ಚಿಕ್ಕಬಳ್ಳಾಪುರ: ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಭಾರೀ ಸಂಚು ರೂಪಿಸುತ್ತಿದ್ದ ಆರೋಪದ ಮೇಲೆ ಶಬ್ಬೀರ್ ಎಂಬ ಯುವಕನನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರು ಬಿಎನ್‌ಎಸ್ ಕಾಯ್ದೆಯಡಿ ಬಂಧಿಸಿದ್ದಾರೆ. ಜೊತೆಗೆ ಉತ್ತರಭಾರತ ಮೂಲದ ಸಲ್ಮಾನ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿಗಳು ಟೆಲಿಗ್ರಾಂ ಆ್ಯಪ್‌ನಲ್ಲಿ ಗ್ರೂಪ್ ಸೃಷ್ಟಿಸಿ, ಶ್ರೀಮಂತರ ಅಪಹರಣದ ಮೂಲಕ ಹಣ ಸಂಗ್ರಹಿಸಿ ದೇಶದ ಪ್ರಭಾವಿ ಮೂವರು ನಾಯಕರ ಹತ್ಯೆ ಹಾಗೂ ಭಯೋತ್ಪಾದನೆ ಸೃಷ್ಟಿಸಲು ಪ್ರತಿದಿನ ಚರ್ಚಿಸುತ್ತಿದ್ದರು ಎಂಬುದು ತಿಳಿದುಬಂದಿದೆ.
ಸದ್ಯ ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಶ್ರೀಮಂತರನ್ನು ಅಪಹರಿಸಿ ಹಣ ಸಂಗ್ರಹಿಸಿ, ಆ ಹಣವನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಹೊಂದಿಸಬೇಕು. ಹಣ ಮಾಡಿದ ನಂತರ ದೇಶದಲ್ಲಿ ಭಯೋತ್ಪಾದನೆ ಸೃಷ್ಟಿಸಿ, ಅರಾಜಕತೆ ಸೃಷ್ಟಿ ಮಾಡಬೇಕು ಅಂತಲೂ ಚರ್ಚೆ ನಡೆದಿತ್ತು ಎಂಬುದೂ ಗೊತ್ತಾಗಿದೆ.
ಇದಲ್ಲದೆ, ದೇಶದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಕುರಿತು ಟೆಲಿಗ್ರಾಂ ಗ್ರೂಪ್‌ನಲ್ಲಿ ಚರ್ಚೆ ನಡೆದಿತ್ತು. ದೇಶದ ವಿವಿಧ ಭಾಗಗಳಲ್ಲಿನ ಹಲವು ಮಂದಿ ಈ ಗ್ರೂಪ್‌ನ ಸದಸ್ಯರಾಗಿದ್ದರು. ಅವರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 113 ಅಡಿ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಬಳ್ಳಾಪುರ ನಗರ ಪೊಲೀಸರು, ಬಂಧಿತ ಶಬ್ಬೀರ್ ಹಾಗೂ ಸಲ್ಮಾನ್‌ನ ವಿಚಾರಣೆ ನಡೆಸುತ್ತಿದ್ದಾರೆ. ಟೆಲಿಗ್ರಾಂ ಗ್ರೂಪ್‌ನಲ್ಲಿನ ಚರ್ಚೆಗಳು, ಸದಸ್ಯರ ಸಂಪರ್ಕ ಹಾಗೂ ಸಂಚಿನ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಬಿಜೆಪಿ ಉಸ್ತುವಾರಿ ಬದಲಾವಣೆ ಬೆನ್ನಲ್ಲೇ ದೆಹಲಿಗೆ ಹಾರಿದ ವಿಜಯೇಂದ್ರ..!


















