನ್ ಶಿಕ್ಷಣ ಜಾರಿಗೊಳಿಸುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊವಿಡ್ ಕಾಲದಲ್ಲಿ ಮಕ್ಕಳ ಕಲಿಕೆಯಲ್ಲಿ ಉಂಟಾದ ಹಿನ್ನಡೆ, ಮೊಬೈಲ್ ಹಾಗೂ ಇಂಟರ್‌ನೆಟ್ ಸೌಲಭ್ಯಗಳ ಕೊರತೆ, ವಿದ್ಯಾರ್ಥಿಗಳ ಮಾನಸಿಕ ಒತ್ತಡ ಮುಂತಾದ ಸಮಸ್ಯೆಗಳು ಮತ್ತೆ ಮರುಕಳಿಸುವ ಆತಂಕವೂ ಶಿಕ್ಷಣ ತಜ್ಞರಲ್ಲಿ ವ್ಯಕ್ತವಾಗುತ್ತಿದೆ. ಆದರೆ ಇನ್ನೊಂದೆಡೆ ಜಾಗತಿಕ ಬಿಕ್ಕಟ್ಟು ಪರಿಸ್ಥಿತಿಯ ನಡುವೆಯೂ ಶಿಕ್ಷಣ ಸಂಪೂರ್ಣ ಸ್ಥಗಿತವಾಗಬಾರದು ಎಂಬ ಕಾರಣಕ್ಕಾಗಿ ತಾತ್ಕಾಲಿಕವಾಗಿ ಆನ್‌ಲೈನ್ ವ್ಯವಸ್ಥೆ ಪರಿಗಣನೆಗೆ ಬರಬಹುದು ಎಂಬ ಚರ್ಚೆಯೂ ನಡೆಯುತ್ತಿದೆ. ಒಟ್ಟಿನಲ್ಲಿ ಪ್ರಧಾನಿ ಸಂದೇಶದ ಬಳಿಕ ರಾಜ್ಯದಲ್ಲೂ ಮತ್ತೆ ಆನ್‌ಲೈನ್ ಕ್ಲಾಸ್ ಆರಂಭವಾಗುತ್ತಾ ಎನ್ನುವ ಪ್ರಶ್ನೆ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : ಕೃಣಾಲ್ ಪಾಂಡ್ಯ ಸಿಡಿಸಿದ ‘ಮ್ಯಾಚ್ ವಿನ್ನಿಂಗ್’ ಅರ್ಧಶತಕವೇ IPLನ ಶ್ರೇಷ್ಠ ಇನ್ನಿಂಗ್ಸ್ ಎಂದ ಕೊಹ್ಲಿ!



















