ಬೆಂಗಳೂರು : ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಸಕ ಸಿ.ಕೆ ರಾಮಮೂರ್ತಿ ಅವರ ಆಪ್ತ ಸೋಮಶೇಖರ್ ರೆಡ್ಡಿ ಮೇಲೆ ಐವರು ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜೂನ್ 24ರಂದು ಸಂಜೆ ಜಯನಗರ 9ನೇ ಬ್ಲಾಕ್‌ನಲ್ಲಿರುವ ಕುಡಿಯುವ ನೀರಿನ ಘಟಕ (ವಾಟರ್ ಪ್ಲಾಂಟ್) ಬಳಿ ಈ ಘಟನೆ ನಡೆದಿದೆ. ವಾಟರ್ ಪ್ಲಾಂಟ್ ನಡೆಸುತ್ತಿದ್ದ ಸೋಮಶೇಖರ್ ರೆಡ್ಡಿ ಘಟಕದ ಬಳಿ ಬಂದಾಗ, ಆಟೋದಲ್ಲಿ ಮಾರಕಾಸ್ತ್ರಗಳೊಂದಿಗೆ ಬಂದಿದ್ದ ಐವರ ತಂಡ ಕಿರಿಕ್ ತೆಗೆದಿದೆ. ಮಾತಿಗೆ ಮಾತು ಬೆಳೆದು ಆರೋಪಿಗಳು ಹೊಟ್ಟೆ, ಎದೆ ಹಾಗೂ ಬೆನ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡ ಸೋಮಶೇಖರ್ ರೆಡ್ಡಿಯನ್ನು ಸ್ಥಳೀಯರು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಬಳಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಸಂಬಂಧ ಗಾಯಾಳು ಸೋಮಶೇಖರ್ ರೆಡ್ಡಿ ತಂದೆ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೊಲೆ ಮಾಡುವ ಉದ್ದೇಶದಿಂದಲೇ ಆರೋಪಿಗಳು ದಾಳಿ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ರವಿ, ಬಾಲು, ಪುಲಿ, ವಿಷ್ಣು ಹಾಗೂ ಶಂಕರ್ ಸೇರಿ ಐವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸೋಮಶೇಖರ್ ರೆಡ್ಡಿ ಜಿಬಿಎ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದರು. ಈ ಹಿನ್ನೆಲೆ ರಾಜಕೀಯ ದ್ವೇಷದ ಕಾರಣಕ್ಕೆ ಹಲ್ಲೆ ನಡೆದಿದೆಯೇ ಎಂಬ ಶಂಕೆಯೂ ವ್ಯಕ್ತವಾಗಿದ್ದು, ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಇಂದಿನಿಂದ ಬೆಂಗಳೂರಲ್ಲಿ ಫುಟ್‌ಪಾತ್ ಒತ್ತುವರಿ ತೆರವಿನ ಮಹಾ ಕಾರ್ಯಾಚರಣೆ!



















