ಬೆಂಗಳೂರು : ಉದ್ಯೋಗಕ್ಕಾಗಿ ಅಲೆಯುತ್ತಿರುವ ನಿರುದ್ಯೋಗಿ ಯುವಕ-ಯುವತಿಯರನ್ನೇ ಗುರಿಯಾಗಿಸಿಕೊಂಡು ಎಂಎನ್‌ಸಿ ಕಂಪನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್‌ನ್ನು ಬೆಂಗಳೂರು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಆಂಧ್ರಪ್ರದೇಶದ ಎಂಎನ್‌ಸಿ ಕಂಪನಿಯಲ್ಲಿ ಉದ್ಯೋಗ ಕೊಡಿಸುತ್ತೇವೆ ಎಂದು ಹೇಳಿ ನಿರುದ್ಯೋಗಿಗಳನ್ನು ಸಂಪರ್ಕಿಸುತ್ತಿದ್ದರು. “ಒಮ್ಮೆ ಕೆಲಸ ಸಿಕ್ಕರೆ ನಿಮ್ಮ ಜೀವನವೇ ಸೆಟಲ್ ಆಗುತ್ತದೆ, ಪ್ರತಿ ವರ್ಷ ಸಂಬಳ ಹೆಚ್ಚಳ ಸಿಗುತ್ತದೆ” ಎಂದು ನಂಬಿಸಿ ಉದ್ಯೋಗಾಕಾಂಕ್ಷಿಗಳನ್ನು ಸೆಳೆಯುತ್ತಿದ್ದರು. ನಂತರ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಪರೀಕ್ಷೆ ಬರೆಯಲೇಬೇಕು ಎಂದು ಹೇಳಿ ಪ್ರತಿಯೊಬ್ಬರಿಂದ ₹2 ಸಾವಿರದಿಂದ ₹3 ಸಾವಿರವರೆಗೆ ಪರೀಕ್ಷಾ ಶುಲ್ಕ ವಸೂಲಿ ಮಾಡುತ್ತಿದ್ದರು.
ಒಂದೇ ಬಾರಿ 30ರಿಂದ 40 ಮಂದಿಯನ್ನು ಕರೆಸಿ ಪರೀಕ್ಷೆ ನಡೆಸುತ್ತಿದ್ದ ಆರೋಪಿಗಳು, ಪರೀಕ್ಷೆ ಮುಗಿದ ಬಳಿಕ “ನೀವು ಆಯ್ಕೆಯಾಗಿಲ್ಲ, ಬೇರೆ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ” ಎಂದು ಹೇಳಿ ಕೈತೊಳೆದುಕೊಳ್ಳುತ್ತಿದ್ದರು. ಕೇವಲ ಎರಡು-ಮೂರು ಸಾವಿರ ರೂಪಾಯಿ ಹಣವಾಗಿದ್ದರಿಂದ ಹೆಚ್ಚಿನವರು ದೂರು ನೀಡದೆ ಸುಮ್ಮನಾಗುತ್ತಿದ್ದರು. ಇದೇ ಅಂಶವನ್ನು ದುರುಪಯೋಗಪಡಿಸಿಕೊಂಡು ಆರೋಪಿಗಳು ಇದನ್ನೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡಿದ್ದರು.
ಕಳೆದ ಮೂರು ವರ್ಷಗಳಿಂದ ಇದೇ ರೀತಿಯ ವಂಚನೆ ನಡೆಸುತ್ತಿದ್ದ ಆರೋಪಿಗಳು, ಇದಕ್ಕಾಗಿ ಪ್ರತ್ಯೇಕ ಕಚೇರಿ ಕೂಡ ತೆರೆದು ನಕಲಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದರು ಎನ್ನಲಾಗಿದೆ. ಈ ರೀತಿ ಸಾವಿರಾರು ನಿರುದ್ಯೋಗಿಗಳಿಗೆ ವಂಚನೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ತನಿಖೆ ವೇಳೆ ಮತ್ತಷ್ಟು ಮಾಹಿತಿ ಹೊರಬರುವ ಸಾಧ್ಯತೆಯಿದೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ವೈಟ್‌ಫೀಲ್ಡ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ವಂಚನೆ ಜಾಲದ ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಗ್ಯಾಂಗ್ ಸಂಪರ್ಕ ಹೊಂದಿರುವ ಇತರ ಆರೋಪಿಗಳ ಬಗ್ಗೆ ಕೂಡ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಮನುಷ್ಯನ ಬುರುಡೆ ಇಟ್ಟು ವಾಮಾಚಾರ ಶಂಕೆ ; ಬೆಚ್ಚಿಬಿದ್ದ ಗೋಳೂರು ಗ್ರಾಮಸ್ಥರು!



















