ಬೆಂಗಳೂರು : ಕನಕಪುರ ಮುಖ್ಯರಸ್ತೆಯಲ್ಲಿರುವ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಆಶ್ರಮದ ಸುತ್ತಮುತ್ತಲಿನ ಸರ್ಕಾರಿ ಹಾಗೂ ದಲಿತರಿಗೆ ಸೇರಿದ ಭೂಮಿಯ ವಿಚಾರದಲ್ಲಿ ಸಮಗ್ರ ತನಿಖೆ ನಡೆಸಿ, ನೊಂದವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಸಮತಾ ಸೈನಿಕ ದಳದ (SSD) ವತಿಯಿಂದ ಆಗಸ್ಟ್ 17ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10 ಗಂಟೆಗೆ ಆರ್ಟ್ ಆಫ್ ಲಿವಿಂಗ್ ಆಶ್ರಮದ ಮುಂಭಾಗದಿಂದ ಬೃಹತ್ ಪಾದಯಾತ್ರೆ ಆರಂಭವಾಗಲಿದ್ದು, SSD ಯುವಘಟಕದ ರಾಜ್ಯಾಧ್ಯಕ್ಷ ದಲಿತ ಚಳುವಳಿ ಡಾ. ಎಂ.ನಾಗೇಶ್ ಹಾಗೂ ಕಾರ್ಯಾಧ್ಯಕ್ಷ ಡಾ.ಜಿ. ಗೋವಿಂದಯ್ಯ ನೇತೃತ್ವ ವಹಿಸಲಿದ್ದಾರೆ.

ಸ್ವಾತಂತ್ರ್ಯ ಬಂದು 80 ವರ್ಷಗಳು ಹಾಗೂ ಸಂವಿಧಾನ ಜಾರಿಗೆ ಬಂದು 76 ವರ್ಷಗಳು ಕಳೆದರೂ ದಲಿತರು, ಬಡವರು ಮತ್ತು ಶೋಷಿತ ವರ್ಗಗಳ ಮೂಲಭೂತ ಸಮಸ್ಯೆಗಳಿಗೆ ನಿರೀಕ್ಷಿತ ಪರಿಹಾರ ಸಿಕ್ಕಿಲ್ಲ. ಸಾಮಾಜಿಕ ನ್ಯಾಯ, ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆ, ರಾಜಕೀಯ ಸಮಾನತೆ ಹಾಗೂ ‘ಸರ್ವರಿಗೂ ಸಮಪಾಲು’ ಎಂಬ ಸಂವಿಧಾನದ ಆಶಯಗಳು ಸಂಪೂರ್ಣವಾಗಿ ಜಾರಿಯಾಗಬೇಕು ಎಂದು ಸಮತಾ ಸೈನಿಕ ದಳ ಆಗ್ರಹಿಸಿದೆ.
ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಆಶ್ರಮದ ಸುತ್ತಮುತ್ತ ಸುಮಾರು 140 ಎಕರೆ ಸರ್ಕಾರಿ ಜಮೀನು ಹಾಗೂ 150 ಎಕರೆ ದಲಿತರಿಗೆ ಸಂಬಂಧಿಸಿದ ಭೂಮಿ ಕಬಳಿಕೆಯಾಗಿದೆ ಎಂಬ ಆರೋಪಗಳಿದ್ದು, ಈ ಬಗ್ಗೆ ಸರ್ಕಾರ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು SSD ಒತ್ತಾಯಿಸಿದೆ. ಸರ್ಕಾರಿ ಸ್ವತ್ತನ್ನು ಸರ್ಕಾರದ ವಶಕ್ಕೆ ಪಡೆದು, ದಲಿತರಿಗೆ ಸೇರಿದ ಸ್ವತ್ತನ್ನು ಸಂಬಂಧಪಟ್ಟವರಿಗೆ ಮರಳಿ ನೀಡಬೇಕು ಎಂಬುದು ಸಂಘಟನೆಯ ಪ್ರಮುಖ ಬೇಡಿಕೆಯಾಗಿದೆ.
ವಿಶೇಷವಾಗಿ ಬಿ.ಎಂ. ಕಾವಲು ಗ್ರಾಮದ ಸರ್ವೆ ನಂಬರ್ 132/P2ರಲ್ಲಿ ಸುಮಾರು 80 ವರ್ಷದ ದಲಿತ ಮಹಿಳೆ ರಂಗಮ್ಮ ಅವರಿಗೆ ಸೇರಿದ ಜಮೀನಿನ ವಿಚಾರವನ್ನು ಸಂಘಟನೆ ಪ್ರಸ್ತಾಪಿಸಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಮೀನನ್ನು ಗುರುತಿಸಿರುವುದಾಗಿ ತಿಳಿದುಬಂದಿದ್ದರೂ, ಜಮೀನಿಗೆ ತೆರಳಲು ಸೂಕ್ತ ದಾರಿ ಕಲ್ಪಿಸುವ ಸಮಸ್ಯೆ ಮುಂದುವರಿದಿದೆ ಎಂದು SSD ಆರೋಪಿಸಿದೆ. ರಂಗಮ್ಮ ಅವರಿಗೆ ನ್ಯಾಯ ಹಾಗೂ ಅವರ ಜಮೀನಿಗೆ ಪ್ರವೇಶದಾರಿ ಕಲ್ಪಿಸುವಂತೆ ಒತ್ತಾಯಿಸಿ ಜುಲೈ 17ರಿಂದ 28 ದಿನಗಳ ಕಾಲ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು ಎಂದು ಸಂಘಟನೆ ತಿಳಿಸಿದೆ.
ಈ ಹೋರಾಟದ ಮುಂದುವರಿದ ಭಾಗವಾಗಿ ಆಗಸ್ಟ್ 17ರಂದು ಆರ್ಟ್ ಆಫ್ ಲಿವಿಂಗ್ ಆಶ್ರಮದ ಮುಂಭಾಗದಿಂದ ವಿಧಾನಸೌಧದವರೆಗೆ ಬೃಹತ್ ಪಾದಯಾತ್ರೆ ನಡೆಸಲಾಗುತ್ತಿದೆ. ದಲಿತಪರ, ರೈತಪರ, ಪ್ರಗತಿಪರ, ಕನ್ನಡಪರ, ಮಹಿಳಾಪರ ಹಾಗೂ ಸಾಮಾಜಿಕ ನ್ಯಾಯಪರ ಹೋರಾಟಗಾರರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು SSD ತಿಳಿಸಿದೆ. ದಲಿತರ ಭೂಮಿ ಕುರಿತು ಸಮಗ್ರ ತನಿಖೆ, ರಂಗಮ್ಮ ಅವರ ಜಮೀನಿನ ಸಮಸ್ಯೆ ಪರಿಹಾರ, ಸೂಕ್ತ ಪ್ರವೇಶದಾರಿ ಹಾಗೂ ನೊಂದ ದಲಿತರು ಮತ್ತು ಬಡವರಿಗೆ ಕಾನೂನುಬದ್ಧ ನ್ಯಾಯ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಸಂಘಟನೆ ಹೇಳಿದೆ.
ಸರ್ಕಾರವು ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದ ಆಶಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂಬುದು ಹೋರಾಟಗಾರರ ಆಗ್ರಹವಾಗಿದೆ. “ದಲಿತರ ಭೂಮಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ, ಸಂವಿಧಾನದ ಆಶಯಗಳಿಗಾಗಿ” ನಡೆಯುತ್ತಿರುವ ಈ ವಿಧಾನಸೌಧ ಚಲೋದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸುವಂತೆ ಸಮತಾ ಸೈನಿಕ ದಳ ಮನವಿ ಮಾಡಿದೆ.
ಇದನ್ನೂ ಓದಿ : EMI ಕಟ್ಟದಿದ್ದರೂ ಫೋನ್ ಸೀಜ್ ಮಾಡಬಹುದಾ? ಹೊಸ ನಿಯಮ ತಿಳಿಯಿರಿ



















